ADVERTISEMENT

ಮುಂಬಡ್ತಿ | ಪ್ರಾತಿನಿಧ್ಯ ಪೂರ್ಣವೆಂದು ಕೈಬಿಡುವಂತಿಲ್ಲ: ಡಿಪಿಎಆರ್ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2024, 0:00 IST
Last Updated 20 ಸೆಪ್ಟೆಂಬರ್ 2024, 0:00 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ‘ಮುಂಬಡ್ತಿಗೆ ಪರಿಗಣಿಸುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಪ್ರಾತಿನಿಧ್ಯ ಪೂರ್ಣಗೊಂಡಿದೆ ಎಂಬ ಕಾರಣಕ್ಕೆ, ಮುಂಬಡ್ತಿಗೆ ಅರ್ಹರಾದ ಎಸ್‌ಸಿ, ಎಸ್‌ಟಿ ನೌಕರರನ್ನು ಕೈ ಬಿಡುವಂತಿಲ್ಲ’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಸ್ಪಷ್ಟಪಡಿಸಿದೆ.

ಮುಂಬಡ್ತಿ ನೀಡುವ ವೃಂದದಲ್ಲಿನ ಕಾರ್ಯನಿರತ ವೃಂದ ಬಲದಲ್ಲಿ ಎಸ್‌ಸಿ, ಎಸ್‌ಟಿ ನೌಕರರ ಕೊರತೆ ಇಲ್ಲದೇ ಇದ್ದರೆ, ಮುಂಬಡ್ತಿ ನೀಡಲಾಗುವ ಹುದ್ದೆಗಳನ್ನೂ ಸೇರಿಸಿ ಮತ್ತೊಮ್ಮೆ ಪ್ರಾತಿನಿಧ್ಯ ಲೆಕ್ಕ ಹಾಕಬೇಕು. ಆಗಲೂ ಎಸ್‌ಸಿ, ಎಸ್‌ಟಿ ಪ್ರಾತಿನಿಧ್ಯದಲ್ಲಿ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಮೀಸಲಾತಿ ರೋಸ್ಟರ್‌ (ಪಟ್ಟಿ) ನಿರ್ವಹಿಸುವ ಸಂದರ್ಭದಲ್ಲಿ, ಎಷ್ಟು ಹುದ್ದೆಗಳಿಗೆ ಮುಂಬಡ್ತಿ ನೀಡಲಾಗುತ್ತಿದೆಯೊ ಅಷ್ಟೂ ಹುದ್ದೆಗಳಿಗೆ ರೋಸ್ಟರ್‌ ಅನ್ವಯಿಸಬೇಕು. ಪ್ರಾತಿನಿಧ್ಯ ಪೂರ್ಣಗೊಂಡಿದೆ ಎಂಬ ಕಾರಣಕ್ಕೆ ರೋಸ್ಟರ್‌ ನಿರ್ವಹಣೆಯನ್ನು ಮಧ್ಯದಲ್ಲಿಯೇ ನಿಲ್ಲಿಸಬಾರದು ಎಂದೂ ಇಲಾಖೆ ತಿಳಿಸಿದೆ.

ADVERTISEMENT

ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲ ಹುದ್ದೆಗಳಿಗೆ ಬಡ್ತಿ ನೀಡುವ ಸಂದರ್ಭದಲ್ಲಿ ಮೀಸಲಾತಿ ನೀಡಿಲ್ಲ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಇಲಾಖೆಗೆ ಡಿಪಿಎಆರ್‌ ಈ ಸ್ಪಷ್ಟನೆ ನೀಡಿದೆ. ಈ ಸೂಚನೆ ಎಲ್ಲ ಆಡಳಿತ ಇಲಾಖೆಗಳಿಗೂ ಅನ್ವಯ ಆಗಲಿದೆ.

ಪದವಿಪೂರ್ವ ಶಿಕ್ಷಣ ಇಲಾಖೆ ಉಪನ್ಯಾಸಕರ ಹುದ್ದೆಯಿಂದ ಪ್ರಾಂಶುಪಾಲ ಹುದ್ದೆಗೆ 2016ರಿಂದ ಈವರೆಗೆ ಮುಂಬಡ್ತಿ ನೀಡುವ ಸಂದರ್ಭದಲ್ಲಿ ಮೀಸಲಾತಿ ನಿಯಮ ಪಾಲಿಸಿಲ್ಲ ಎಂದು ಆರೋಪಿಸಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಗೆ ರಾಜ್ಯ ಎಸ್‌ಸಿ, ಎಸ್‌ಟಿ ನೌಕರರ ಸಂಘ ದೂರು ನೀಡಿತ್ತು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದ ಸಮಿತಿಯು, ‘ಸಮಾಜ ಕಲ್ಯಾಣ ಇಲಾಖೆ, ಡಿಪಿಎಆರ್ ಮತ್ತು ಶಾಲಾ ಶಿಕ್ಷಣ ಇಲಾಖೆ ಜಂಟಿಯಾಗಿ ಪರಿಶೀಲಿಸಿ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಗುರುತಿಸುವವರೆಗೆ ಪ್ರಾಂಶುಪಾಲ ಹುದ್ದೆಗಳಿಗೆ ಬಡ್ತಿ ನೀಡಬಾರದು’ ಎಂದು ಸೂಚಿಸಿತ್ತು. 

ಈ ಹಿನ್ನೆಲೆಯಲ್ಲಿ ಡಿಪಿಎಆರ್‌ ಕಾರ್ಯದರ್ಶಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ಸಭೆ ನಡೆಸಿದ್ದರು. ಈ ಸಭೆಯಲ್ಲಿ, ‘ಪ್ರಾಂಶುಪಾಲ ಹುದ್ದೆಗಳಿಗೆ ಬಡ್ತಿ ನೀಡುವಾಗ ಎಸ್‌ಸಿ, ಎಸ್‌ಟಿ ನೌಕರರಿಗೆ ಮೀಸಲಿರಿಸಿದ ರೋಸ್ಟರ್‌ ಬಿಂದುಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಸ್ವಂತ ಜೇಷ್ಠತೆಯಲ್ಲಿ ಅರ್ಹರಾಗುವ ಎಸ್‌ಸಿ, ಎಸ್‌ಟಿ ಉಪನ್ಯಾಸಕರನ್ನು ಮುಂಬಡ್ತಿಗೆ ಪರಿಗಣಿಸಿಲ್ಲ’ ಎಂದು ಆಯುಕ್ತರು ವಿವರಿಸಿದ್ದರು.

- ಮುಂಬಡ್ತಿ ನೀಡುವ ಸಂದರ್ಭದಲ್ಲಿ ವಂಚನೆ ನಡೆದರೆ ಅದಕ್ಕೆ ಕಾರಣವಾಗುವ ಅಧಿಕಾರಿಗಳ ಮೇಲೆ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸಲಾಗುವುದು
ಡಿ. ಚಂದ್ರಶೇಖರಯ್ಯ ಅಧ್ಯಕ್ಷರು ರಾಜ್ಯ ಎಸ್‌ಸಿ ಎಸ್‌ಟಿ ನೌಕರರ ಸಂಘ

ಕೈತಪ್ಪಿದ ಮುಂಬಡ್ತಿ: ತನಿಖೆಯಲ್ಲಿ ಪತ್ತೆ

ಉಪನ್ಯಾಸಕ ವೃಂದದಿಂದ ಪ್ರಾಂಶುಪಾಲ ಹುದ್ದೆಗೆ 2016ರ ಅ. 31ರಿಂದ 2022ರವರೆಗೆ ಮುಂಬಡ್ತಿ ನೀಡುವಾಗ ರೋಸ್ಟರ್‌ ಬಿಂದುಗಳನ್ನು ಪಾಲಿಸಿಲ್ಲ ಎಂದು ಎಸ್‌ಸಿ ಎಸ್‌ಟಿ ನೌಕರರ ಸಂಘವು ಸಮಾಜ ಕಲ್ಯಾಣ ಇಲಾಖೆಗೆ ದೂರು ನೀಡಿತ್ತು. ಈ ಬಗ್ಗೆ ತನಿಖೆ ನಡೆಸಿದ್ದ ಇಲಾಖೆ  ಹೈದರಾಬಾದ್– ಕರ್ನಾಟಕ ಭಾಗದಲ್ಲಿ ಎಸ್‌ಸಿ 7 ಎಸ್‌ಟಿ 2 ಉಳಿಕೆ ವೃಂದದಲ್ಲಿ ಎಸ್‌ಸಿ 68 ಎಸ್‌ಟಿ 11 ಪ್ರಾಂಶುಪಾಲ ಹುದ್ದೆಗಳನ್ನು ನೀಡದಿರುವುದನ್ನು ಗುರುತಿಸಿತ್ತು. ಈ ತನಿಖಾ ವರದಿಯ ಆಧಾರದಲ್ಲಿ ಎಸ್‌ಸಿ ಎಸ್‌ಟಿ ಸಂಘವು ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಗೆ ದೂರು ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.