ಬೆಂಗಳೂರು: ಆಸ್ತಿ ನೋಂದಣಿಯನ್ನು ಸೆಪ್ಟೆಂಬರ್ 2ರಿಂದ ಆಯಾ ಜಿಲ್ಲಾ ವ್ಯಾಪ್ತಿಯ ಯಾವುದೇ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಮಾಡಿಸಬಹುದು.
ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಜಮೀನು, ನಿವೇಶನ, ಮನೆ, ವಾಣಿಜ್ಯ ಕಟ್ಟಡಗಳು ಸೇರಿದಂತೆ ಯಾವುದೇ ಆಸ್ತಿಯನ್ನು ಇದುವರೆಗೂ ಆಯಾ ತಾಲ್ಲೂಕು ವ್ಯಾಪ್ತಿಯ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಮಾತ್ರ ಮಾಡಿಸಬೇಕಿತ್ತು. ಇನ್ನು ಮುಂದೆ ಜಿಲ್ಲಾ ವ್ಯಾಪ್ತಿಗೆ ಅವಕಾಶ ಕಲ್ಪಿಸಲಾಗಿದ್ದು, ಮುಂದಿನ ಹಂತಗಳಲ್ಲಿ ರಾಜ್ಯದ ಯಾವುದೇ ಭಾಗದ ಕಚೇರಿಗೆ ತೆರಳಿ ನೋಂದಣಿ ಮಾಡಿಸುವ ವ್ಯವಸ್ಥೆ ರೂಪಿಸಲಾಗುವುದು ಎಂದರು.
ನಕಲಿ ದಾಖಲೆ ಸೃಷ್ಟಿಸಿ ಬೇರೆಯವರ ಆಸ್ತಿ ಕಬಳಿಸುವ ವಂಚನೆ ಪ್ರಕರಣಗಳನ್ನು ತಡೆಯಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವವರು ಆಸ್ತಿ ದಾಖಲೆಗಳ ಜತೆಗೆ, ಆಸ್ತಿಯ ಮಾಲೀಕತ್ವ ಹೊಂದಿರುವವರ ಆಧಾರ್, ಪ್ಯಾನ್ ಕಾರ್ಡ್ ಅಥವಾ ಪಾಸ್‌ಪೋರ್ಟ್ ಸಲ್ಲಿಸುವುದು ಕಡ್ಡಾಯ. ಯಾವುದೇ ಭಾರತೀಯ ಅಥವಾ ಅನಿವಾಸಿ ಭಾರತೀಯ ಪ್ರಜೆ ಈ ಮೂರರಲ್ಲಿ ಒಂದು ದಾಖಲೆ ಹೊಂದಿರುತ್ತಾರೆ. ಹಾಗಾಗಿ, ಮೂರು ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಿದ ನಂತರವೇ ಆಸ್ತಿ ನೋಂದಣಿ ಮಾಡಲಾಗುತ್ತದೆ ಎಂದು ಹೇಳಿದರು.
ಬೆಂಗಳೂರು ವ್ಯಾಪ್ತಿಯಲ್ಲಿ ಐದು ಕಂದಾಯ ನೋಂದಣಿ ಜಿಲ್ಲೆಗಳಿದ್ದು, ಆಯಾ ವ್ಯಾಪ್ತಿಯ ಯಾವುದೇ ನೋಂದಣಿ ಕಚೇರಿಯಲ್ಲಿ ನೋಂದಣಿಗೆ ವರ್ಷದ ಹಿಂದೆಯೇ ಅವಕಾಶ ಮಾಡಿಕೊಡಲಾಗಿತ್ತು ಎಂದು ವಿವರ ನೀಡಿದರು.
ರಾಜ್ಯದಲ್ಲಿ 252 ಉಪ ನೋಂದಣಾಧಿಕಾರಿ ಕಚೇರಿಗಳು ಇದ್ದರೂ, ಸುಮಾರು 50 ಕಚೇರಿಗಳಲ್ಲಿ ಮಾತ್ರ ಕೆಲಸದ ಒತ್ತಡವಿದೆ. ಹೊಸ ನೀತಿ ಜಾರಿಯಿಂದಾಗಿ ಕಾರ್ಯ ಒತ್ತಡ ಹಂಚಿಕೆಯಾಗಲಿದೆ. ಜನರಿಗೆ ಸಮಯದ ಉಳಿತಾಯವಾಗಲಿದೆ. ಆಸ್ತಿ ನೋಂದಣಿ ಬಯಸುವವರು ಕಾವೇರಿ-2 ತಂತ್ರಾಂಶದ ಮೂಲಕ ತಮಗೆ ಅನುಕೂಲವಾಗುವ ಹಾಗೂ ಜನಸಂದಣಿ ಇಲ್ಲದ ಯಾವುದೇ ಉಪ ನೋಂದಣಿ ಕಚೇರಿ ಆಯ್ಕೆ ಮಾಡಿಕೊಳ್ಳಬಹುದು ಎಂದರು.
ಆಸ್ತಿ ಅಡಮಾನ ಪ್ರಕ್ರಿಯೆಯನ್ನು ಆಯಾ ಬ್ಯಾಂಕ್‌ಗಳಲ್ಲೇ ನಿರ್ವಹಿಸಲು, ರೇರಾ ನೋಂದಣಿಯನ್ನು ಆಯಾ ನಿರ್ಮಾಣ ಕಂಪನಿಗಳಲ್ಲೇ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು. ಇದರಿಂದ ಅನಗತ್ಯ ಅಲೆದಾಟ, ವಿಳಂಬ ತಪ್ಪಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಅಮಾಯಕರ ಜಮೀನುಗಳನ್ನು ವ್ಯವಸ್ಥಿತವಾಗಿ ದೋಚುವ ಪ್ರಕರಣಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಸಾಮಾನ್ಯ ರೈತರ ಜಮೀನಿನ ಹಕ್ಕು ಸಂರಕ್ಷಿಸಲು ಆರ್‌ಟಿಸಿ (ಪಹಣಿ)–ಆಧಾರ್ ಜೋಡಣಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು. ವಂಚನೆಗೆ ಒಳಗಾದವರು ನಿತ್ಯವೂ ತಾಲ್ಲೂಕು ಕಚೇರಿ ಕೋರ್ಟ್‌ಗಳಿಗೆ ಅಲೆಯುತ್ತಿದ್ದಾರೆ. ಹಾಗಾಗಿ ಆಧಾರ್ ಜೋಡಣಾ ಅಭಿಯಾನ ರೂಪಿಸಲಾಗಿದೆ. ಮೂರು ತಾಲ್ಲೂಕುಗಳಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿತ್ತು. ಆ.26ರಿಂದ ರಾಜ್ಯದ ಎಲ್ಲೆಡೆ ಆಧಾರ್ ಜೋಡಣಾ ಅಭಿಯಾನ ಆರಂಭಿಸಲಾಗಿದೆ ಎಂದರು. ರಾಜ್ಯದಲ್ಲಿ 4.05 ಕೋಟಿ ಪಹಣಿಗಳಿವೆ. ಅವುಗಳಲ್ಲಿ ಸುಮಾರು 50 ಸಾವಿರದಷ್ಟು ನಿವೇಶನಗಳಾಗಿ ಪರಿವರ್ತಿತವಾಗಿದ್ದರೂ ಈಗಲೂ ಜಮೀನು ಎಂದು ನಮೂದಿಸಿ ಸರ್ಕಾರಿ ಸೌಲಭ್ಯ ಬ್ಯಾಂಕ್ ಸಾಲ ಪಡೆಯಲಾಗುತ್ತಿದೆ. ಅಂತಹ ಪಹಣಿಗಳಲ್ಲಿ ‘ನಿವೇಶನ’ ಎಂದು ನಮೂದಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.