ADVERTISEMENT

₹50 ಸಾವಿರ ಕೋಟಿ ಆಸ್ತಿ ಹುಡುಕಿಕೊಡಿ: ಪ್ರಿಯಾಂಕ್‌ ಖರ್ಗೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 16:24 IST
Last Updated 17 ಅಕ್ಟೋಬರ್ 2024, 16:24 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಬೆಂಗಳೂರು: ‘ಫೇಕ್‌ ಫ್ಯಾಕ್ಟರಿ ಸ್ಥಾಪಿಸಿ ಸುಳ್ಳು ಹರಡುವ ಬಿಜೆಪಿ ಹಿಂದಿನಿಂದಲೂ ಆರೋಪ ಮಾಡುತ್ತಾ ಬಂದಿರುವ ನಮ್ಮ ಕುಟುಂಬದ ₹50 ಸಾವಿರ ಕೋಟಿ ಆಸ್ತಿ ತೋರಿಸದೇ ನಿರಾಸೆ ಮೂಡಿಸಿದೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಈ ಕುರಿತು ‘ಎಕ್ಸ್‌’ನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘₹50 ಸಾವಿರ ಕೋಟಿ ಆಸ್ತಿಯ ಆರೋಪ ಮಾಡಿದ್ದ ಬಿಜೆಪಿಯ ಕೆಲ ಪುಡಿ ಮುಖಂಡರಿಗೆ ಲೀಗಲ್‌ ನೋಟಿಸ್‌ ಕಳುಹಿಸಿದ್ದೆ. 11 ವರ್ಷಗಳಿಂದ ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಅಧಿಕಾರದಲ್ಲಿ ಇದ್ದಾರೆ. ಐ.ಟಿ, ಇ.ಡಿ, ಸಿಬಿಐ ಅವರ ಕೈಯಲ್ಲೇ ಇವೆ. ಹೀಗಿದ್ದೂ ನಮ್ಮ ಆಸ್ತಿ ಹುಡುಕಲು ಸಾಧ್ಯವಾಗದಿರುವುದು ಏಕೆ? ದಮ್ಮು, ತಾಕತ್ತಿನ ಬಿಜೆಪಿ ನಾಯಕರು ಎಲ್ಲಾ ತನಿಖಾ ಸಂಸ್ಥೆಗಳನ್ನೂ ಕಳಿಸಲಿ, ಎಲ್ಲಿ ಬೇಕಾದರೂ ದಾಳಿ ಮಾಡಿಸಲಿ, ನಮ್ಮ ₹50 ಸಾವಿರ ಕೋಟಿಯ ಆಸ್ತಿಯನ್ನು ಹುಡುಕಿಕೊಡಲಿ’ ಎಂದು ಸವಾಲು ಹಾಕಿದ್ದಾರೆ.

‘ಸಿಎ ನಿವೇಶನ ಹೇಗೆ ಅಕ್ರಮ ಎನ್ನುವುದನ್ನು ನಿರೂಪಿಸಲು ಬಿಜೆಪಿಗೆ ಸಾಧ್ಯವಾಗಿಲ್ಲ. ಆದರೆ, ಬಿಜೆಪಿ ಅವಧಿಯಲ್ಲಿ  ನಾನು ಬಯಲಿಗೆಳೆದಿದ್ದ ಪಿಎಸ್‌ಐ ಹಗರಣವನ್ನು ಅವರೇ ಒಪ್ಪಿದ್ದಾರೆ. ಅಧಿಕಾರಿಗಳು, ಆರೋಪಿಗಳ ಬಂಧನವಾಗಿದೆ. ಬಿಟ್‌ಕಾಯಿನ್‌ ಹಗರಣದಲ್ಲಿ ಪೊಲೀಸ್‌ ಅಧಿಕಾರಿಗಳ ಬಂಧನವಾಗಿದೆ. ಗಂಗಾ ಕಲ್ಯಾಣ, ಭೋವಿ ನಿಗಮದ ಅಕ್ರಮವೂ ಸಾಬೀತಾಗಿದೆ. ಟ್ರಕ್‌ ಟರ್ಮಿನಲ್‌ ಹಗರಣದಲ್ಲಿ ಬಿಜೆಪಿ ನಾಯಕರ ಬಂಧನವಾಗಿದೆ. ಕೋವಿಡ್ ಹಗರಣದಲ್ಲಿ ಅಧಿಕಾರಿಗಳ ತಲೆದಂಡವಾಗಿದೆ. ಪರಶುರಾಮ ಥೀಮ್‌ಪಾರ್ಕ್‌ ಹಗರಣ ಜನರ ಮುಂದೆ ಬಯಲಾಗಿದೆ, ಕಿಯೋನಿಕ್ಸ್ ಹಗರಣದ ಬಗ್ಗೆ ಸಿಎಜಿ ವರದಿಯಲ್ಲಿ ಪುರಾವೆ ಸಿಕ್ಕಿದೆ’ ಎಂದು ಬಿಜೆಪಿ ಅವಧಿಯ ಹಗರಣಗಳ ಪಟ್ಟಿಯನ್ನೇ ನೀಡಿದ್ದಾರೆ. 

ADVERTISEMENT

‘ಬಿ.ಎಸ್‌. ಯಡಿಯೂರಪ್ಪ ಅವರ ಮೇಲೆ ಪೋಕ್ಸೊ ಪ್ರಕರಣ ಇರುವುದು ಸುಳ್ಳಾ? ಭ್ರಷ್ಟಾಚಾರದಲ್ಲಿ ಅವರು ಜೈಲಿಗೆ ಹೋಗಿದ್ದು ಸುಳ್ಳಾ? ಬಿಜೆಪಿ ಶಾಸಕ ಮುನಿರತ್ನ ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಹನಿಟ್ರಾಪ್‌ ಮಾಡಿದ್ದು ಸುಳ್ಳಾ? ಬಿಜೆಪಿಯ 15ಕ್ಕೂ ಹೆಚ್ಚು ನಾಯಕರು ಸಿ.ಡಿ ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿದ್ದು ಸುಳ್ಳಾ? ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಶಾಲೆ ಹೆಸರಲ್ಲಿ ನಿವೇಶನ ಪಡೆದು ಬಿರಿಯಾನಿ ಹೋಟೆಲ್‌ ಮಾಡಿದ್ದು ಸುಳ್ಳಾ’ ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.