ಬೆಂಗಳೂರು: ವೃಂದ ಮತ್ತು ನೇಮಕಾತಿ (ಸಿ ಆ್ಯಂಡ್ ಆರ್) 2017ರ ನಿಯಮದ ತಿದ್ದುಪಡಿ, ಶಿಕ್ಷಕರ ಬಡ್ತಿ ಹಾಗೂ ವರ್ಗಾವಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಶಿಕ್ಷಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇದರಿಂದ, ಕೆಲವು ಕಡೆಗಳ ಶಾಲೆಗಳಲ್ಲಿ ತರಗತಿಗಳ ನಡೆಯದೇ ಮಕ್ಕಳಿಗೆ ತೊಂದರೆ ಆಯಿತು.
‘ಒಂದರಿಂದ ಐದನೇ ತರಗತಿವರೆಗೆ ಬೋಧಿಸುವ ಶಿಕ್ಷಕರು ಪದವೀಧರರಾಗಿದ್ದಲ್ಲಿ ಅವರನ್ನು ಆರು ಮತ್ತು ಎಂಟನೇ ತರಗತಿವರೆಗೆ ಪಾಠ ಮಾಡಲು ಜಿಪಿಟಿ ಶಿಕ್ಷಕರ ಹುದ್ದೆಗಳಿಗೆ ಬಡ್ತಿ ನೀಡಬೇಕು. ಇದಕ್ಕೆ ಅಡ್ಡಿಯಾಗಿರುವ ಸಿ ಆ್ಯಂಡ್ ಆರ್ ನಿಯಮ–2017ಕ್ಕೆ ತಿದ್ದುಪಡಿ ಮಾಡಬೇಕು. ಸೇವಾ ಜ್ಯೇಷ್ಠತೆ, ಮುಂಬಡ್ತಿ, ವರ್ಗಾವಣೆ ಪ್ರಕ್ರಿಯೆಯಲ್ಲಿ ಆಗಿರುವ ಅನ್ಯಾಯ ಸರಿಪಡಿಸಬೇಕು’ ಎಂದು ಸಂಘದ ಅಧ್ಯಕ್ಷ ಕೆ.ನಾಗೇಶ್ ಆಗ್ರಹಿಸಿದರು.
‘ಪ್ರೌಢಶಾಲೆಗಳ ಬಡ್ತಿ ನಿಯಮದಂತೆ 2016ರ ಮೊದಲು ನೇಮಕಾತಿ ಹೊಂದಿದ ಹಾಗೂ ಬಿ.ಇಡಿ ಪದವಿ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲು ಆದ್ಯತೆ ನೀಡಬೇಕು. ನಂತರ ಹೊಸದಾಗಿ ನೇಮಕವಾದ ಜಿಪಿಟಿ ಶಿಕ್ಷಕರನ್ನು ಪರಿಗಣಿಸಬೇಕು. ಹಿಂದಿನ ನಿಯಮದಂತೆ ಮುಖ್ಯ ಶಿಕ್ಷಕರ ಹುದ್ದೆಗೆ ವಿದ್ಯಾರ್ಹತೆಯನ್ನು ಪರಿಗಣಿಸದೇ ಅಖಂಡ ಸೇವಾಹಿರಿತನದ ಆಧಾರದ ಮೇಲೆ ಬಡ್ತಿಗೆ ಅವಕಾಶ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ‘ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸೇವಾ ಹಿರಿತನದ ಆಧಾರದ ಮೇಲೆ ಮುಖ್ಯೋಪಾಧ್ಯಾಯ ಹುದ್ದೆ ನೀಡಬೇಕು. ಪದವೀಧರ ಶಿಕ್ಷಕರಿಗೆ ‘ಪದವೀಧರ ಶಿಕ್ಷಕ’ ಪದನಾಮ ನೀಡಬೇಕು. ಸಿ ಆ್ಯಂಡ್ ಆರ್ ನಿಯಮಕ್ಕೆ ತಿದ್ದುಪಡಿಗೊಳಿಸಿ ಪೂರ್ವಾನ್ವಯ ಮಾಡಿರುವುದು ತಪ್ಪು. ಇದರಿಂದ ಪ್ರಾಥಮಿಕ ಶಿಕ್ಷಕರಿಗೆ ಅನ್ಯಾಯವಾಗಿದೆ. ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಿದರೆ ಸರ್ಕಾರಕ್ಕೆ ಯಾವುದೇ ರೀತಿ ಹೊರೆಯಾಗುವುದಿಲ್ಲ’ ಎಂದು ಹೇಳಿದರು.
ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ, ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಮಾಜಿ ಅಧ್ಯಕ್ಷ ಬಸವರಾಜ್ ಗುರಿಕಾರ್, ಸಿಐಟಿಯು ಅಧ್ಯಕ್ಷೆ ಎಸ್. ವರಲಕ್ಷ್ಮಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.