ADVERTISEMENT

ಸನಾತನ ಧರ್ಮ: ಬಿ.ಎಲ್.ಸಂತೋಷ್ ಸೋಂಕಿನ ಪ್ರಶ್ನೆಗೆ ಪ್ರಿಯಾಂಕ್‌ ವಚನದ ಉತ್ತರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಸೆಪ್ಟೆಂಬರ್ 2023, 5:55 IST
Last Updated 5 ಸೆಪ್ಟೆಂಬರ್ 2023, 5:55 IST
<div class="paragraphs"><p>ಬಿ.ಎಲ್.ಸಂತೋಷ್ ಮತ್ತು ಪ್ರಿಯಾಂಕ್ ಖರ್ಗೆ</p></div>

ಬಿ.ಎಲ್.ಸಂತೋಷ್ ಮತ್ತು ಪ್ರಿಯಾಂಕ್ ಖರ್ಗೆ

   

ಬೆಂಗಳೂರು: ಡಿಎಂಕೆ ಮುಖಂಡ ದಯಾನಿಧಿ ಸ್ಟಾಲಿನ್ ಅವರ ಸನಾತನ ಧರ್ಮ ಕೊನೆಗಾಣಿಸುವ ಹೇಳಿಕೆಯನ್ನು ಬೆಂಬಲಿಸಿದ್ದ ಪ್ರಿಯಾಂಕ್ ಖರ್ಗೆಗೆ ಟ್ವೀಟ್ ಮಾಡಿದ್ದ ಬಿಜೆಪಿ ರಾಷ್ಟ್ರೀಯಾ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ‘ಯಾರಿಗಾದರೂ ಹೊಟ್ಟೆಯಲ್ಲಿ ಸೋಂಕಿದ್ದರೆ, ಅವರ ತಲೆ ಕತ್ತರಿಸುತ್ತೀರಾ?’ ಎಂದು ಸವಾಲೆಸೆದಿದ್ದಾರೆ.

ಮೈಕ್ರೊ ಬ್ಲಾಗಿಂಗ್‌ ಎಕ್ಸ್‌ನಲ್ಲಿ ಸಂತೋಷ್ ಟ್ವೀಟ್‌ಗೆ ಮರು ಪ್ರತಿಕ್ರಿಯೆ ನೀಡಿರುವ ಖರ್ಗೆ, ‘ದಯವಿಲ್ಲದ ಧರ್ಮ ಯಾವುದಯ್ಯಾ? ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ ದಯವೇ ಧರ್ಮದ ಮೂಲವಯ್ಯಾ ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ’ ಎಂಬ ಬಸವಣ್ಣನವರ ವಚನವನ್ನು ಉಲ್ಲೇಖಿಸಿದ್ದಾರೆ.

ADVERTISEMENT

‘ಬಿ.ಎಲ್.ಸಂತೋಷ್ ಅವರೇ, ಸೋಂಕಿಗೆ ಚಿಕಿತ್ಸೆ ಬೇಕು ಎಂಬ ನಿಮ್ಮ ವಾದವನ್ನು ನಾನು ಒಪ್ಪುತ್ತೇನೆ. ಆದರೆ ಸಾವಿರಾರು ವರ್ಷಗಳಿಂದ ಬಹಳಷ್ಟು ಸೋಂಕುಗಳು ಈ ಸಮಾಜವನ್ನು ಕಾಡುತ್ತಿವೆ. ಆ ಸೋಂಕುಗಳು ಈಗಲೂ ಮುಂದುವರಿದಿದ್ದು, ಮನುಷ್ಯರ ನಡುವೆ ತಾರತಮ್ಯ ಸೃಷ್ಟಿಸಿವೆ. ಮನುಷ್ಯರು ಎಂಬ ಘನತೆಯನ್ನು ನೀಡಲು ಕೆಲವರಿಗೆ ನಿರಾಕರಿಸಿವೆ’ ಎಂದಿದ್ದಾರೆ.

‘ನಾನು ನಿಮ್ಮಷ್ಟು ಬುದ್ಧವಂತನಲ್ಲ. ನೀವು ದಯವಿಟ್ಟು ನನಗೂ ಮಾರ್ಗದರ್ಶನ ಮಾಡಿ. ಇಂಥ ಸಮಾಜವನ್ನು ಸೃಷ್ಟಿಸಿದವರು ಯಾರು? ಒಬ್ಬರು ಮತ್ತೊಬ್ಬರಿಗಿಂತ ನೀತಿವಂತರು ಎಂದು ಮಾಡಿದವರು ಯಾರು? ಜಾತಿ ಆಧಾರದಲ್ಲಿ ಸಮಾಜವನ್ನು ವಿಭಜಿಸಿದವರು ಯಾರು? ಒಂದಷ್ಟು ಜನ ಮತ್ತಷ್ಟು ಜನರಿಗೆ ಏಕೆ ಅಸ್ಪೃಶ್ಯರು? ಈಗಲೂ ಕೆಲ ದೇವಾಲಯಗಳಿಗೆ ಕೆಲವರಿಗೆ ಏಕೆ ಪ್ರವೇಶವಿಲ್ಲ? ಮಹಿಳೆಯರು ಕೀಳುಭಾವದಲ್ಲೇ ಬದುಕುವಂತ ಪದ್ಧತಿಯನ್ನು ಜಾರಿಗೆ ತಂದವರು ಯಾರು? ಅಸಮಾನತೆ ಹಾಗೂ ದಬ್ಬಾಳಿಕೆಯ ಇರುವ ಜಾತಿ ಆಧಾರಿತ ಸಾಮಾಜಿಕ ರಚನೆಯನ್ನು ತಂದವರು ಯಾರು?’ ಎಂದು ಸಾಲು ಸಾಲು ಪ್ರಶ್ನೆಗಳನ್ನು ಖರ್ಗೆ ಮುಂದಿಟ್ಟಿದ್ದಾರೆ.

‘ಯಾರೂ ಯಾರ ತಲೆಯನ್ನೇ ಕಡಿಯಬೇಕು ಎಂಬ ಉದ್ದೇಶ ಹೊಂದಿಲ್ಲ. ಆದರೆ ಸಮಾನ ಹಕ್ಕು ಮತ್ತು ಘನತೆಯ ಬದುಕನ್ನು ಪ್ರತಿಯೊಬ್ಬ ಮನುಷ್ಯರಿಗೂ ನೀಡುವ ಮೂಲಕ ಸೋಂಕನ್ನು ಗುಣಪಡಿಸಬೇಕಿದೆ. ಇವೆಲ್ಲದಕ್ಕೂ ಔಷಧ ನಮ್ಮ ಸಂವಿಧಾನದಲ್ಲಿದೆ. ಆದರೆ ನೀವುಗಳು ಅದನ್ನು ವಿರೋಧಿಸುತ್ತಿದ್ದೀರಿ. ನೀವೂ ಕರ್ನಾಟಕದರೇ. ಬಸವಣ್ಣನವರು ಸಾರಿದ ಮಾನವತೆಯ ಸಾರವನ್ನು ಎಲ್ಲೆಡೆ ಹರಡು. ಅದರಿಂದ ಸಮ ಸಮಾಜದ ನಿರ್ಮಾಣ ಸಾಧ್ಯವಾಗಲಿದೆ’ ಎಂದು ಖರ್ಗೆ ಹೇಳಿದ್ದಾರೆ.

ಕೊನೆಯದಾಗಿ, ‘ಇವನಾರವ, ಇವನಾರವ, ಇವನಾರವ ನೆಂದೆನಿಸದಿರಯ್ಯಾ, ಇವ ನಮ್ಮವ, ಇವ ನಮ್ಮವ, ಇವ ನಮ್ಮವ ನೆಂದೆನಿಸಯ್ಯಾ ಕೂಡಲ ಸಂಗಮದೇವ ನಿಮ್ಮ ಮಹಾ ಮನೆಯ ಮಗನೆಂದೆನಿಸಯ್ಯಾ’ ಎಂಬ ಬಸವಣ್ಣನವರ ವಚನದ ಸಾಲುಗಳೊಂದಿಗೆ ಟ್ವೀಟ್ ಮುಗಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.