ADVERTISEMENT

ವೇಶ್ಯಾವಾಟಿಕೆ ಸಂತ್ರಸ್ತೆಯನ್ನು ವಿಚಾರಣೆಗೆ ಗುರಿ ಮಾಡಬೇಡಿ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 0:11 IST
Last Updated 26 ಜೂನ್ 2024, 0:11 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ವೇಶ್ಯಾವಾಟಿಕೆ ಸಂತ್ರಸ್ತೆಯನ್ನು ವಿಚಾರಣೆಗೆ ಗುರಿಪಡಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗ ಮತ್ತು ಅನ್ಯಾಯಕ್ಕೆ ಕಾರಣವಾಗುತ್ತದೆ’ ಎಂದು ಹೈಕೋರ್ಟ್‌ ಪ್ರಕರಣವೊಂದರಲ್ಲಿ ಸ್ಪಷ್ಟಪಡಿಸಿದೆ.

‘ವೇಶ್ಯಾವಾಟಿಕೆ ಆರೋಪಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ವಿಚಾರಣಾ ನ್ಯಾಯಾಲಯದ ನ್ಯಾಯಿಕ ಪ್ರಕ್ರಿಯೆ ರದ್ದುಪಡಿಸಬೇಕು’ ಎಂದು ಕೋರಿ ಸಂತ್ರಸ್ತೆ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ‍ಪುರಸ್ಕರಿಸಿದೆ. ಅಂತೆಯೇ, ಸಂತ್ರಸ್ತ ಮಹಿಳೆಯ ವಿರುದ್ಧ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಯನ್ನು ರದ್ದುಪಡಿಸಿದೆ.

‘ವೇಶ್ಯಾವಾಟಿಕೆ ಸಂತ್ರಸ್ತೆಯನ್ನು ಶಿಕ್ಷಿಸಬೇಕು ಎಂದು ಮಾನವ ಕಳ್ಳಸಾಗಣೆ ಕಾಯ್ದೆಯಡಿ ಎಲ್ಲಿಯೂ ಹೇಳಿಲ್ಲ. ಹೀಗಾಗಿ, ವೇಶ್ಯಾವಾಟಿಕೆ ಸಂತ್ರಸ್ತೆಯನ್ನು ವಿಚಾರಣೆಗೆ ಗುರಿಪಡಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ’ ಎಂಬ ಬಾಂಬೆ ಹೈಕೋರ್ಟ್‌ ಆದೇಶವನ್ನು ಉಲ್ಲೇಖಿಸಿರುವ ನ್ಯಾಯಪೀಠ, ‘ವೇಶ್ಯಾವಾಟಿಕೆಯ ಸಂತ್ರಸ್ತೆಯನ್ನು ಶಿಕ್ಷಿಸಲು ಯಾವುದೇ ಕಾನೂನು ಇಲ್ಲ’ ಎಂದು ಹೇಳಿದೆ.

ADVERTISEMENT

‘ವೇಶ್ಯಾವಾಟಿಕೆ ಆರೋಪ ಸಂಬಂಧ ಸಂತ್ರಸ್ತೆಯ ವಿರುದ್ಧ ಮಾನವ ಕಳ್ಳ ಸಾಗಣೆ ತಡೆ ಕಾಯ್ದೆ-1956ರ ಕಲಂ 5ರ ಅಡಿಯಲ್ಲಿ ವಿಚಾರಣಾ ನ್ಯಾಯಾಲಯ ಸಂಜ್ಞೇಯ ಅಪರಾಧವನ್ನು ಪರಿಗಣಿಸಿದೆ. ಆದರೆ, ಸಂತ್ರಸ್ತ ಮಹಿಳೆಯನ್ನು ಶಿಕ್ಷಿಸಬೇಕು ಎಂದು ಕಲಂ 5ರಲ್ಲಿ ಎಲ್ಲಿಯೂ ಹೇಳಿಲ್ಲ. ಹಾಗಾಗಿ, ಆಕೆಯ ವಿರುದ್ಧ ಮುಂದಿನ ವಿಚಾರಣೆಗೆ ಅನುಮತಿ ನೀಡುವುದು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗಲಿದೆ ಮತ್ತು ಅನ್ಯಾಯಕ್ಕೆ ಕಾರಣವಾಗಲಿದೆ’ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ವಿವರಿಸಿದೆ.

ಪ್ರಕರಣವೇನು?: 

ವೇಶ್ಯಾವಾಟಿಕೆಯಲ್ಲಿ ತೊಡಗಿಸಲು ಕೆಲ ಹುಡುಗಿಯರನ್ನು ರಾಜ್ಯದಿಂದ ಗೋವಾಕ್ಕೆ ವಾಹನದಲ್ಲಿ ಅಕ್ರಮವಾಗಿ ಕರೆದೊಯ್ಯುತ್ತಿದ್ದ ಬಗ್ಗೆ ಬಂದ ಮಾಹಿತಿ ಆಧರಿಸಿ 2013ರ ಜನವರಿ 13ರಂದು ರಾಜ್ಯದ ತಾಲ್ಲೂಕು ಕೇಂದ್ರವೊಂದರ ಠಾಣೆಯ ಪೊಲೀಸರು ವಾಹನವನ್ನು ತಡೆದು ಪರಿಶೀಲಿಸಿದ್ದರು.

ಈ ವೇಳೆ; ಅರ್ಜಿದಾರ ಸಂತ್ರಸ್ತೆ ಸೇರಿದಂತೆ ಇತರೆ ಹುಡುಗಿಯರನ್ನು ತಲಾ ₹ 10 ಸಾವಿರ ಪಾವತಿಸಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಲು ಕರೆದುಕೊಂಡು ಹೋಗುತ್ತಿರುವುದು ತಿಳಿದು ಬಂದಿತ್ತು. ಪೊಲೀಸರು ತನಿಖೆ ಪೂರ್ಣಗೊಳಿಸಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಅರ್ಜಿದಾರರನ್ನು 8ನೇ ಆರೋಪಿಯನ್ನಾಗಿ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.