ಬೆಂಗಳೂರು: ‘ಕಾವೇರಿ’ ಆನ್‌ಲೈನ್ ಸೇವೆಯಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿರುವುದರಿಂದ, ಋಣಭಾರ ಪ್ರಮಾಣ ಪತ್ರ (ಇಸಿ) ಮತ್ತು ಸ್ವತ್ತುಗಳಿಗೆ ಸಂಬಂಧಿಸಿದ ಇತರ ದಾಖಲೆ ಪತ್ರಗಳನ್ನು ಆಫ್‌ಲೈನ್ ಮೂಲಕ ನೀಡಬೇಕೆಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಉಪ ನೋಂದಣಾಧಿಕಾರಿಗಳಿಗೆ ಸೂಚಿಸಿದೆ.
ಕಾವೇರಿ ಆನ್‌ಲೈನ್ ಸೇವೆ ಕುರಿತ ಸಾಫ್ಟ್‌ವೇರ್‌ನಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿವೆ. ಹೀಗಾಗಿ ಆನ್‌ಲೈನ್‌ನಲ್ಲಿ ದಾಖಲೆಗಳನ್ನು ನೀಡಿದರೆ ತಪ್ಪುಗಳಾಗಬಹುದು. ಕಾನೂನು ತೊಡಕುಗಳು ಉಂಟಾಗಿ ದಾಖಲೆ ಪಡೆಯುವವರು ಮತ್ತು ಇಲಾಖೆ ಸಂಕಷ್ಟಕ್ಕೆ ಸಿಲುಕಬೇಕಾಗಬಹುದು. ಹೀಗಾಗಿ, ದಾಖಲೆಗಳನ್ನು ನೋಂದಣಾಧಿಕಾರಿಗಳೇ ಸಿದ್ಧಪಡಿಸಿ ನೀಡಬೇಕು ಎಂದು ಇಲಾಖೆ ಹೇಳಿದೆ.
ಸಾಫ್ಟ್‌ವೇರ್ ಸಮಸ್ಯೆ ಸರಿಪಡಿಸುವ ಸಂಬಂಧ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಇ–ಆಡಳಿತ ಇಲಾಖೆ ಜತೆಗೆ ಶೀಘ್ರ ಸಭೆ ನಡೆಸಲಾಗುವುದು. ಈ ಕುರಿತು ಇದೇ 10 ರಂದು ಸುತ್ತೋಲೆ ಹೊರಡಿಸಲಾಗಿದೆ. ಆಫ್‌ಲೈನ್ ಮೂಲಕವೇ ದಾಖಲೆಗಳು ಬೇಕು ಎಂದು ಯಾರಾದರೂ ಒತ್ತಾಯಿಸಿದರೆ ಉಪನೋಂದಣಾಧಿಕಾರಿಗಳು ಆಫ್‌ಲೈನ್ ಮೂಲಕವೇ ನೀಡಬೇಕು ಎಂದು ಸೂಚಿಸಲಾಗಿದೆ.
‘ಸಾಫ್ಟ್‌ವೇರ್ ಸಮಸ್ಯೆಯಿಂದಾಗಿ ಸ್ವತ್ತುಗಳ ನೋಂದಣಿ ಪ್ರಕ್ರಿಯೆ ಮಂದಗತಿಯಲ್ಲಿ ಸಾಗುವ ಅಪಾಯವಿದೆ. ಬೆಂಗಳೂರು ನಗರದಲ್ಲಿ ಸ್ವತ್ತು ನೋಂದಣಿ ಆನ್‌ಲೈನ್ ಮೂಲಕ ಸಾಧ್ಯವಾಗುತ್ತಿಲ್ಲ. ಹೊಸ ಸ್ವತ್ತುಗಳಿಗೆ ಋಣಭಾರ ಪ್ರಮಾಣ ಪತ್ರವನ್ನು ಬಿಡಿಎ ಅಥವಾ ಇತರ ಯಾವುದೇ ಪ್ರಾಧಿಕಾರಗಳು ನೀಡಿದ್ದರೂ ಕಾವೇರಿ ಡೇಟಾಬೇಸ್‌ನಲ್ಲಿ ಅದು ದಾಖಲಾಗಿಲ್ಲ. ಇದರಿಂದ ಸಮಸ್ಯೆಗಳು ಉದ್ಭವಿಸು
ತ್ತವೆ’ ಎಂದು ಹೆಸರು ಹೇಳಲು ಬಯಸದ ಅಧಿಕಾರಿಯೊಬ್ಬರು ತಿಳಿಸಿದರು.
‘ಕೋವಿಡ್ ಇರುವುದರಿಂದ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿತ್ತು. ಆಗ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿದ್ದವು. ಸಾಫ್ಟವೇರ್ ಸಮಸ್ಯೆ ಸರಿ ಆಗುವವರೆಗೆ ಆಫ್‌ಲೈನ್, ಆನ್‌ಲೈನ್ ಎರಡರ ಮೂಲಕವೂ ನೀಡುವ ವ್ಯವಸ್ಥೆ ಮಾಡಲಾಗಿದೆ’ ಎಂದು ಇಲಾಖೆ ಆಯುಕ್ತ ಕೆ.ಪಿ.ಮೋಹನ್ ರಾಜ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.