ಬೆಂಗಳೂರು: ದೇಶದ ಎಲ್ಲ ಕ್ಷೇತ್ರಗಳನ್ನೂ ಖಾಸಗೀಕರಣ ಮಾಡಲಾಗುತ್ತಿದೆ. ಮುಂದೊಂದು ದಿನ ಸಂಸತ್ ನಿರ್ವಹಣೆಯನ್ನೂ ಹೊರಗುತ್ತಿಗೆ ನೀಡುವ ಸಾಧ್ಯತೆ ಇದೆ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಹೇಳಿದರು.
ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ ಬುಧವಾರ ಹಮ್ಮಿಕೊಂಡಿದ್ದ ‘ಸಂವಿಧಾನದ ಆಶಯಗಳು’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತದ ಪ್ರತಿ ಹಳ್ಳಿಯೂ ವಿಭಿನ್ನ, ಹಲವು ಜಾತಿ, ಧರ್ಮ, ಭಾಷೆಯ ಜನರು ಇರುವ ದೇಶದಲ್ಲಿ ಎಲ್ಲರಲ್ಲೂ ಭಾರತೀಯರು ಎನ್ನುವ ಭಾವನೆ ನೆಲೆಸಲು, ಶಾಂತಿ, ಸೌಹಾರ್ದದ ಬದುಕು ಸಾಗಿಸಲು ಸಂವಿಧಾನವೇ ಕಾರಣ. ಸ್ವಾತಂತ್ರ್ಯ ಚಳವಳಿಯ ಮೌಲ್ಯಗಳು ಹಾಗೂ ಸ್ವಾತಂತ್ರ್ಯ ಪೂರ್ವದಲ್ಲೇ ರಚನೆಯಾದ ಸಂವಿಧಾನ ರಚನಾ ಸಭೆಯ ಆಶಯಗಳ ಮಿಳಿತ, ಅಂಬೇಡ್ಕರ್ ಅವರಂತಹ ಪ್ರತಿಭಾವಂತರ ಶ್ರಮದ ಫಲವಾಗಿ ವಿಶ್ವದ ಶ್ರೇಷ್ಠ ಸಂವಿಧಾನ ಹೊಂದಲು ಸಾಧ್ಯವಾಯಿತು ಎಂದರು.
ಸ್ವಾತಂತ್ರ್ಯಪೂರ್ವದ ಯಾವ ಕಾಲಘಟ್ಟದಲ್ಲೂ ಅಖಂಡ ಭಾರತ ಎಂಬುದೇ ಇರಲಿಲ್ಲ. ಸ್ವಾತಂತ್ರ್ಯ ನಂತರ ಎಲ್ಲ ಸಂಸ್ಥಾನಗಳು ಒಗ್ಗೂಡಿ ಅಖಂಡ ಭಾರತ ನಿರ್ಮಾಣವಾಯಿತು. ಸಂವಿಧಾನ ಸಾಮಾಜಿಕ, ಆರ್ಥಿಕ ಸಮಾನತೆಯ ಆಶಯಗಳನ್ನು ಒಳಗೊಂಡಿದೆ. ಆದರೆ, ಸಂವಿಧಾನ ಜಾರಿಯಾಗಿ 74 ವರ್ಷಗಳು ಮುಗಿದರೂ, ಆಶಯಗಳು ಸಾಕಾರವಾಗಿಲ್ಲ ಎಂದರು.
‘ತಳ ವರ್ಗದ ಜನರೇ ಎಲ್ಲ ಕಾಲಘಟ್ಟದಲ್ಲೂ ಭೂಹೀನರು, ಶೋಷಿತರು, ಬಡವರಾಗಿ ಉಳಿದಿದ್ದಾರೆ. ಸಾಮಾಜಿಕ, ಸಾಂಸ್ಕೃತಿಕ ಅಸಮಾನತೆಗೆ ಜಾತಿ ವ್ಯವಸ್ಥೆಯೇ ಮೂಲ ಕಾರಣ. ಕಸುಬುಗಳ ಆಧಾರದಲ್ಲಿ ಜಾತಿಗಳು ಹುಟ್ಟಿಕೊಂಡವು. ಇಂದು ಕಸುಬುಗಳು ಬದಲಾದರೂ ಜಾತಿ ವ್ಯವಸ್ಥೆ ಬದಲಾಗಲಿಲ್ಲ’ ಎಂದು ಅವರು ಹೇಳಿದರು.
ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಪ್ರಾಸ್ತಾವಿಕ ಮಾತನಾಡಿದರು. ನಟ ಚೇತನ್ ಅಹಿಂಸಾ, ಜನಾಂದೋಲನ ಮಹಾಮೈತ್ರಿ ಕರ್ನಾಟಕದ ಅಧ್ಯಕ್ಷ ಎಸ್.ಆರ್.ಹಿರೇಮಠ, ರೈತ ಮುಖಂಡ ವೀರಸಂಗಯ್ಯ ಉಪಸ್ಥಿತರಿದ್ದರು. ಒಕ್ಕೂಟದ ಅಧ್ಯಕ್ಷ ಬಿ.ಚನ್ನಕೃಷ್ಣ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.