ADVERTISEMENT

ಬೆಳಗಾವಿ ಅಧಿವೇಶನಕ್ಕೂ ಮುನ್ನ BPL ಕಾರ್ಡ್ ವಾಪಸ್ ನೀಡದಿದ್ದರೆ ಪ್ರತಿಭಟನೆ: ಅಶೋಕ್

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 11:14 IST
Last Updated 21 ನವೆಂಬರ್ 2024, 11:14 IST
<div class="paragraphs"><p>ಜಯನಗರದ ಅರಸು ಕಾಲೋನಿಯಲ್ಲಿ ರೇಷನ್‌ ಕಾರ್ಡ್‌ ರದ್ದುಗೊಂಡ ಕುಟುಂಬದವರನ್ನು&nbsp;ಪ್ರತಿಪಕ್ಷ ನಾಯಕ ಆರ್‌.ಅಶೋಕ ಭೇಟಿಯಾದರು</p></div>

ಜಯನಗರದ ಅರಸು ಕಾಲೋನಿಯಲ್ಲಿ ರೇಷನ್‌ ಕಾರ್ಡ್‌ ರದ್ದುಗೊಂಡ ಕುಟುಂಬದವರನ್ನು ಪ್ರತಿಪಕ್ಷ ನಾಯಕ ಆರ್‌.ಅಶೋಕ ಭೇಟಿಯಾದರು

   

ಬೆಂಗಳೂರು: ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗುವ ಮುನ್ನವೇ ರಾಜ್ಯ ಸರ್ಕಾರ ಜನರಿಗೆ ಬಿಪಿಎಲ್‌ ಪಡಿತರ ಚೀಟಿ ವಾಪಸ್‌ ನೀಡಬೇಕು. ಇಲ್ಲವಾದರೆ ತೀವ್ರವಾದ ಹೋರಾಟ ಮಾಡಿ ಸರ್ಕಾರಿ ಕಚೇರಿ ಮಾತ್ರವಲ್ಲ, ವಿಧಾನಸೌಧಕ್ಕೂ ಬೀಗ ಹಾಕುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಎಚ್ಚರಿಕೆ ನೀಡಿದರು.

ಜಯನಗರದ ಅರಸು ಕಾಲೋನಿಯಲ್ಲಿ ರೇಷನ್‌ ಕಾರ್ಡ್‌ ರದ್ದುಗೊಂಡ ಕುಟುಂಬದವರನ್ನು ಅವರು ಭೇಟಿ ಮಾಡಿ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

ADVERTISEMENT

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನಭಾಗ್ಯ ಎಂದು ಹೇಳಿ ಕನ್ನಭಾಗ್ಯ ಕೊಟ್ಟಿದ್ದಾರೆ. ಅನ್ನವನ್ನು ಕದ್ದು ಲಕ್ಷಾಂತರ ಜನರಿಗೆ ಅನ್ಯಾಯ ಮಾಡಿದ್ದಾರೆ. ಅರಸು ಕಾಲೋನಿಯಲ್ಲಿ 45 ವರ್ಷದಿಂದ ರೇಷನ್‌ ಕಾರ್ಡ್‌ ಹೊಂದಿದ್ದ ವೃದ್ಧೆ, ಈಗ ಅರ್ಹತೆ ಕಳೆದುಕೊಂಡಿದ್ದಾರೆ. ಅಂಕಿ ಅಂಶದ ಪ್ರಕಾರ, 250 ಸರ್ಕಾರಿ ನೌಕರರ ಬಳಿ ರೇಷನ್‌ ಕಾರ್ಡ್‌ ಇದ್ದರೂ, 12 ಲಕ್ಷ ಜನರ ಕಾರ್ಡ್‌ ರದ್ದು ಮಾಡಲು ಸರ್ಕಾರ ಮುಂದಾಗಿದೆ. ಏನೂ ಭಯ ಬೇಡವೆಂದು ಸಿಎಂ ಸಿದ್ದರಾಮಯ್ಯ ಹೇಳಿದರೆ, ಆಹಾರ ಸಚಿವರು ಮತ್ತೆ ಅರ್ಜಿ ಹಾಕಿ ಎಂದು ಹೇಳುತ್ತಾರೆ. ಕಾಂಗ್ರೆಸ್‌ ನಾಯಕರು ತಪ್ಪು ಮಾಡಿದ ಮೇಲೆ ಜನರು ಯಾಕೆ ಮರಳಿ ಅರ್ಜಿ ಹಾಕಬೇಕು? ಎಂದು ಪ್ರಶ್ನೆ ಮಾಡಿದರು.

ಮರಳಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದರೆ ಒಂದು ಕಾರ್ಡ್‌ಗೆ ₹10 ಸಾವಿರದಿಂದ ₹15 ಸಾವಿರ ಲಂಚ ನೀಡಬೇಕಾಗುತ್ತದೆ. ಯಾರೂ ಅರ್ಜಿ ಹಾಕಬಾರದು, ಸರ್ಕಾರವೇ ಮರಳಿ ಪಡಿತರ ಚೀಟಿ ಕೊಡಬೇಕು. ದೇವಸ್ಥಾನದ ಮುಂದೆ ಹೂ ಮಾರುವವರು, ಸೊಪ್ಪು ಮಾರುವವರ ಪಡಿತರ ಚೀಟಿ ರದ್ದುಪಡಿಸಲಾಗಿದೆ. ಇದರ ವಿರುದ್ಧ ಸದನದಲ್ಲಿ ಹಾಗೂ ಹೊರಗೆ ಪ್ರತಿಭಟಿಸಲಾಗುವುದು ಎಂದು ತಿಳಿಸಿದರು.

ಏಕಾಏಕಿ ಪಡಿತರ ಚೀಟಿ ರದ್ದು ಮಾಡಲು ಸರ್ಕಾರಕ್ಕೆ ಅಧಿಕಾರವಿಲ್ಲ. ಸರ್ಕಾರದ ಖಜಾನೆಯಲ್ಲಿ ಹಣ ಖಾಲಿಯಾಗಿದ್ದು, ರಸ್ತೆ ಗುಂಡಿ ಮುಚ್ಚಲು ಕೂಡ ಹಣವಿಲ್ಲ. ₹20 ಸಾವಿರ ಕೋಟಿಯಿಂದ ₹30 ಸಾವಿರ ಕೋಟಿ  ಉಳಿಸಿ, ಶಾಸಕರ ಬಂಡಾಯ ಶಮನಕ್ಕೆ ಬಳಸಲಾಗುತ್ತದೆ ಎಂದು ದೂರಿದರು.

ಸಚಿವರ ಮನೆ ಆಧುನೀಕರಣಕ್ಕೆ ₹ 50 ಕೋಟಿವರೆಗೆ ಮತ್ತು ಮುಖ್ಯಮಂತ್ರಿ ಮನೆ ನವೀಕರಣಕ್ಕೆ₹ 2 ಕೋಟಿ ಖರ್ಚು ಮಾಡಲಾಗಿದೆ. ಆದರೆ ಬಡ ಜನರಿಗೆ ಅಕ್ಕಿ ಕೊಡಲು ಸರ್ಕಾರದ ಬಳಿ ಹಣವಿಲ್ಲ ಎಂದು  ಅವರು ಆಕ್ರೋಶ ವ್ಯಕ್ತಪಡಿಸಿದರು. ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಸಿ.ಕೆ.ರಾಮಮೂರ್ತಿ ಉಪಸ್ಥಿತರಿದ್ದರು.

ಅನ್ನ, ಆರೋಗ್ಯದಲ್ಲಿ ಮೋಸ:

ಇದೇ ವೇಳೆ ಸಂಜಯಗಾಂಧಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕಾಂಗ್ರೆಸ್‌ ಸರ್ಕಾರ ಕಳೆದ 16 ತಿಂಗಳಲ್ಲಿ ಜನರ ತಲೆಗೆ ಚಪ್ಪಡಿ ಎಳೆಯುವ ಕೆಲಸ ಮಾಡಿದೆ. ಆರೋಗ್ಯ ಇಲಾಖೆಯಲ್ಲಿ ಹಣ ಕೊರತೆಯಿಂದಾಗಿ ಔಷಧಿ ಖರೀದಿ ಸಾಧ್ಯವಾಗುತ್ತಿಲ್ಲ. ಸರ್ಕಾರ ಶಿಕ್ಷಣ ಮತ್ತು ಆರೋಗ್ಯಕ್ಕೆ ಅನುದಾನ ಕಡಿತ ಮಾಡಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ನಿರ್ವಹಣೆಗೂ ಹಣವಿಲ್ಲ. ಇದಕ್ಕಾಗಿ ಸೇವಾ ಶುಲ್ಕವನ್ನು ಏರಿಸಲಾಗಿದೆ. ಅನ್ನ ಮತ್ತು ಆರೋಗ್ಯದ ವಿಚಾರದಲ್ಲಿ ಸಿದ್ದರಾಮಯ್ಯನವರ ಸರ್ಕಾರ ಜನರಿಗೆ ಮೋಸ ಮಾಡಿದೆ ಎಂದು ದೂರಿದರು.

ಒಂದು ಕಡೆ ಜಮೀನು ಹೋಗುತ್ತಿದೆ, ಮತ್ತೊಂದು ಕಡೆ ರೇಷನ್‌ ಕಾರ್ಡ್‌ ಹೋಗುತ್ತಿದೆ, ಈಗ ಉಚಿತ ಆರೋಗ್ಯವೂ ದೊರೆಯುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ಶುಲ್ಕಗಳನ್ನು ಹೆಚ್ಚು ಮಾಡಿರುವುದೇ ಖಜಾನೆ ಖಾಲಿಯಾಗಿರುವುದಕ್ಕೆ ಸಾಕ್ಷಿ. ಐದು ಗ್ಯಾರಂಟಿಗಳಿಗಾಗಿ ಜನರ ಮೇಲೆ ತೆರಿಗೆ ಹೊರೆ ಹಾಕಲಾಗುತ್ತಿದೆ. ಸಿಎಂ ಸಿದ್ದರಾಮಯ್ಯನವರ ಪ್ರಕಾರ ಇದು ಬಡವರ ಪರವಾದ ಸರ್ಕಾರವೇ ಎಂದು ಪ್ರಶ್ನಿಸಿದರು.

ಮುಡಾ ಹಗರಣದ ನಂತರ  ಸಿದ್ದರಾಮಯ್ಯ ಮಾನಸಿಕ ಸ್ಥಿಮಿತ ಕಳೆದುಕೊಂಡು ಜನರ ಮೇಲೆ ತೆರಿಗೆ ಹಾಕುತ್ತಿದ್ದಾರೆ. ಲಂಚ ಇದ್ದರೆ ಮಾತ್ರ ವಿಧಾನಸೌಧಕ್ಕೆ ಪ್ರವೇಶ ಎಂಬ ಸ್ಥಿತಿ ಇದೆ. ಆರೋಗ್ಯ ಸೇವೆಯನ್ನು ಸಂಪೂರ್ಣ ಉಚಿತವಾಗಿ ನೀಡಬೇಕು. ಇದರ ಮೇಲೂ ಸರ್ಕಾರ ವಕ್ರದೃಷ್ಟಿ ಬೀರಿದೆ ಎಂದು ಆಕ್ರೋಶ ಹೊರಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.