ಮಂಗಳೂರು: ‘ದೇಶ ಕಂಡ ಮಹಾನ್ ಸುಳ್ಳುಗಾರ ಪ್ರಧಾನಿ ನರೇಂದ್ರ ಮೋದಿ’ ಎಂದು ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್ ವಾಗ್ದಾಳಿ ನಡೆಸಿದರು.
ನಗರದ ಜಪ್ಪಿನಮೊಗರುವಿನಲ್ಲಿ ಭಾನುವಾರ ನಡೆದ ‘ಪೌರತ್ವ ಸಂರಕ್ಷಣಾ ಸಮಾವೇಶ’ವನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ಸ್ವಾಮಿನಾಥನ್ ವರದಿ ಜಾರಿ, ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿ, ಬಾಲಾಕೋಟ್ ದಾಳಿಗೆ ಸಾಕ್ಷ್ಯ, ಪುಲ್ವಾಮಾದಲ್ಲಿನ ವೈಫಲ್ಯ ಸೇರಿದಂತೆ ಅವರ ಸುಳ್ಳುಗಳ ಸರಮಾಲೆಯೇ ಇದೆ. ನೋಟು ರದ್ದತಿ ಮಾಡಿ ಆರ್ಥಿಕತೆ ಕೆಡಿಸುವ ಬದಲು, ಮದ್ಯ ರದ್ದತಿ ಮಾಡುತ್ತಿದ್ದರೆ ನಾವೆಲ್ಲ ಬೆಂಬಲಿಸುತ್ತಿದ್ದೆವು’ ಎಂದರು.
‘ಜನತೆಯ ಪೌರತ್ವದ ಬಗ್ಗೆ ನಿಮಗೆ ಸಂಶಯವಿದ್ದರೆ, ನಿಮ್ಮ ಸರ್ಕಾರವೂ ಶಂಕಿತವೇ. ತ್ರಿವಳಿ ತಲಾಖ್ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿರಿ. ಆದರೆ, ಒಂದೂ ತಲಾಖ್ ಹೇಳದೇ ಹೆಂಡತಿಯನ್ನು ಬಿಟ್ಟವರಿಗೆ ಏನು ಶಿಕ್ಷೆ?’ ಎಂದು ಪ್ರಶ್ನಿಸಿದರು.
‘ವಸುಧೈವ ಕುಟುಂಬಕಂ ಎಂಬ ವೇದ–ಉಪನಿಷತ್‌ಗಳ ಸಂದೇಶವನ್ನು ಮೋದಿ–ಅಮಿತ್ ಷಾ ಒಡೆದು ಹಾಕುತ್ತಿದ್ದಾರೆ. ಒಂದು ಬೆರಳನ್ನು ತೋರಿಸಿದರೆ ಮುರಿದು ಹಾಕಬಹುದು. ಆದರೆ, ಐದು ಬೆರಳು ಒಗ್ಗಟ್ಟಾಗಿ ಮುಷ್ಟಿಯಿಟ್ಟು ಹೊಡೆದರೆ 32 ಹಲ್ಲುಗಳೂ ಬಿದ್ದು ಹೋಗುತ್ತವೆ. ಅದೇ ರೀತಿ ಶೋಷಿತ ಸಮುದಾಯಗಳು ಒಗ್ಗಟ್ಟಾಗಿ ಹೋರಾಟ ಮಾಡಬೇಕು’ ಎಂದು ಕರೆ ನೀಡಿದರು.
‘ಗುಜರಾತ್ ಗಲಭೆಯು ದೆಹಲಿಯಲ್ಲಿ ಮರುಕಳಿಸಿತು. ಇಂತಹ ಪ್ರಯೋಗಕ್ಕಾಗಿಯೇ ಹರಿಯಾಣದಲ್ಲಿ ಪ್ರಚಾರಕರಾಗಿದ್ದ ಮೋದಿಯನ್ನು ಆರ್‌ಎಸ್ಎಸ್ ಮುಖ್ಯಮಂತ್ರಿ ಹಾಗೂ ಬಳಿಕ ಪ್ರಧಾನಿ ಹುದ್ದೆಗೆ ಸೂಚಿಸಿತ್ತು’ ಎಂದರು.
‘ಮೋದಿಗೆ ಸುಳ್ಳು ಹೇಳಲು ಹಿಟ್ಲರ್ ಆದರ್ಶವಾಗಿರಬೇಕು. ತನ್ನ ಸಲಹೆಗಾರ ಗೊಬೆಲ್ಸ್ ಮಾತು ಕೇಳಿದ ಹಿಟ್ಲರ್ ಕೊನೆಗೆ ತಾನೇ ಗುಂಡಿಕ್ಕಿ ಕೊಂಡು ಸತ್ತು ಹೋದ ಎಂಬ ಇತಿಹಾಸ ಮರೆಯಬಾರದು’ ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.