ADVERTISEMENT

ಜೋಶಿ ಸೋದರನಿಗೆ ₹200 ಕೋಟಿ ಯೋಜನೆ ಸಿಕ್ಕಿದ್ಹೇಗೆ: ಪ್ರಿಯಾಂಕ್‌ ಖರ್ಗೆ

ಟಿಕೆಟ್‌ ಹೆಸರಿನಲ್ಲಿ ವಂಚನೆ ಪ್ರಕರಣ: ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 15:14 IST
Last Updated 19 ಅಕ್ಟೋಬರ್ 2024, 15:14 IST
ಪ್ರಿಯಾಂಕ್‌ ಖರ್ಗೆ
ಪ್ರಿಯಾಂಕ್‌ ಖರ್ಗೆ   

ಬೆಂಗಳೂರು: ‘ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸೋದರ ಗೋಪಾಲ ಜೋಶಿ ಮಧ್ಯಮವರ್ಗದ ಸಾಮಾನ್ಯ ವ್ಯಕ್ತಿ. ಅಂತಹವರಿಗೆ ₹200 ಕೋಟಿ ಮೊತ್ತದ ಯೋಜನೆಗಳು ದೊರೆತದ್ದು ಹೇಗೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದರು.

ಟಿಕೆಟ್‌ ಹೆಸರಿನ ವಂಚನೆ ಪ್ರಕರಣದಲ್ಲಿ ತಮಗೂ ತಮ್ಮ ಸೋದರ ಗೋಪಾಲ ಜೋಶಿಗೂ ಸಂಬಂಧವಿಲ್ಲ ಎಂದು ಪ್ರಲ್ಹಾದ ಜೋಶಿ ನೀಡಿರುವ ಹೇಳಿಕೆ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ‘ಗೋಪಾಲ ಜೋಶಿ ಅವರು ₹200 ಕೋಟಿ ಮೊತ್ತದ ಬಿಲ್‌ಗಳಿಗೆ ಸಂಬಂಧಿಸಿದ ದಾಖಲೆಗಳನ್ನು ತೋರಿಸಿದ್ದಾರೆ ಎಂಬುದು ಎಫ್‌ಐಆರ್‌ನಲ್ಲಿ ದಾಖಲಾಗಿದೆ. ಪ್ರಲ್ಹಾದ ಜೋಶಿ ಮತ್ತು ಅಮಿತ್ ಶಾ ಹೆಸರಿನಲ್ಲಿ ವಂಚನೆ ನಡೆದಿದೆ. ಇದಕ್ಕೆ ಅವರು ಉತ್ತರದಾಯಿಯಲ್ಲವೇ?’ ಎಂದರು.

‘ಅವರಿಬ್ಬರ ಮಧ್ಯೆ ಸಂಬಂಧ ಇಲ್ಲ ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ ಅದಕ್ಕೂ ಮುನ್ನ ₹200 ಕೋಟಿ ಮೊತ್ತದ ಯೋಜನೆ ಯಾವುದು? ಯೋಜನೆ ಕೊಟ್ಟಿದ್ದು ಯಾರು? ಅಷ್ಟು ದೊಡ್ಡ ಮೊತ್ತದ ಯೋಜನೆಯ ಗುತ್ತಿಗೆ ಅವರಿಗೆ ಹೇಗೆ ದೊರೆಯಿತು ಎಂಬುದನ್ನು ವಿವರಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಹುಬ್ಬಳ್ಳಿಯಲ್ಲಿ ಬಿಜೆಪಿ ಟಿಕೆಟ್ ಮಾರಾಟ–ಹರಾಜು ಆರೋಪ ಹೊಸದೇನಲ್ಲ. ಈ ಹಿಂದೆಯೂ ಆಗಿದೆ. ಜೇವರ್ಗಿ ಮತ್ತು ಚಿತ್ತಾಪುರ ಬಿಜೆಪಿ ಟಿಕೆಟ್‌ಗಳು ಮಾರಾಟವಾಗಿವೆ ಎಂಬ ಆರೋಪ ಇತ್ತು. ಚೈತ್ರಾ ಕುಂದಾಪುರ ಪ್ರಕರಣದಲ್ಲೂ ಸಹ ಟಿಕೆಟ್‌ ಹೆಸರಿನಲ್ಲಿ ವಂಚನೆ ನಡೆದಿತ್ತು. ಇಲ್ಲಿ ಬಿಜೆಪಿ, ಅಮಿತ್‌ ಶಾ ಹೆಸರು ಮತ್ತು ಅವರ ಆಪ್ತ ಸಹಾಯಕನ ಹೆಸರೂ ಬಂದಿದೆ. ಅಮಿತ್ ಶಾ ಅವರಿಗೆ ಹಣ ಯಾರು ತಲುಪಿಸಿದರು, ಹೇಗೆ ತಲುಪಿಸಿದರು ಎಂಬುದು ತನಿಖೆಯಾಗಬಾರದೇ’ ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್ ನಾಯಕರ ವಿರುದ್ಧ ಮಾತ್ರ ಇ.ಡಿ, ಸಿಬಿಐ, ಆದಾಯ ತೆರಿಗೆ ಇಲಾಖೆ ತನಿಖೆ ನಡೆಸುತ್ತವೆ. ಬಿಜೆಪಿ ನಾಯಕರ ವಿರುದ್ಧದ ಪ್ರಕರಣದಲ್ಲಿ ತನಿಖೆ ಏಕೆ ನಡೆಯುವುದಿಲ್ಲ. ₹200 ಕೋಟಿಯ ಹೆಸರಿನಲ್ಲಿ ವಂಚನೆ ನಡೆದಿದೆ. ಆದಾಯ ತೆರಿಗೆ ಇಲಾಖೆ ಏಕೆ ಪ್ರಕರಣ ದಾಖಲಿಸಿಕೊಂಡಿಲ್ಲ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.