ಬೆಂಗಳೂರು: ಸರ್ಕಾರಿ ಹುದ್ದೆಗಳಿಗೆ ಬಡ್ತಿ ನೀಡುವಾಗ ವೈಜ್ಞಾನಿಕ ಮತ್ತು ನ್ಯಾಯೋಚಿತ ಮೀಸಲಾತಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ 2022ರ ಜ. 28ರಂದು ನೀಡಿದ್ದ ತೀರ್ಪುನ್ನು ಕೇಂದ್ರ ಸರ್ಕಾರ ಈಗಾಗಲೇ ಅಳವಡಿಸಿಕೊಂಡಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಕರ್ನಾಟಕದಲ್ಲಿಯೂ ಜಾರಿಗೆ ತರಬೇಕು ಎಂದು ಆಗ್ರಹಿಸಿ ಮುಖ್ಯ ಕಾರ್ಯದರ್ಶಿಗೆ ‘ಅಹಿಂಸಾ’ (ಅಲ್ಪಸಂಖ್ಯಾತ, ಹಿಂದುಳಿದ, ಸಾಮಾನ್ಯ) ವರ್ಗದ ನೌಕರರ ಹಿತರಕ್ಷಣಾ ಒಕ್ಕೂಟ ಮನವಿ ಸಲ್ಲಿಸಿದೆ.
30 ದಿನಗಳ ಒಳಗೆ ನ್ಯಾಯ ದೊರಕಿಸಿಕೊಡಬೇಕು. ತಪ್ಪಿದರೆ ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯ ಆಗಲಿದೆ ಎಂದೂ ಮನವಿಯಲ್ಲಿ ಒಕ್ಕೂಟ ಎಚ್ಚರಿಕೆ ನೀಡಿದೆ.
ಸುಪ್ರೀಂ ಕೋರ್ಟಿನ ತೀರ್ಪನ್ನು ಕೇಂದ್ರ ಸರ್ಕಾರ 2022ರ ಏಪ್ರಿಲ್ 12ರಿಂದ ಅಳವಡಿಸಿಕೊಂಡಿದೆ. ರಾಜ್ಯದಲ್ಲಿಯೂ ಅಳವಡಿಸಿಕೊಳ್ಳಬೇಕು. ಈ ಮೂಲಕ ಸಂವಿಧಾನ ಉಲ್ಲಂಘನೆ ಮತ್ತು ಅಹಿಂಸಾ ವರ್ಗದ ನೌಕರರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು. ಸಂವಿಧಾನದ ಪರಿಚ್ಛೇದ 141ರ ಪ್ರಕಾರ ಸುಪ್ರೀಂ ಕೋರ್ಟ್ ನೀಡುವ ಆದೇಶ ಎಲ್ಲ ಸರ್ಕಾರಿ ನೌಕರರಿಗೆ ಅನ್ವಯವಾಗುತ್ತದೆ. ಈ ಬಗ್ಗೆಯೂ ಸುಪ್ರೀಂ ಕೋರ್ಟ್ ಹಲವು ತೀರ್ಪುಗಳನ್ನು ನೀಡಿದೆ. ರಾಜ್ಯದಲ್ಲಿ ಸರ್ಕಾರ ಶೇ 82ರಷ್ಟು ವರ್ಗದವರಿಗೆ ವೈಜ್ಞಾನಿಕ ನೀತಿ ಅನುಸರಿಸಿ ಬಡ್ತಿ ನೀಡುತ್ತಿಲ್ಲ. ಸಾವಿರಾರು ನೌಕರರು ಯಾವುದೇ ಬಡ್ತಿ ಇಲ್ಲದೆ ನಿವೃತ್ತರಾಗುತ್ತಿದ್ದಾರೆ ಎಂದೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
‘2022ರ ಜ. 28 ರಂದು ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಎಸ್‌ಸಿ, ಎಸ್‌ಟಿ ವರ್ಗದ ಎಂಜಿನಿಯರ್‌ಗಳ ಕಲ್ಯಾಣ ಸಂಘದವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಈ ಕಾರಣದಿಂದ ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರ 2017ರಲ್ಲಿ ಜಾರಿಗೆ ತಂದಿರುವ ಕಾಯ್ದೆಯೂ ಅನೂರ್ಜಿತವಾಗುತ್ತದೆ. ರಾಜ್ಯ ಸರ್ಕಾರ ಪ್ರಕಟಿಸಿರುವ 2022–23ನೇ ಸಾಲಿನ ಎಸ್‌ಸಿ, ಎಸ್‌ಟಿ ನೌಕರರ ವರದಿಯ ಅನ್ವಯ ಪರಿಶಿಷ್ಟ ಜಾತಿ ನೌಕರರ ಪ್ರಾತಿನಿಧ್ಯ ಈಗಾಗಲೇ ಶೇ 18.65ರಷ್ಟಿದೆ. ಪ್ರಾತಿನಿಧ್ಯ ಶೇ 18 ಮೀರಿದ ನಂತರ ಅಲ್ಪಸಂಖ್ಯಾತ, ಹಿಂದುಳಿದ, ಸಾಮಾನ್ಯ ವರ್ಗದ ನೌಕರರಿಗೆ ಬಡ್ತಿ ನೀಡುವಂತೆ ಈ ಹಿಂದೆಯೇ ಮನವಿ ಸಲ್ಲಿಸಿದ್ದರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಮನವಿಯಲ್ಲಿ ಸಂಘದ ಅಧ್ಯಕ್ಷ ಎಂ. ನಾಗರಾಜ್ ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.