ಬೆಂಗಳೂರು: ಬೆಂಗಳೂರಿನ ಭಾಗವಾಗಿ ಬೆಳೆಯುತ್ತಿರುವ ತುಮಕೂರನ್ನು ‘ಗ್ರೇಟರ್ ಬೆಂಗಳೂರು’ ವ್ಯಾಪ್ತಿಗೆ ತರುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ ತಿಳಿಸಿದರು.
ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘20 ಸಾವಿರ ಎಕರೆ ವ್ಯಾಪ್ತಿಯಲ್ಲಿ ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶ ತುಮಕೂರಿನಲ್ಲಿ ನಿರ್ಮಾಣವಾಗುತ್ತಿದೆ. ಮೊದಲ ಮತ್ತು ಎರಡನೇ ಹಂತದ ಕಾಮಗಾರಿ ಮುಗಿದಿದೆ. 150 ಕೈಗಾರಿಕೆಗಳು ಹಾಗೂ ಜಪಾನ್ ಟೌನ್‌ಶಿಪ್ ಬರುತ್ತಿದೆ. ಎಚ್‌ಎಎಲ್ ಹೆಲಿಕಾಪ್ಟ್‌ರ್ ತಯಾರಿಕಾ ಕಾರ್ಖಾನೆ ಕೆಲಸ ಆರಂಭಿಸಿದೆ. ಇನ್ನೂ ಹಲವು ದೊಡ್ಡ ಕೈಗಾರಿಕೆಗಳು ಬರಲಿವೆ. ವಿಮಾನ ನಿಲ್ದಾಣ ಮಾಡಿದರೆ ಹೂಡಿಕೆಗೆ ಮತ್ತಷ್ಟು ಉತ್ತೇಜನ ಸಿಗುತ್ತದೆ’ ಎಂದರು.
ಭವಿಷ್ಯದ ತುಮಕೂರು ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ರೂಪಿಸಲಾಗುತ್ತಿದೆ. ನೆಲಮಂಗಲ, ದಾಬಸ್‌ಪೇಟೆವರೆಗೆ ಬೆಂಗಳೂರು ಬೆಳೆದಿದೆ. ತುಮಕೂರುವರೆಗೆ ಮೆಟ್ರೊರೈಲು ವಿಸ್ತರಣೆಗೂ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
‘ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರು ಭೇಟಿ ನೀಡಿದ್ದಾರೆ. ಅವರು ನೀಡುವ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ದಂಪತಿ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ನೂರಕ್ಕೂ ಹೆಚ್ಚು ಪೊಲೀಸ್ ದಂಪತಿ ವರ್ಗಾವಣೆ ಪಡೆದಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.