ADVERTISEMENT

ಮುನಿರತ್ನ, ಮನಿರತ್ನಗಳ ಬಗ್ಗೆ ಮೋದಿ ಮೌನವೇಕೆ: ಪ್ರಿಯಾಂಕ್‌

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2024, 16:03 IST
Last Updated 20 ಸೆಪ್ಟೆಂಬರ್ 2024, 16:03 IST
<div class="paragraphs"><p> ಸಚಿವ ಪ್ರಿಯಾಂಕ್‌ ಖರ್ಗೆ</p></div>

ಸಚಿವ ಪ್ರಿಯಾಂಕ್‌ ಖರ್ಗೆ

   

ನವದೆಹಲಿ: ‘ಕರ್ನಾಟಕದಲ್ಲಿ ಗಣಪತಿ ವಿಸರ್ಜನೆಯ ಸಣ್ಣ ಪ್ರಕರಣವನ್ನು ಮುಂದಿಟ್ಟುಕೊಂಡು ಹರಿಯಾಣದಲ್ಲಿ ರಾಜ್ಯದ ಜನರಿಗೆ ಅವಮಾನ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿಯ ಮುನಿರತ್ನ ಹಾಗೂ ‘ಮನಿ ರತ್ನ’ಗಳ ಬಗ್ಗೆ ಮೌನವಾಗಿರುವುದು ಏಕೆ’ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್‌ ಖರ್ಗೆ ಖಾರವಾಗಿ ಪ್ರಶ್ನಿಸಿದರು. 

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅತ್ಯಾಚಾರ ‍ಪ್ರಕರಣದ ಕುರಿತು ಮೋದಿ ಚಕಾರ ಎತ್ತಿಲ್ಲ. ಬಿ.ಎಸ್‌.ಯಡಿಯೂರಪ್ಪ ಪೋಕ್ಸೊ ಪ್ರಕರಣದ ಬಗ್ಗೆ ಪ್ರಸ್ತಾಪಿಸಿಲ್ಲ. ಗಂಗೇನಹಳ್ಳಿ ಡಿನೋಟಿಫಿಕೇಷನ್‌ ಪ್ರಕರಣದ ಬಗ್ಗೆಯೂ ಮಾತನಾಡುತ್ತಿಲ್ಲ. ಇದೀಗ ಮುನಿರತ್ನ ಪ್ರಕರಣದಲ್ಲಿ ಮೌನ ರತ್ನ ಆಗಿದ್ದಾರೆ’ ಎಂದು ವ್ಯಂಗ್ಯವಾಡಿದರು. 

ADVERTISEMENT

‘ಹಿಂದಿನ ಬಿಜೆಪಿ ಸರ್ಕಾರವನ್ನು ಲಂಚ ಮಂಚದ ಸರ್ಕಾರ ಎಂದು ನಾನು ಆರೋಪ ಮಾಡಿದ್ದೆ. ಆಗ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರೆಲ್ಲ ನನ್ನ ವಿರುದ್ಧ ಮುಗಿ ಬಿದ್ದಿದ್ದರು. ಈಗ ಬಿಜೆಪಿಯ ನಾಯಕರ ಮತ್ತಷ್ಟು ಹಗರಣಗಳು ಬಯಲಿಗೆ ಬರುತ್ತಿವೆ. ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೊವೊಂದು ಹರಿದಾಡುತ್ತಿದ್ದಂತೆ ಮಾಜಿ ಮುಖ್ಯಮಂತ್ರಿಯೊಬ್ಬರು ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆ ತಂದರು. ಬಿಜೆಪಿಯ 15ಕ್ಕೂ ಹೆಚ್ಚು ನಾಯಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ನನ್ನ ವಿರುದ್ಧ ಟೀಕಾಪ್ರಹಾರ ನಡೆಸಿದವರು ಈಗ ಎಲ್ಲಿಗೆ ಹೋಗಿದ್ದಾರೆ’ ಎಂದು ಅವರು ವ್ಯಂಗ್ಯವಾಡಿದರು. 

‘ಗಂಗೇನಹಳ್ಳಿ ಡಿನೋಟಿಫಿಕೇಷನ್‌ ಪ್ರಕರಣದಲ್ಲಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಆರೋಪಿಗಳಾಗಿದ್ದಾರೆ. ಅವರೇ ನಿಜವಾದ ಡಬಲ್‌ ಎಂಜಿನ್‌ಗಳು. ಅವರು ಭ್ರಷ್ಟಾಚಾರದ ಅಕ್ಷಯ ಪಾತ್ರೆಗಳು. ದಲಿತರಿಗೆ ಅವಮಾನ ಮಾಡಿದ ಮುನಿರತ್ನ ಹಾಗೂ ವ್ಯಾಪಕ ಭ್ರಷ್ಟಾಚಾರ ನಡೆಸಿರುವ ಕುಮಾರಸ್ವಾಮಿ ವಿರುದ್ಧ ಬಿಜೆಪಿಯವರು ದೆಹಲಿ ಚಲೋ ನಡೆಸಬೇಕು’ ಎಂದು ಅವರು ಛೇಡಿಸಿದರು. 

‘ದಲಿತರ ಬಗ್ಗೆ ಮುನಿರತ್ನ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಪರಿಶಿಷ್ಟ ಜಾತಿಯ ನಾಯಕರು ಸ್ವಾಭಿಮಾನಿಗಳಾಗಿದ್ದರೆ ಬಿಜೆಪಿಗೆ ರಾಜೀನಾಮೆ ನೀಡಿ ಹೊರಬರಬೇಕಿತ್ತು. ನಮ್ಮ ಕುಟುಂಬದ ವಿರುದ್ಧ ಸುಳ್ಳು ಆರೋಪ ಮಾಡಿದ ಛಲವಾದಿ ನಾರಾಯಣಸ್ವಾಮಿ ಎಲ್ಲಿದ್ದಾರೆ ಈಗ. ಈ ಹಿಂದೆ ಚಡ್ಡಿ ಅಭಿಯಾನ ನಡೆಸಿದ ಅವರು ಈಗ ಮೌನವಾಗಿರುವುದು ಏಕೆ’ ಎಂದು ಅವರು ಪ್ರಶ್ನಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.