ಬೆಂಗಳೂರು: ’ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರು ತಮ್ಮ ಮಠದಲ್ಲಿನ ಹಾಸ್ಟೆಲ್‌ನಲ್ಲಿ ಇದ್ದು ಓದುತ್ತಿದ್ದ ಮೂರು–ನಾಲ್ಕನೇ ತರಗತಿಯ ಬಡ ಮಕ್ಕಳನ್ನು ಲೈಂಗಿಕವಾಗಿ ಶೋಷಿಸಿದ್ದಾರೆ. ಅವರೊಬ್ಬ ಪ್ರಭಾವಿ ವ್ಯಕ್ತಿಯಾಗಿದ್ದು ಅವರಿಗೆ ಜಾಮೀನು ನೀಡಬಾರದು‘ ಎಂದು ರಾಜ್ಯ ಪ್ರಾಸಿಕ್ಯೂಷನ್ ಹೈಕೋರ್ಟ್‌ಗೆ ಮನವಿ ಮಾಡಿತು.
ಜಾಮೀನು ಕೋರಿ ಶಿವಮೂರ್ತಿ ಶರಣರು ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್‌ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಮುಂದುವರಿಸಿತು.
ವಿಚಾರಣೆ ವೇಳೆ ರಾಜ್ಯ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್, ‘ಸಂತ್ರಸ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ ಎಂದು ವೈದ್ಯಕೀಯ ವರದಿ ಹೇಳಿಲ್ಲ. ಇದು ಪೋಕ್ಸೊ ಪ್ರಕರಣವಾದ್ದರಿಂದ ಹಟಸಂಭೋಗ ನಡೆದಿದ್ದರೆ ಮಾತ್ರವೇ ಅಪರಾಧ ಎಂಬುದು ಇಲ್ಲಿ ಪರಿಗಣನಾರ್ಹವಲ್ಲ. ಮಕ್ಕಳನ್ನು ರಾತ್ರಿ ಊಟವಾದ ನಂತರ ತಮ್ಮ ಕೊಠಡಿಗೆ ಕರೆಸಿಕೊಂಡ ಸ್ವಾಮೀಜಿ ಲೈಂಗಿಕವಾಗಿ ಶೋಷಿಸುತ್ತಿದ್ದರು. ಸಂತ್ರಸ್ತ ಬಾಲಕಿಯರ ಖಾಸಗಿ ಭಾಗಗಳಿಗೆ ಕೈ ಹಾಕುತ್ತಿದ್ದರು ಎಂಬ ಅಂಶಗಳು ಮ್ಯಾಜಿಸ್ಟ್ರೇಟ್ ಮುಂದೆ ಬಾಲಕಿಯರು ನೀಡಿರುವ ತಮ್ಮ ಸ್ವಯಂ ಹೇಳಿಕೆಯಲ್ಲಿ ವ್ಯಕ್ತವಾಗಿವೆ‘ ಎಂದರು.
’ತನಿಖೆಯಲ್ಲಿ ಸ್ವಾಮೀಜಿ ಅಪರಾಧ ಎಸಗಿರುವುದು ಮೇಲ್ನೋಟಕ್ಕೇ ಕಂಡುಬಂದಿದೆ. ಇದೊಂದು ಗಂಭೀರ ಮತ್ತು ಪ್ರಭಾವಿ ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಕೇಸು. ಸ್ವಾಮೀಜಿ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012ರ (ಪೋಕ್ಸೊ) ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ‘ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್‌ಕುಮಾರ್, ಸ್ವಾಮೀಜಿ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರ ವಾದವನ್ನು ಪುಷ್ಟೀಕರಿಸಿದರಲ್ಲದೆ, ’ದೂರು ನೀಡುವ ಮನ್ನ ಇಬ್ಬರೂ ಸಂತ್ರಸ್ತ ಬಾಲಕಿಯರು ಯಾರ ಜೊತೆ ಇಲ್ಲದೆ ಬೆಂಗಳೂರಿಗೆ ಹೇಗೆ ಬರಲು ಸಾಧ್ಯವಾಯಿತು? ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದಾಗಿದ್ದರೆ ಅವರೇಕೆ ತಮ್ಮ ಹಳ್ಳಿಗಳಿಗೆ ಹೋಗಲಿಲ್ಲ? ಪೋಷಕರನ್ನು ಯಾಕೆ ಭೇಟಿ ಮಾಡಲಿಲ್ಲ? ಮೈಸೂರಿಗೇ ಹೋಗಿ ಒಡನಾಡಿ ಸಂಸ್ಥೆಯ ಮುಖಾಂತರ ಏಕೆ ದೂರು ದಾಖಲಿಸಿದರು‘ ಎಂದು ಪ್ರಶ್ನಿಸಿದರು.
ದಿನದ ಕಲಾಪ ಮುಗಿದ ಕಾರಣ ವಿಚಾರಣೆಯನ್ನು ಮಂಗಳವಾರಕ್ಕೆ (ಅ.31) ಮುಂದೂಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.