ಬೆಂಗಳೂರು: ಸರ್ಕಾರಿ ಹಾಸ್ಟೆಲ್ ಹೊರಗುತ್ತಿಗೆ ಸಿಬ್ಬಂದಿಯ ವೇತನ, ಸೇವಾ ಭದ್ರತೆ ಸಂಬಂಧಿಸಿದಂತೆ ಒಂದು ತಿಂಗಳ ಒಳಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.
ಈ ಹಿನ್ನೆಲೆಯಲ್ಲಿ, ವಿವಿಧ ಬೇಡಿಕೆ ಗಳನ್ನು ಮುಂದಿಟ್ಟು ಸ್ವಾತಂತ್ರ್ಯ ಉದ್ಯಾನದ ಬಳಿ ಸರ್ಕಾರಿ ಹಾಸ್ಟೆಲ್ ಮತ್ತು ವಸತಿಶಾಲಾ ಹೊರಗುತ್ತಿಗೆ ನೌಕರರ ಸಂಘದ ಅಡಿಯಲ್ಲಿ ಬುಧವಾರ ಬೆಳಿಗ್ಗೆ ಆರಂಭಿಸಿದ್ದ ಅನಿರ್ದಿಷ್ಟ ಸಾಮೂಹಿಕ ಧರಣಿಯನ್ನು ಹಿಂತೆಗೆದುಕೊಳ್ಳಲಾಯಿತು.
ಕರ್ತವ್ಯದಿಂದ ಬಿಡುಗಡೆ ಮಾಡಿರುವ ಹಾಸ್ಟೆಲ್ ಹೊರಗುತ್ತಿಗೆ ಸಿಬ್ಬಂದಿಯನ್ನು ಮುಂದುವರಿಸಬೇಕು, ನಿವೃತ್ತಿವರೆಗೆ ಸೇವಾ ಭದ್ರತೆ ನೀಡ ಬೇಕು, ಐದಾರು ತಿಂಗಳಿಂದ ಬಾಕಿ ಇರುವ ವೇತನ ಪಾವತಿಸಬೇಕು ಮತ್ತಿತರ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಸಿಬ್ಬಂದಿ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಸಂಘದ ಪದಾಧಿಕಾರಿಗಳ ಜೊತೆ ಗುರುವಾರ ಮಾತುಕತೆ ನಡೆಸಿದ ಮುಖ್ಯ ಮಂತ್ರಿ, ಶುಕ್ರವಾರದಿಂದಲೇ ಸಿಬ್ಬಂದಿ ಮರಳಿ ಕೆಲಸಕ್ಕೆ ಹಾಜರಾಗಬಹುದು. ಬೇಡಿಕೆಗಳ ಬಗ್ಗೆ ತಕ್ಷಣ ಪರಿಹಾರ ಕಂಡುಕೊಳ್ಳುವುದು ಅಸಾಧ್ಯ. ನೂತನ ಸಚಿವರಿಗೆ ಇನ್ನೂ ಖಾತೆ ಹಂಚಿಕೆ ಆಗಿಲ್ಲ. ಅಲ್ಲದೆ, ಆರ್ಥಿಕ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿದ ಬಳಿಕವೇ ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಮನವರಿಕೆ ಮಾಡಿದರು. ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಮುಖ್ಯಮಂತ್ರಿ ಪರವಾಗಿ ಧರಣಿ ನಿರತರನ್ನು ಗುರುವಾರ ಸಂಜೆ ಭೇಟಿ ಮಾಡಿ ಮನವಿ ಸ್ವೀಕರಿಸಿದರು.
ಸಂಘದ ಅಧ್ಯಕ್ಷ ನಿತ್ಯಾನಂದಸ್ವಾಮಿ, ‘ಮುಖ್ಯಮಂತ್ರಿ ನಮ್ಮ ಅಹವಾಲುಗಳನ್ನು ಆಲಿಸಿದ್ದಾರೆ. ತೀರ್ಮಾನ ಕೈಗೊಳ್ಳುವ ನಿಟ್ಟಿನಲ್ಲಿ ಸೂಚನೆಯನ್ನೂ ನೀಡಿದ್ದಾರೆ. ನಮ್ಮ ಹೋರಾಟಕ್ಕೆ ತಾತ್ಕಾಲಿಕ ಜಯ ಸಿಕ್ಕಿದೆ’ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.