ಬೆಂಗಳೂರು: ವಾರ್ಷಿಕ ಸರ್ವ ಸದಸ್ಯರ ಸಭೆಗೆ ಗೈರಾಗುವ ಸದಸ್ಯರನ್ನು ಸಹಕಾರ ಸಂಸ್ಥೆಗಳ ಮತದಾರರ ಪಟ್ಟಿಯಿಂದ ಕೈಬಿಡಲು ಕಾರಣವಾಗಿರುವ ಸಹಕಾರ ಕಾಯ್ದೆಯ ಸೆಕ್ಷನ್ 20ಕ್ಕೆ ತಿದ್ದುಪಡಿ ತರುವ ಪ್ರಸ್ತಾವ ರಾಜ್ಯ ಸರ್ಕಾರದ ಮುಂದಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಮಂಗಳವಾರ ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ನ ಮರಿತಿಬ್ಬೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಈಗ ಇರುವ ಕಾಯ್ದೆಯಿಂದ ಹೆಚ್ಚು ಜನರು ಮತದಾನದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ ಎಂಬ ಆಕ್ಷೇಪವಿದೆ. ಅದನ್ನು ಪರಿಹರಿಸಲು ಸಹಕಾರ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ತೀರ್ಮಾನಿಸಿದೆ’ ಎಂದರು.
‘ರಾಜ್ಯ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ನಾಮ ನಿರ್ದೇಶಿತ ಸದಸ್ಯರನ್ನೇ ಸಹಕಾರ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ಮಾಡುತ್ತಿದೆ’ ಎಂದು ಮರಿತಿಬ್ಬೇಗೌಡ ದೂರಿದರು. ಆರೋಪ ಅಲ್ಲಗಳೆದ ಸಚಿವರು, ‘ಅಂತಹ ಪ್ರಯತ್ನ ಸರ್ಕಾರದಿಂದ ನಡೆದಿಲ್ಲ. ಆಯಾ ಸಹಕಾರ ಸಂಸ್ಥೆಗಳ ನಿರ್ದೇಶಕರೇ ಪದಾಧಿಕಾರಿಗಳನ್ನು ಚುನಾಯಿಸುತ್ತಾರೆ. ಮಂಡ್ಯ ಮತ್ತು ಕಲಬುರ್ಗಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳಲ್ಲಿ ನಾಮ ನಿರ್ದೇಶಿತ ಸದಸ್ಯರು ಅಧ್ಯಕ್ಷರಾಗಿದ್ದು, ಅದು ಆ ಸಂಸ್ಥೆಗಳ ನಿರ್ದೇಶಕರೇ ಕೈಗೊಂಡ ನಿರ್ಧಾರ’ ಎಂದು ಉತ್ತರಿಸಿದರು.
ದುಂದು ವೆಚ್ಚ ತಡೆಗೆ ಆಗ್ರಹ: ‘ಬೆಂಗಳೂರು ಚಲನಚಿತ್ರೋತ್ಸವದ ಹೆಸರಿನಲ್ಲಿ ದುಂದುವೆಚ್ಚ ನಡೆಯುತ್ತಿದೆ. ಕರೀನಾ ಕಪೂರ್, ಜಯಾ ಬಚ್ಚನ್ ಅವರಂತಹ ನಟಿಯರನ್ನು ಕೋಟಿಗಟ್ಟಲೆ ಹಣ ವ್ಯಯಿಸಿ ಕಾರ್ಯಕ್ರಮಕ್ಕೆ ಕರೆಸಲಾಗುತ್ತಿದೆ. ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಗಳಿಗೆ ಗುತ್ತಿಗೆ ನೀಡಿ, ಕೋಟಿಗಟ್ಟಲೆ ಹಣ ಪಾವತಿಸಲಾಗುತ್ತಿದೆ. ಈ ರೀತಿಯ ದುಂದುವೆಚ್ಚ ತಡೆಯಬೇಕು’ ಎಂದು ಕಾಂಗ್ರೆಸ್ ಸದಸ್ಯ ಮೋಹನ್ ಕುಮಾರ್ ಕೊಂಡಜ್ಜಿ ಆಗ್ರಹಿಸಿದರು.
ಚಿತ್ರೋತ್ಸವವನ್ನು ವಾರ್ತಾ ಇಲಾಖೆಯ ಮೂಲಕ ನಡೆಸುವುದು ಸರಿಯಲ್ಲ. ಚಲನಚಿತ್ರ ಅಕಾಡೆಮಿಯ ಮೂಲಕವೇ ಚಿತ್ರೋತ್ಸವ ನಡೆಸಬೇಕು ಎಂದು ಆಗ್ರಹಿಸಿದರು.
ವಾರ್ತಾ ಸಚಿವರ ಪರವಾಗಿ ಉತ್ತರ ನೀಡಿದ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ‘ಚಿತ್ರೋತ್ಸವದಲ್ಲಿ ದುಂದುವೆಚ್ಚಕ್ಕೆ ಅವಕಾಶ ನೀಡಿಲ್ಲ. 2017–18ರಲ್ಲಿ ₹ 6.65 ಕೋಟಿ, 2018–19ರಲ್ಲಿ ₹ 4.61 ಕೋಟಿ ಮತ್ತು 2019–20ರಲ್ಲಿ ₹ 7.79 ಕೋಟಿ ವೆಚ್ಚ ಮಾಡಲಾಗಿದೆ. ಚಿತ್ರೋತ್ಸವದ ವೆಚ್ಚ ನಿರ್ವಹಣೆಗೆ ಪ್ರತ್ಯೇಕ ಸಮಿತಿಯೇ ಇರುತ್ತದೆ. 2020–21ನೇ ಸಾಲಿನ ಚಿತ್ರೋತ್ಸವವನ್ನು ಕೋವಿಡ್ ಕಾರಣದಿಂದ ಮುಂದೂಡಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.