ADVERTISEMENT

ಪ್ರಾಂಶುಪಾಲ ಹುದ್ದೆಗೆ ಬಡ್ತಿ: ಪರಿಶಿಷ್ಟರಿಗೆ ಅನ್ಯಾಯ- ಆರೋಪ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2024, 16:06 IST
Last Updated 11 ಮಾರ್ಚ್ 2024, 16:06 IST
   

ಬೆಂಗಳೂರು: ಬ್ಯಾಗ್‌ಲಾಗ್‌ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆ ನೀಡಿದ್ದ ವರದಿಯನ್ನು ಬದಿಗಿಟ್ಟು, ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗೆ ಮುಂಬಡ್ತಿ ನೀಡಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿರುವುದಕ್ಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪನ್ಯಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಪರಿಶಿಷ್ಟರಿಗೆ ಅನ್ಯಾಯ ಎಸಗಿ ಕಾನೂನುಬಾಹಿರವಾಗಿ ಮುಂಬಡ್ತಿ ನೀಡಿದರೆ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಮತ್ತು ಕರ್ತವ್ಯಲೋಪದಡಿ ಪ್ರಕರಣದಡಿ ಪ್ರಕರಣ ದಾಖಲಿಸಲಾಗುವುದು’ ಎಂದು ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಂಘದ ಅಧ್ಯಕ್ಷ ಡಿ. ಚಂದ್ರಶೇಖರಯ್ಯ ಎಚ್ಚರಿಕೆ ನೀಡಿದ್ದಾರೆ. 

‘2016ರ ಅಕ್ಟೋಬರ್‌ 31ರಿಂದ 2022ನೇ ಸಾಲಿನವರೆಗೆ ನೀಡಿರುವ ಮುಂಬಡ್ತಿಯ ಸಂದರ್ಭದಲ್ಲಿ ಮೀಸಲಾತಿ ರೋಸ್ಟರ್‌ ಬಿಂದುಗಳನ್ನು ಪಾಲಿಸದೇ ಇರುವುದರಿಂದ ಪರಿಶಿಷ್ಟ ಸಮುದಾಯದ ಉಪನ್ಯಾಸಕರಿಗೆ ಅನ್ಯಾಯವಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಆಯುಕ್ತರು 2023ರ ಜುಲೈ 7ರಂದೇ ವರದಿ ನೀಡಿದ್ದಾರೆ. ಆದರೆ, ಇಲಾಖೆಯ ಹಿರಿಯ ಅಧಿಕಾರಿಗಳು ಈ ವರದಿಯನ್ನು ಪರಿಗಣಿಸದೆ ಬಡ್ತಿ ನೀಡಲು ಮಂಗಳವಾರ (ಮಾರ್ಚ್‌ 12) ಇಲಾಖಾ ಪದೋನ್ನತಿ ಸಮಿತಿ (ಡಿಪಿಸಿ) ಸಭೆ ನಡೆಸಲು ಮುಂದಾಗಿದ್ದಾರೆ’ ಎಂದು ಎಸ್‌ಸಿ, ಎಸ್‌ಟಿ ಉಪನ್ಯಾಸಕರು ಆರೋಪಿಸಿದ್ದಾರೆ.

ADVERTISEMENT

ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ಜುಲೈ 7ರಂದು ನೀಡಿದ್ದ ವರದಿಯಲ್ಲಿ, ಪ್ರಾಂಶುಪಾಲರ ವೃಂದಕ್ಕೆ ಬಡ್ತಿ ನೀಡುವ ವೇಳೆ ಪರಿಶಿಷ್ಟ ಜಾತಿಗೆ 60, ಪರಿಶಿಷ್ಟ ಪಂಗಡಕ್ಕೆ 11 ಸೇರಿ 71 ಹುದ್ದೆಗಳು ಮತ್ತು ಹೈದರಾಬಾದ್‌ ಕರ್ನಾಟಕ ಸ್ಥಳೀಯ ವೃಂದದಲ್ಲಿ ಪರಿಶಿಷ್ಟ ಜಾತಿಯ 7, ಪರಿಶಿಷ್ಟ ಪಂಗಡದ 2 ಸೇರಿ 9 ಹೀಗೆ ಒಟ್ಟು 80  ಹುದ್ದೆಗಳಿಗೆ ವಂಚನೆಯಾಗಿದೆ ಎಂದು ವರದಿ ನೀಡಿದ್ದರು. ಆ ಬಳಿಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಕೋರಿದ್ದ ವರದಿಗೆ ಮಾಹಿತಿ ನೀಡಿದ್ದ ಆಯುಕ್ತರು, ಜುಲೈ 7 ವರದಿಯಂತೆ ಕ್ರಮ ವಹಿಸಬೇಕು ಎಂದು ತಿಳಿಸಿದ್ದರು. ಅದನ್ನು ಪರಿಗಣಿಸಿಲ್ಲ ಎಂದು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.