ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಬರಲಾರಂಭಿಸಿದ ಬಳಿಕ ರಾಜ್ಯದಲ್ಲಿ ಬಿಜೆಪಿ ಪರ ಅಲೆ ಬೀಸಲಾರಂಭಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಖಾಸಗಿ ಹೊಟೇಲ್ ನಲ್ಲಿ ಬುಧವಾರ ರಾತ್ರಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರು ಮಾತನಾಡಿ, ಆಡಳಿತ ವಿರೋಧಿ ಅಲೆ ಇಲ್ಲ. ಯಾರೂ ಧೃತಿಗೆಡಬೇಕಾಗಿಲ್ಲ, ನಾವು ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು.
ಕಾಂಗ್ರೆಸ್ ನವರ ಈಗಿನ ಅಬ್ಬರ ಚುನಾವಣೆ ವೇಳೆಗೆ ಇರುವುದಿಲ್ಲ ಎಂದೂ ಅವರು ಹೇಳಿದರು.
ಮಾರ್ಚ್ 1, 2 ಮತ್ತು 3 ರಂದು ರಥಯಾತ್ರೆಗೆ ಚಾಲನೆ ನೀಡಲಾಗುವುದು. ಮಾ. 1 ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಚಾಲನೆ ನೀಡಿದರೆ, ಮಾ. 2 ರಂದು ಬೆಳಗಾವಿ ಜಿಲ್ಲೆಯ ನಂದಗಢದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡುವರು. ಮಾ. 3 ರಂದು ಬೆಂಗಳೂರು ಮತ್ತು ಬಸವ ಕಲ್ಯಾಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಚಾಲನೆ ನೀಡಲಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಶಾಸಕರಿಗೆ ರಥಯಾತ್ರೆ ಮತ್ತು ಸಮಾವೇಶಗಳ ವಿವರ ನೀಡಿದರು.
‘ನಿಮ್ಮ ಸಲಹೆಗಳು ಇದ್ದರೆ ಕೊಡಿ' ಎಂದು ಶಾಸಕರಿಗೆ ಸಂತೋಷ್ ಹೇಳಿದಾಗ, ‘ಪ್ರಧಾನಿ ಮೋದಿ ನಮ್ಮ ಭಾಗಕ್ಕೂ ಬರಲಿ, ಅದರಿಂದ ಅನುಕೂಲ ಆಗುತ್ತದೆ’ ಎಂದು ಶಾಸಕರು ಮನವಿ ಮಾಡಿದರು.
ಯಾವುದೇವಕಾರಣಕ್ಕೂ ಬಿಸಿಲಿನಲ್ಲಿ ಸಮಾವೇಶ ಆಯೋಜನೆ ಮಾಡುವುದು ಬೇಡ ಎಂದ ಕೆಲವು ಶಾಸಕರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.