ADVERTISEMENT

ಕೋವಿಡ್‌ ಅಕ್ರಮ: ತನಿಖಾ ವರದಿಯಲ್ಲಿ ಉಲ್ಲೇಖ; ಸಚಿವ ಪ್ರಿಯಾಂಕ್ ಖರ್ಗೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2024, 15:51 IST
Last Updated 2 ಸೆಪ್ಟೆಂಬರ್ 2024, 15:51 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಪ್ರಜಾವಾಣಿ ವಾರ್ತೆ

ಬೆಂಗಳೂರು: ‘ಕೋವಿಡ್‌ ನಿರ್ವಹಣೆ ಹೆಸರಿನಲ್ಲಿ ಅಕ್ರಮ ನಡೆದಿರುವ ಬಗ್ಗೆ ನ್ಯಾಯಮೂರ್ತಿ ಡಿಕುನ್ಹಾ ತನಿಖಾ ಆಯೋಗದಲ್ಲಿ ಉಲ್ಲೇಖ ಇರುವುದು ಗೊತ್ತಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ಆಯೋಗ ಮಧ್ಯಂತರ ವರದಿ ನೀಡಿದೆ. ಕೋವಿಡ್‌ ನಿರ್ವಹಣೆಯ ಹೆಸರಿನಲ್ಲಿ ನಡೆದ ಬಹಳಷ್ಟು ಪ್ರಕ್ರಿಯೆಗಳಲ್ಲಿ ನಿಯಮ ಉಲ್ಲಂಘನೆ, ಅಧಿಕಾರಿಗಳಿಂದ ಲೋಪ ಹಾಗೂ ಅಕ್ರಮ ನಡೆದಿರುವ ಮಾಹಿತಿ ಇರುವುದು ಗೊತ್ತಾಗಿದೆ’ ಎಂದು ತಿಳಿಸಿದರು.

ADVERTISEMENT

‘ವರದಿಯಲ್ಲಿ ಏನಿದೆ ಎಂಬ ವಿಚಾರ ಅಧಿಕೃತವಾಗಿ ಗೊತ್ತಿಲ್ಲ. ಸಚಿವ ಸಂಪುಟ ಸಭೆಗೆ ವರದಿ ಬಂದಾಗಲಷ್ಟೇ ವಿವರ ಗೊತ್ತಾಗಲಿದೆ’ ಎಂದೂ ಅವರು ಹೇಳಿದರು.

‘ಒತ್ತಡ ಹಾಕಿ ಕೋವಿಡ್ ಹಗರಣ ವರದಿ ತರಿಸಿಕೊಂಡಿದ್ದಾರೆ’ ಎಂಬ ಮಾಜಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್‌, ‘ಒತ್ತಡ ಹಾಕಿ ತರಿಸಿಕೊಂಡರೆ ತಪ್ಪೇನಿದೆ. ಬೇಗ ತನಿಖೆ ಮುಗಿಸಿ ಎಂದು ತನಿಖಾ ಸಂಸ್ಥೆಗಳಿಗೆ ಹೇಳುವುದೂ ತಪ್ಪೇ’ ಎಂದು ಪ್ರಶ್ನಿಸಿದರು.

‘ಅಷ್ಟಕ್ಕೂ ಮಧ್ಯಂತರ ವರದಿ ಕೊಡಿ ಎಂದು ನಾವು ಒತ್ತಡ ಹಾಕಿಲ್ಲ. ಮಾಜಿ ಮುಖ್ಯಮಂತ್ರಿ, ಮಾಜಿ ಸಚಿವರ ಹೆಸರನ್ನು ನಾವು ಹೇಳಿದ್ದೇವೆಯೇ? ವರದಿಯಲ್ಲಿ ಏನಿದೆ ನಮಗೆ ಗೊತ್ತಿಲ್ಲ. ಏನಿದೆ ಎಂದು ಅವರಿಗೆ ಹೇಗೆ ಗೊತ್ತಾಗುತ್ತದೆ’ ಎಂದರು.

‘ಬಿಜೆಪಿಯವರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡು ನೋಡುತ್ತಾರೆ. ಯಾರೊ ವಿಡಿಯೊ ಇದೆ ಅಂದಾಕ್ಷಣ ಯಾಕೆ ತಡೆಯಾಜ್ಞೆ ತರುತ್ತಾರೆ. ವರದಿ ಬಂದ ತಕ್ಷಣ ಕಾನೂನು ಹೋರಾಟ ಮಾಡುತ್ತೇವೆಂದು ಯಾಕೆ ಹೇಳುತ್ತಾರೆ’ ಎಂದು ಹೇಳಿದರು.

‘ವಿಧಾನ ಸಭೆಯಲ್ಲಿ ಮುಖ್ಯಮಂತ್ರಿ ಹೇಳಿದ್ದ 21 ಹಗರಣಗಳದ್ದು ಕೇವಲ ಟ್ರೈಲರ್. ಎಲ್ಲ ಹಗರಣಗಳನ್ನು ನಾವು ಕಾನೂನಾತ್ಮಕವಾಗಿ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ. ಕೆಲವು ಪ್ರಕರಣಗಳಲ್ಲಿ ಕೇಂದ್ರ ಸರ್ಕಾರದ ತನಿಖಾ ಏಜೆನ್ಸಿಗಳು ಕೈಯಾಡಿಸುತ್ತಿವೆ. ಬಿಜೆಪಿಯವರಿಗೂ ಇದರಲ್ಲಿ ಯಾವುದೇ ಅನುಮಾನ ಬೇಡ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.