ಬೆಂಗಳೂರು: ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶ ಮತ್ತು ವನ್ಯಜೀವಿ ಧಾಮದೊಳಗೇ ಜಲವಿದ್ಯುತ್ ಯೋಜನೆಯೊಂದು ತಲೆ ಎತ್ತಲಿದೆ. ಇದಕ್ಕಾಗಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮತಿ ಪಡೆಯಲು ಪ್ರಯತ್ನವೂ ಆರಂಭವಾಗಿದೆ.
‘ವಾರಾಹಿ ಪಂಪ್ಡ್ ಸ್ಟೋರೇಜ್’ ಸ್ಥಾಪನೆಗೊಳ್ಳಲಿರುವ ಹೊಸ ಜಲ ವಿದ್ಯುತ್ ಯೋಜನೆ. 1,500 ಮೆ.ವಾ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಮೂಕಾಂಬಿಕಾ ಮತ್ತು ಸೋಮೇಶ್ವರ ವನ್ಯಜೀವಿ ಧಾಮಗಳು, ಹುಲಿ ಸಂರಕ್ಷಿತ ಪ್ರದೇಶ ಹಾಗೂ ಪರಿಸರ ಸೂಕ್ಷ್ಮ ಪ್ರದೇಶದ ಮಧ್ಯದಲ್ಲೇ ಯೋಜನೆ ತಲೆ ಎತ್ತಲಿದೆ.
ಈಗಾಗಲೇ ‘ವಾರಾಹಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆ’ಯ ಪ್ರಸ್ತಾವ ಮಂಡಳಿಗೆ ಸಲ್ಲಿಕೆಯಾಗಿದೆ. ನಾಗರಿಕರು ಮತ್ತು ಪರಿಸರವಾದಿಗಳ ವಿರೋಧದ ನಡುವೆಯೂ ‘ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆ’ಗೆ ರಾಜ್ಯ ಸರ್ಕಾರ ಮುಂದಾಗಿತ್ತು. ಈ ಯೋಜನೆಗೆ ಇತ್ತೀಚೆಗಷ್ಟೇ ಕೇಂದ್ರ ಇಂಧನ ಸಚಿವಾಲಯ ಒಪ್ಪಿಗೆ ನೀಡಿತ್ತು. ಅದೇ ಮಾದರಿಯ ಮತ್ತೊಂದು ಯೋಜನೆಗೆ ಹಸಿರು ನಿಶಾನೆ ನೀಡುವ ತಯಾರಿ ನಡೆದಿದೆ. ಯೋಜನೆ ಅನುಷ್ಠಾನಗೊಂಡರೆ ಸುಮಾರು 82 ಹೆಕ್ಟೇರ್ ಅರಣ್ಯಭೂಮಿಗೆ ಹಾನಿಯಾಗಲಿದೆ.
ವಾರಾಹಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮಾಣಿ ಜಲಾಶಯದಿಂದ 26 ಕಿ.ಮೀ ದೂರದಲ್ಲಿ ವಾರಾಹಿ ಭೂಗರ್ಭ ವಿದ್ಯುದಾಗಾರವು ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಇದು 460 ಮೆ.ವಾ ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ಘಟ್ಟದ ತಗ್ಗಿನಲ್ಲಿ ವಿಎಚ್‌ಇಪಿ ಟೇಲ್‌ರೇಸ್ ಕೂಡ ಅಲ್ಪ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತಿದೆ.
ಹೊಸ ಯೋಜನೆಯ ಅಂದಾಜು ವೆಚ್ಚ ₹4,267.80 ಕೋಟಿ. ಯೋಜನೆಯನ್ನು ಎನ್‌ಟಿಪಿಸಿ ಅಂಗಸಂಸ್ಥೆಯಾದ ಟಿಎಚ್‌ಡಿಸಿಸಿ ಇಂಡಿಯಾ ಲಿಮಿಟೆಡ್ ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿ) ಜತೆ ಸೇರಿ ಕಾರ್ಯಗತಗೊಳಿಸಲು ಉದ್ದೇಶಿಸಿದೆ. ಈ ಬಗ್ಗೆ ಕರ್ನಾಟಕ ವಿದ್ಯುತ್ ನಿಗಮವು 184 ಪುಟಗಳ ಕಾರ್ಯಸಾಧ್ಯತಾ ವರದಿಯನ್ನು ಸಲ್ಲಿಸಿದೆ. ಯೋಜನೆ ಕಾರ್ಯಗತಗೊಳಿಸಬೇಕಾದ ಜಾಗದ ಸರ್ವೇಗೆ ಅನುಮತಿ ಕೋರಿ ಟಿಎಚ್‌ಡಿಸಿಸಿ ರಾಜ್ಯದ ಪಿಸಿಸಿಎಫ್ (ವನ್ಯಜೀವಿ) ಅವರಿಗೆ ಪತ್ರ ಬರೆದಿದೆ.
ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯದ ವನ್ಯಜೀವಿ ಮಂಡಳಿಗಳ ಅನುಮೋದನೆ ಅಗತ್ಯವಿದೆ. ಈ ಪ್ರಸ್ತಾವವು 8ರಂದು ನಡೆಯುವ ರಾಜ್ಯ ವನ್ಯಜೀವಿ ಮಂಡಳಿಯ ಕಾರ್ಯಸೂಚಿ ಪಟ್ಟಿಯಲ್ಲಿದೆ. ಯಾವುದೇ ‘ವಿಘ್ನ’ಗಳು ಎದುರಾಗದಿದ್ದರೆ, 2029ರಲ್ಲಿ ಕಾಮಗಾರಿ ಆರಂಭಗೊಳಿಸಿ, 2030ರ ವೇಳೆಗೆ ಕಾಮಗಾರಿ ಮುಗಿಸಲಿದೆ. 2033 ರಿಂದ ವಿದ್ಯುತ್ ಉತ್ಪಾದನೆ ಆರಂಭಗೊಳ್ಳಲಿದೆ.
‘ಕರ್ನಾಟಕದ ವಿದ್ಯುತ್ ಕೊರತೆಯನ್ನು ನೀಗಿಸುವಲ್ಲಿ ಇದು ಮಹತ್ವದ ಯೋಜನೆ ಎನ್ನಲಾಗಿದೆ.
2026–27ರ ವೇಳೆಗೆ ರಾಜ್ಯದ ವಿದ್ಯುತ್ ಬೇಡಿಕೆ ವಿಪರೀತ ಏರಲಿದೆ. ಈ ಯೋಜನೆಯಿಂದ ನಿರಂತರ ವಿದ್ಯುತ್ ಪೂರೈಸಬಹುದು. ಗ್ರಿಡ್ ಸಾಮರ್ಥ್ಯ ಹೆಚ್ಚಿಸಬಹುದಾಗಿದೆ’ ಎಂದು ಟಿಎಚ್‌ಡಿಸಿ ಇಂಡಿಯಾದ ಜನರಲ್ ಮ್ಯಾನೇಜರ್ ಅಮರ್‌ದೀಪ್ ಕೇಂದ್ರ ಮತ್ತು ರಾಜ್ಯಕ್ಕೆ ಸಲ್ಲಿಸಿರುವ ಪ್ರಸ್ತಾವದಲ್ಲಿ ತಿಳಿಸಿದ್ದಾರೆ.
‘ವಾರಾಹಿ ಪಂಪ್ಡ್ ಸ್ಟೋರೇಜ್ ಯೋಜನೆ ಸಂಬಂಧ ಪವರ್ ರೀಸರ್ಚ್ ಅಂಡ್ ಡೆವಲಪ್‌ಮೆಂಟ್ ಕನ್ಸಲ್ಟಂಟ್ (ಪಿಆರ್‌ಡಿಸಿ) ಮತ್ತು ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ (ನಿಯಾಸ್) ಅಧ್ಯಯನ ನಡೆಸಿದ್ದು, ಭವಿಷ್ಯದ ವಿದ್ಯುತ್ ಅಭಾವವನ್ನು ನೀಗಿಸುವ ನಿಟ್ಟಿನಲ್ಲಿ ಈ ಯೋಜನೆ ಅಗತ್ಯ ಎಂದು ಪ್ರತಿಪಾದಿಸಿವೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.