ADVERTISEMENT

ಎಂಜಿನಿಯರ್‌ಗಳ ಬಡ್ತಿಗೆ ಸಿದ್ಧತೆ?

ಇಲಾಖೆಗಳನ್ನು ಬೇರ್ಪಡಿಸದೆ ಮುಂಬಡ್ತಿ ಬೇಡ ಎಂದಿದ್ದ ಡಿಸಿಎಂ ಸಮಿತಿ

ಪ್ರವೀಣ ಕುಮಾರ್ ಪಿ.ವಿ.
Published 13 ಅಕ್ಟೋಬರ್ 2019, 20:16 IST
Last Updated 13 ಅಕ್ಟೋಬರ್ 2019, 20:16 IST
   

ಬೆಂಗಳೂರು: ಎಂಜಿನಿಯರ್‌ಗಳ ಬಡ್ತಿ ಸಂಬಂಧ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ನೇತೃತ್ವದ ಸಮಿತಿ ಇತ್ತೀಚೆಗೆ ಕೈಗೊಂಡಿರುವ ತೀರ್ಮಾನವನ್ನು ಧಿಕ್ಕರಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಎಂಜಿನಿಯರ್‌ಗಳಿಗೆ ಬಡ್ತಿ ನೀಡಲು ಸಿದ್ಧತೆ ನಡೆದಿದೆ.

ಲೋಕೋಪಯೋಗಿ, ಜಲಸಂಪನ್ಮೂಲ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗಳನ್ನು ಬೇರ್ಪಡಿಸುವ ಸಲುವಾಗಿ ಮಾರ್ಗಸೂಚಿ ರೂಪಿಸಲು ತಜ್ಞರ ಸಮಿತಿ ರಚಿಸಬೇಕಾಗಿದೆ. ಹಾಗಾಗಿ, ಈ ಹಂತದಲ್ಲಿ ಜಲಸಂಪನ್ಮೂಲ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗಳು ಎಂಜಿನಿಯರ್‌ಗಳ ಬಡ್ತಿ ಪ್ರಸ್ತಾವಗಳನ್ನು ಪರಿಗಣಿಸಬಾರದು ಎಂದು ಕಾರಜೋಳ ನೇತೃತ್ವದ ಸಮಿತಿ ಸೆ. 19ರಂದು ನಡೆದ ಸಭೆಯಲ್ಲಿ ನಿರ್ಣಯ ಕೈಗೊಂಡಿತ್ತು.

ಈ ನಡುವೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಎಂಜಿನಿಯರ್‌ ವೃಂದದ ಹುದ್ದೆಗೆ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ವೃಂದದಿಂದ ಬಡ್ತಿ ನೀಡುವ ಕುರಿತು ನಿರ್ಧಾರ ಕೈಗೊಳ್ಳುವ ಸಲುವಾಗಿ ಇದೇ 14ರಂದು (ಸೋಮವಾರ) ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಇಲಾಖಾ ಮುಂಬಡ್ತಿ ಸಮಿತಿ ಸಭೆ (ಡಿಪಿಸಿ) ಕರೆಯಲಾಗಿದೆ.

ADVERTISEMENT

1989ಕ್ಕೆ ಮುನ್ನ ಜಲಸಂಪನ್ಮೂಲ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳು ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲೇ ಕಾರ್ಯನಿರ್ವಹಿಸುತ್ತಿದ್ದವು. ಈ ಮೂರೂ ಇಲಾಖೆಗಳ ತಾಂತ್ರಿಕ ವರ್ಗದ ಎಂಜಿನಿಯರ್‌ ಹುದ್ದೆಗಳನ್ನು ಲೋಕೋಪಯೋಗಿ ಇಲಾಖೆಯ ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿತ್ತು.

ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವೃಂದದಿಂದ ಹಿಡಿದು ಮುಖ್ಯ ಎಂಜಿನಿಯರ್‌ ವೃಂದದವರೆಗೂ ಲೋಕೋಪಯೋಗಿ ಇಲಾಖೆ ಸಿದ್ಧಪಡಿಸುವ ಜ್ಯೇಷ್ಠತಾ ಪಟ್ಟಿಗೆ ಅನುಸಾರ ಬಡ್ತಿ ನೀಡಲಾಗುತ್ತಿತ್ತು.

ಜಲಸಂಪನ್ಮೂಲ ಇಲಾಖೆ 1989ರಲ್ಲಿ ಹಾಗೂ ಪಂಚಾಯತ್‌ರಾಜ್‌ ಇಲಾಖೆ 2002ರಲ್ಲಿ ಪ್ರತ್ಯೇಕ ವೃಂದ ಮತ್ತು ನೇಮಕಾತಿ ನಿಯಮಾವಳಿ ರಚಿಸಿಕೊಂಡಿವೆ. ಆದರೆ ಭೌತಿಕವಾಗಿ ಈ ಇಲಾಖೆಗಳ ಎಂಜಿನಿಯರ್‌ಗಳನ್ನು ಅಥವಾ ಸಿಬ್ಬಂದಿಯನ್ನು ಆಯಾ ವರ್ಗಕ್ಕೆ ಅನುಗುಣವಾಗಿ ಸಮಾನಾಂತರವಾಗಿ ಬೇರ್ಪಡಿಸಿಲ್ಲ. ಆದರೂ, ಇತ್ತೀಚೆಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಎಂಜಿನಿಯರ್‌ ವೃಂದ ಬಡ್ತಿಗಳನ್ನು ನೀಡಲಾರಂಭಿಸಿದೆ.

ಪವಿತ್ರ–2 ಪ್ರಕರಣದ ಹಿನ್ನೆಲೆಯಲ್ಲಿ ಈ ಮೂರೂ ಇಲಾಖೆಗಳಿಗೆ ಸಂಬಂಧಿಸಿ ಲೋಕೋಪಯೋಗಿ ಇಲಾಖೆ ಸಿದ್ಧಪಡಿಸಿದ್ದ ಎಂಜಿನಿಯರ್‌ ವೃಂದದ ಜ್ಯೇಷ್ಠತಾ ಪಟ್ಟಿಯನ್ನು ಪುನರವಲೋಕನ ಮಾಡಿ, ಲೋಕೋಪಯೋಗಿ ಇಲಾಖೆ ಮೂಲಕವೇ ಭರ್ತಿ ಮಾಡಲು ಕ್ರಮ ವಹಿಸಲಾಗಿತ್ತು. ಈ ಸಂದರ್ಭದಲ್ಲಿ ಪಂಚಾಯತ್‌ರಾಜ್ ಇಲಾಖೆ ಮತ್ತು ಜಲಸಂಪನ್ಮೂಲ ಇಲಾಖೆಗಳೂ ಪ್ರತ್ಯೇಕವಾಗಿ ಬಡ್ತಿ ನೀಡಿದರೆ, ಹೆಚ್ಚು ಸೇವಾ ಹಿರಿತನ ಹೊಂದಿರುವವರ ಬದಲು ಕಿರಿಯರಿಗೆ ಬಡ್ತಿ ಸಿಗುವ ಅಪಾಯ ಇದೆ. ಕೆಲವರಿಗೆ ಎರಡೆರಡು ಬಾರಿ ಬಡ್ತಿ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಈ ಕಾರಣಗಳಿಂದಾಗಿ ಈ ಮೂರೂ ಇಲಾಖೆಗಳನ್ನು ಅಧಿಕಾರಿಗಳನ್ನು ಬೇರ್ಪಡಿಸುವ ಪ್ರಕ್ರಿಯೆ ಪೂರ್ಣಗೊಳಿಸುವವರಿಗೆ ಬಡ್ತಿ ನೀಡುವುದನ್ನು ತಡೆ ಹಿಡಿಯಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗಿತ್ತು.

ಸಭಾ ನಿರ್ಧಾರದ ಮರುದಿನವೇ 46 ಎಂಜಿನಿಯರ್‌ಗಳಿಗೆ ಬಡ್ತಿ
ಗೋವಿಂದ ಕಾರಜೋಳ ನೇತೃತ್ವದ ಸಮಿತಿ ನಿರ್ಣಯ ಕೈಗೊಂಡ ಮರುದಿನವೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ 46 ಸಹಾಯಕ ಎಂಜಿನಿಯರ್‌ಗಳಿಗೆ (ಎಇ) ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ಎಇಇ) ಹುದ್ದೆಗೆ ಬಡ್ತಿ ನೀಡಿದೆ. ಈ ಸಹಾಯಕ ಎಂಜಿನಿಯರ್‌ಗಳು 2016ರಲ್ಲಿ ನೇರ ನೇಮಕಗೊಂಡವರು.

ಮೂರೂ ಇಲಾಖೆಗಳು ಬೇರ್ಪಡುವವರೆಗೂ ಬಡ್ತಿ ಪ್ರಕ್ರಿಯೆ ತಡೆ ಹಿಡಿಯುವಂತೆ ಕೋರಿ ಕರ್ನಾಟಕ ಎಂಜಿನಿಯರ್‌ಗಳ ಸಂಘದವರು ಈ ಹಿಂದೆಯೇ ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದರು. ಆದರೆ, ಅದಕ್ಕೆ ಇಲಾಖೆ ಸೊಪ್ಪು ಹಾಕಿಲ್ಲ.

ಜಲಸಂಪನ್ಮೂಲ ಇಲಾಖೆಯಲ್ಲಿ 2003ರಲ್ಲಿ, ಲೋಕೋಪಯೋಗಿ ಮತ್ತು ಪಂಚಾಯತ್‌ರಾಜ್‌ ಇಲಾಖೆಗಳಲ್ಲಿ 2007ರಲ್ಲಿ ಹಾಗೂ ಲೋಕೋಪಯೋಗಿ ಇಲಾಖೆಯಲ್ಲಿ 2012 ಮತ್ತು 2014ರಲ್ಲಿ ಸಹಾಯಕ ಎಂಜಿನಿಯರ್‌ಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲಾಗಿತ್ತು. ಅವರೆಲ್ಲರೂ 2016ರಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯು ನೇರ ನೇಮಕಾತಿ ಮಾಡಿಕೊಂಡಿದ್ದ ಸಹಾಯಕ ಎಂಜಿನಿಯರ್‌ಗಳಿಗಿಂತೆ ಹೆಚ್ಚು ಸೇವಾ ಹಿರಿತನ ಹೊಂದಿದ್ದಾರೆ. ಆದರೆ, ಪಂಚಾಯತ್‌ರಾಜ್‌ ಇಲಾಖೆಯು ಈ ಹಂತದಲ್ಲಿ ಸಹಾಯಕ ಎಂಜಿನಿಯರ್‌ಗಳಿಗೆ ಬಡ್ತಿ ನೀಡಿದರೆ ಉಳಿದೆರಡು ಇಲಾಖೆಗಳ ಸಹಾಯಕ ಎಂಜಿನಿಯರ್‌ಗಳಿಗೆ ಅನ್ಯಾಯವಾಗಲಿದೆ ಎಂಬುದು ಸಂಘದ ಅಭಿಪ್ರಾಯ.

ಪಿಡಬ್ಲ್ಯೂಡಿಯಲ್ಲಿ 556 ಮಂದಿಗೆ ಬಡ್ತಿಗೆ ಸಿದ್ಧತೆ
ಲೋಕೋಪಯೋಗಿ ಇಲಾಖೆಯು 556 ಎಂಜಿನಿಯರ್‌ಗಳಿಗೆ ಬಡ್ತಿ ನೀಡಲು ಸಿದ್ಧತೆ ನಡೆಸಿದೆ.

ಸಹಾಯಕ ಎಂಜಿನಿಯರ್‌ ವೃಂದದಿಂದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ವೃಂದಕ್ಕೆ ಬಡ್ತಿ ನೀಡಲು ಇದೇ 15ರಂದು ಇಲಾಖಾ ಮುಂಬಡ್ತಿ ಸಮಿತಿ ಸಭೆ ಕರೆಯಲಾಗಿದೆ. ‘ಕಾರಜೋಳ ನೇತೃತ್ವದ ಸಮಿತಿಯ ನಿರ್ಧಾರ ಲೋಕೋಪಯೋಗಿ ಇಲಾಖೆಗೂ ಅನ್ವಯ ಆಗುತ್ತದೆ. ಆದರೂ, ಇಲಾಖೆ ತರಾತುರಿಯಲ್ಲಿ ಬಡ್ತಿ ನೀಡಲು ಮುಂದಾಗಿರುವುದು ಸರಿಯಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.