ಬೆಂಗಳೂರು: ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿನ ಜಲಮೂಲಗಳ ಅತಿಕ್ರಮಣವನ್ನು ತೆರವುಗೊಳಿಸಲು ಕೂಡಲೇ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದ್ದಾರೆ.
ಈ ಸಂಬಂಧ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ‘ನಮ್ಮ ಜಲಮೂಲಗಳ ಸಂರಕ್ಷಣೆಯಿಂದ ಪರಿಸರ ಸಮತೋಲನವನ್ನು ಕಾಪಾಡಬಹುದು. ಕೃಷಿ ಚಟುವಟಿಕೆ ಮತ್ತು ಸಮುದಾಯಗಳ ನೀರಿನ ಅಗತ್ಯವನ್ನು ಖಚಿತಪಡಿಸುವುದು ಆದ್ಯತೆ ಕ್ರಮವಾಗಬೇಕು’ ಎಂದು ಹೇಳಿದ್ದಾರೆ.
‘ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಅನೇಕ ಕೆರೆಗಳು, ಕಿರು ಜಲಾಶಯಗಳು ಅತಿಕ್ರಮಣಗಳಾಗಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ. ಈ ಗಂಭೀರ ವಿಷಯವನ್ನು ಗಮನದಲ್ಲಿಟ್ಟುಕೊಂಡು, ತಕ್ಷಣವೇ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿಗಳ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಈ ಕೆಳಕಂಡ ಕ್ರಮಗಳನ್ನು ಪಾಲಿಸಲು ನಿರ್ದೇಶನ ನೀಡಬೇಕು’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಅತಿಕ್ರಮಣದ ವರದಿ: ಗ್ರಾಮಪಂಚಾಯತ್ ವ್ಯಾಪ್ತಿಯ ಎಲ್ಲಾ ಜಲಮೂಲಗಳ ಸಮೀಕ್ಷೆ ನಡೆಸಿ ಅತಿಕ್ರಮಣಗಳನ್ನು ಗುರುತಿಸುವುದು ಹಾಗೂ ವರದಿಯನ್ನು ಸಲ್ಲಿಸುವುದು. ಈ ವರದಿಯಲ್ಲಿ ಅತಿಕ್ರಮಣದ ವ್ಯಾಪ್ತಿ, ಒತ್ತುವರಿ ಮಾಡಿದ ವ್ಯಕ್ತಿಗಳು ಮತ್ತು ಸ್ಥಳೀಯ ಪರಿಸರ ಹಾಗೂ ಸಮುದಾಯದ ಮೇಲೆ ಪರಿಣಾಮ ಉಂಟು ಮಾಡಿರುವ ವಿವರಗಳನ್ನು ತಿಳಿಸಬೇಕು.
ತೆರವಿಗೆ ಕೈಗೊಂಡ ಕ್ರಮ: ಅತಿಕ್ರಮಣಗಳನ್ನು ಗುರುತಿಸಿದ ಕೂಡಲೇ ತೆರವುಗೊಳಿಸಲು ಕ್ರಮಕೈಗೊಳ್ಳುವುದು. ಈ ಕಾರ್ಯಾಚರಣೆಗಾಗಿ ಸಂಬಂಧಿಸಿದ ಎಲ್ಲಾ ಸ್ಥಳೀಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವುದು ಹಾಗೂ ತೆರವು ಕಾರ್ಯಾಚರಣೆಯನ್ನು ಸುಗಮವಾಗಿ ಮತ್ತು ಪರಿಣಾಮಕಾರಿಯಾಗಿ ಕೈಗೊಳ್ಳುವುದು.
ಗಡುವು ನಿಗದಿ: ಗುರುತಿಸಿದ ಅತಿಕ್ರಮಣಗಳ ತೆರವು ಕಾರ್ಯವನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಿ ಅನುಪಾಲನಾ ವರದಿ ಪಡೆದುಕೊಳ್ಳುವುದು.
ಅತಿಕ್ರಮಣಗಳ ತೆರವು ಪ್ರಕ್ರಿಯೆಯ ಪ್ರಗತಿಯನ್ನು ತಿಂಗಳಿಗೊಮ್ಮೆ ಮೇಲ್ವಿಚಾರಣೆ ನಡೆಸಿ ತೆರವು ಕಾರ್ಯಾಚರಣೆ ಕೈಗೊಳ್ಳುವಲ್ಲಿ ಏನಾದರೂ ಸವಾಲುಗಳು ಇದ್ದಲ್ಲಿ, ಅವುಗಳನ್ನು ಸಕ್ಷಮ ಪ್ರಾಧಿಕಾರದ ಗಮನಕ್ಕೆ ತಂದು ಮುಂದಿನ ಕ್ರಮವಹಿಸುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.