ADVERTISEMENT

ಒಳನೋಟ| ಕೂಲಿಗಾಗಿ ತಿಂಗಳು, ಸಾಮಗ್ರಿ ವೆಚ್ಚಕ್ಕೆ ವರ್ಷ!

ಕೂಲಿಕಾರರಿಗೆ ಸಂಕಟ, ಸಾಮಗ್ರಿ ಪೂರೈಸಿದವರಿಗೆ ಇಕ್ಕಟ್ಟು

ಚಿದಂಬರ ಪ್ರಸಾದ್
Published 25 ಜೂನ್ 2022, 20:38 IST
Last Updated 25 ಜೂನ್ 2022, 20:38 IST
.
.   

ಹಾಸನ: ಕೂಲಿಗಾಗಿ ತಿಂಗಳು, ಸಾಮಗ್ರಿ ವೆಚ್ಚಕ್ಕಾಗಿ ವರ್ಷ ಕಾಯಿರಿ!

–ಇದು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನರೇಗಾ ಕೂಲಿಕಾರರು ಮತ್ತು ಸಾಮಗ್ರಿ ಪೂರೈಕೆದಾರರಿಗೆ ನೀಡಿರುವ ಅಲಿಖಿತ ಸೂಚನೆ. ಕೂಲಿ ಸ್ವಲ್ಪ ತಡವಾಗಿ ಬಂದರೂ ಸಾಮಗ್ರಿ ವೆಚ್ಚಕ್ಕಾಗಿ ವರ್ಷ ಕಾಯಲೇಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ.

ರಾಜ್ಯದ ಬಹುತೇಕ ಕಡೆ ಕಳೆದ ವರ್ಷ ಬಾಕಿಯಿದ್ದ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತಿದ್ದು, ಈ ವರ್ಷ ಕೆಲವೆಡೆ ಮಾತ್ರ ಹೊಸದಾಗಿ ಕೆಲಸ ಆರಂಭಿಸಲಾಗಿದೆ. ಅವು ಕೂಡ ತೆವಳುತ್ತಿವೆ.

ADVERTISEMENT

ಉತ್ತರ ಕರ್ನಾಟಕ ಭಾಗದ ಕೆಲವೆಡೆ ಮಾತ್ರ ಕಾರ್ಮಿಕರ ಕೂಲಿ ಮತ್ತು ಸಾಮಗ್ರಿ ಪೂರೈಕೆದಾರರಿಗೆ ಸಕಾಲದಲ್ಲಿ ಹಣ ಪಾವತಿಯಾದರೆ, ಉಳಿದೆಲ್ಲೆಡೆ ವಿಳಂಬವಾಗುತ್ತಿದೆ.

‘ಸಾಮಗ್ರಿಗಳನ್ನು ಸರಬರಾಜು ಮಾಡಿ, ಕೆಲಸ ಮುಗಿದ ಎಂಟು ತಿಂಗಳಿನಿಂದ ಒಂದು ವರ್ಷದ ನಂತರ ಹಣ ಬಿಡುಗಡೆಯಾಗುತ್ತದೆ. ಅಲ್ಲೀವರೆಗೆ ಕಾಯಲೇಬೇಕು’ ಎಂದು ಹಾಸನ ಜಿಲ್ಲೆಯ ಹಿರೀಸಾವೆಯ ನರೇಗಾ ಕಾಮಗಾರಿಗೆ ಸಾಮಗ್ರಿ ವಿತರಕ ದೇವರಾಜು ಅಸಹಾಯಕತೆ ತೋಡಿಕೊಂಡರು.

‘ಕೂಲಿ ಹಂಚಿಕೆ ಮತ್ತು ಸಾಮಗ್ರಿ ಪೂರೈಕೆ ಮೊದಲಿಗಿಂತ ವಿಳಂಬವಾಗುತ್ತಿದೆ. ತಂತ್ರಾಂಶದಲ್ಲಿ ಸಮಸ್ಯೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮೊದಲು ವಾರಕ್ಕೆ ಅಥವಾ 15 ದಿನಕ್ಕೆ ಸರಿಯಾಗಿ ಕೂಲಿ ಪಾವತಿಯಾಗುತ್ತಿತ್ತು. ಈಗ ಕೆಲವೊಮ್ಮೆ ಒಂದು ತಿಂಗಳಾಗುತ್ತದೆ’ ಎಂಬುದು ಜಾಬ್ ಕಾರ್ಡ್ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಹರಿಣಾಕ್ಷಿ ಅವರ ಸಂಕಟ.

‘ನರೇಗಾ ಯೋಜನೆಯಡಿ ಸಕಾಲಕ್ಕೆ ಹಣ ಬಿಡುಗಡೆ ಆಗುತ್ತಿಲ್ಲ’ ಎಂಬುದಕ್ಕೆ ಇವೆರಡೂ ಜ್ವಲಂತ ನಿದರ್ಶನಗಳು.

‘ಯೋಜನೆಯಡಿ ಏಪ್ರಿಲ್‌, ಮೇ ತಿಂಗಳ ಅನುದಾನ ಇನ್ನೂ ಬಿಡುಗಡೆಯಾಗದೇ ಇರುವುದರಿಂದ ಹಣ ಪಾವತಿ ವಿಳಂಬವಾಗಿದೆ’ ಎನ್ನುವುದು ಅಧಿಕಾರಿಗಳ ಮಾತು. ಎಲ್ಲೆಲ್ಲೂ ಅನುದಾನದ್ದೇ ಸಮಸ್ಯೆ.

ಕೇಂದ್ರ ಸರ್ಕಾರದಿಂದ ಈ ಬಾರಿಯ ಬಜೆಟ್‌ನಲ್ಲಿ ನರೇಗಾ ಯೋಜನೆಯ ಅನುದಾನವನ್ನು ಶೇ 25 ರಷ್ಟು ಕಡಿತಗೊಳಿಸಲಾಗಿದೆ. 2021–22 ರಲ್ಲಿ ದೇಶದಲ್ಲಿ ಒಟ್ಟು ₹ 1,11,170 ಕೋಟಿ ಖರ್ಚಾಗಿದ್ದರೂ, ಈ ಬಾರಿಯ ಬಜೆಟ್‌ನಲ್ಲಿ ₹73 ಸಾವಿರ ಕೋಟಿ ಅನುದಾನವನ್ನು ಮೀಸಲಿಡಲಾಗಿದೆ’ ಎನ್ನುತ್ತವೆ ಮೂಲಗಳು.

ತುಮಕೂರು ಜಿಲ್ಲಾ ಪಂಚಾಯಿತಿಯಿಂದ ಕೂಲಿ ವೆಚ್ಚವು 15 ದಿನಗಳ ಒಳಗೆ ಪಾವತಿಯಾಗುತ್ತಿದ್ದು, ಸಾಮಗ್ರಿ ವೆಚ್ಚ ವಿಳಂಬವಾಗುತ್ತಿದೆ. ಕಾಮಗಾರಿ ಮುಗಿದು ತಿಂಗಳಾದರೂ ವೆಚ್ಚ ಪಾವತಿಯಾಗುತ್ತಿಲ್ಲ.

‘ಗ್ರಾಮ ಪಂಚಾಯಿತಿಯಿಂದಲೇ ನಡೆಯುವ ಕಾಮಗಾರಿಗೆ ಬೇಗನೇ ಕೂಲಿ ಪಾವತಿಯಾಗುತ್ತದೆ. ಅದನ್ನು ಹೊರತುಪಡಿಸಿ, ಕಾರ್ಮಿಕರಿಗೆ ಸಂಬಂಧಿಸಿದ ಕಾಮಗಾರಿಗಳ ಕೂಲಿ ಹಣದ ಪಾವತಿ ವಿಳಂಬವಾಗುತ್ತಿದೆ’ ಎಂದು ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ನರೇಗಾ ಕಾರ್ಮಿಕರಾದ ನಿಂಗಮ್ಮ ಸವಣೂರ ಆರೋಪಿಸುತ್ತಾರೆ.

‘ಕೆಲ ತಿಂಗಳುಗಳ ಹಿಂದೆ ಸಾಮಗ್ರಿ ಪೂರೈಕೆ ಮತ್ತು ಕೂಲಿ ಹಣ ಪಾವತಿಯಲ್ಲಿ ವ್ಯತ್ಯಯವಾಗಿತ್ತು. ಇದೀಗ, ಕಾಮಗಾರಿಯ ಪ್ರಗತಿ ಆಧರಿಸಿ ಸಕಾಲದಲ್ಲಿ ಕಾರ್ಮಿಕರ ಹಾಗೂ ಸಾಮಗ್ರಿ ಪೂರೈಕೆದಾರರ ಹಣ ಪಾವತಿಸಲಾಗುತ್ತಿದೆ’ ಎಂದು ಹುಬ್ಬಳ್ಳಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಂಗಾಧರ ಕಂದಕೂರ ತಿಳಿಸಿದ್ದಾರೆ.

‘ಮಾರ್ಚ್ ತಿಂಗಳ ಕೂಲಿ ಹಣವನ್ನು ಇನ್ನೂ ನೀಡಿಲ್ಲ, ಎರಡು ತಿಂಗಳಿಂದ ಕಾಮಗಾರಿಗಳಿಗೆ ‘ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಂ’ (ಎನ್‌.ಎಂ.ಎಂ.ಎಸ್‌) ತೆಗೆಯದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಕೆಲಸ ಮಾಡಿರುವ ಕೆಲ ಕಾಮಗಾರಿಗಳಿಗೂ ಎನ್‌.ಎಂ.ಎಂ.ಎಸ್‌ ನೀಡದೇ ಪಂಚಾಯಿತಿಗಳಿಗೆ ಅಲೆಯುವಂತಾಗಿದೆ. ಮೇಟಿಗಳಿಗೆ ನೀಡುವ ಶೇ 5 ರಷ್ಟು ಹಣವನ್ನೂ ನೀಡಿಲ್ಲ. ಮತ್ತೊಂದೆಡೆ ಸಲಕರಣೆಗೆ ನೀಡುತ್ತಿದ್ದ ₹ 10 ಕೂಲಿ ಕಡಿತ ಮಾಡಿ ಸರ್ಕಾರ ಕೂಲಿಕಾರರಿಗೆ ಅನ್ಯಾಯ ಮಾಡುತ್ತಿದೆ’ ಎಂದು ಮಂಡ್ಯ ಜಿಲ್ಲೆಯ ಮಳ್ಳವಳ್ಳಿ ತಾಲ್ಲೂಕಿನ ದುಗ್ಗನಹಳ್ಳಿ ಕೂಲಿಕಾರ ಮಹಿಳೆ ವರದೇವಿ ದೂರಿದ್ದಾರೆ.

***

ತೋಟದಲ್ಲಿ ಬದು ನಿರ್ಮಾಣ, ಹಳ್ಳದ ಕೆಲಸ ಮಾಡಿದ್ದೇನೆ. ನಿತ್ಯ ₹310 ರಂತೆ 7 ದಿನ ಕೆಲಸ ಮಾಡಿದರೆ, 20– 30 ದಿನಗಳ ನಂತರ ಖಾತೆಗೆ ಹಣ ಬರುತ್ತದೆ.

-ಸತೀಶ್, ಕಾರ್ಮಿಕ, ಹಿರೀಸಾವೆ, ಹಾಸನ ಜಿಲ್ಲೆ

***

ಉದ್ಯೋಗ ಖಾತರಿ ಅಡಿ ಕಾಮಗಾರಿಯೊಂದಕ್ಕೆ ಆರೇಳು ತಿಂಗಳ ಹಿಂದೆ ಮರಳು ಪೂರೈಸಿದ್ದೆ. ಇದುವರೆಗೆ ಹಣ ಪಾವತಿಯಾಗಿಲ್ಲ

ನಾಗರಾಜ ಎಂ, ಸಾಮಗ್ರಿ ಪೂರೈಕೆದಾರ, ಹುಬ್ಬಳ್ಳಿ ತಾಲ್ಲೂಕು

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.