ADVERTISEMENT

ನಮ್ಮ ಗ್ಯಾರಂಟಿಗಳು ದೇಶಕ್ಕೇ ಮಾದರಿಯಾಗಿವೆ: ಡಿ.ಕೆ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2024, 14:33 IST
Last Updated 1 ನವೆಂಬರ್ 2024, 14:33 IST
<div class="paragraphs"><p>ಡಿ.ಕೆ.ಶಿವಕುಮಾರ್</p></div>

ಡಿ.ಕೆ.ಶಿವಕುಮಾರ್

   

ಬೆಂಗಳೂರು: ‘ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಪಕ್ಷದ ಹಿರಿಯರು. ನಾವು ತಿದ್ದಿಕೊಳ್ಳಲಿ ಎಂದು ಹೇಳುತ್ತಾರೆ. ಅವರ ಸಲಹೆಗಳನ್ನು ನಾವು ಪಾಲಿಸುತ್ತೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ರಾಜ್ಯೋತ್ಸವದ ಸಮಾರಂಭದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು. ಪಕ್ಷದ ಕಚೇರಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಖರ್ಗೆ ಅವರು ರಾಜ್ಯದ ನಾಯಕರಿಗೆ ಬುದ್ಧಿವಾದ ಹೇಳಿದ್ದರ ಬಗ್ಗೆ ಪ್ರಶ್ನಿಸಿದಾಗ, ‘ಒಗ್ಗಟ್ಟಾಗಿರಿ ಎಂದು ಪಕ್ಷದ ಕೆಲ ಕಾರ್ಯಕರ್ತರಿಗೆ ಹೇಳಿದ್ದಾರೆ’ ಎಂದು ಉತ್ತರಿಸಿದರು.

ADVERTISEMENT

‘ನಾನು ಕೆಪಿಸಿಸಿ ಅಧ್ಯಕ್ಷನಾದ ದಿನದಿಂದ ರಾಜ್ಯದ ನಾಯಕರ ಮಧ್ಯೆ ಎಂದಾದರೂ ಗಲಾಟೆಗಳಾಗಿವೆಯೇ? ‍ಪಕ್ಷ ಮತ್ತು ಸರ್ಕಾರವನ್ನು ನಾವು ಸಮನ್ವಯದಿಂದ ನಡೆಸಿಕೊಂಡು ಹೋಗುತ್ತಿದ್ದೇವೆ’ ಎಂದರು.

‘ಶಕ್ತಿ ಯೋಜನೆ ಬಗ್ಗೆ ಶೇ 5–10ರಷ್ಟು ಮಹಿಳೆಯರು ಏನು ಹೇಳುತ್ತಾರೆ ಎಂಬುದನ್ನಷ್ಟೇ ನಾನು ಪ್ರಸ್ತಾಪಿಸಿದ್ದೆ. ನಾನು ಮಾತನಾಡಿರುವ ವಿಡಿಯೊವನ್ನು ಪೂರ್ತಿ ನೋಡಿ, ಆಮೇಲೆ ಮಾತನಾಡಿ’ ಎಂದು ಗ್ಯಾರಂಟಿ ಪರಿಷ್ಕರಣೆ ಬಗ್ಗೆ ಖರ್ಗೆ ಅವರ ಅಸಮಾಧಾನದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

‘ಗ್ಯಾರಂಟಿಗಳು ದೇಶಕ್ಕೇ ಮಾದರಿಯಾಗಿವೆ. ಬಿಜೆಪಿ ಮತ್ತು ಬೇರೆ ಪಕ್ಷಗಳೂ ಅವನ್ನು ಅಳವಡಿಸಿಕೊಳ್ಳುತ್ತಿವೆ. ಆದರೆ ಇಂತಹ ಜನೋಪಯೋಗಿ ಕಾರ್ಯಕ್ರಮಗಳನ್ನು ಮಾಡಲು ರಾಜ್ಯ ಬಿಜೆಪಿಗೆ ಆಗುವುದಿಲ್ಲ. ನಾವು ಯಶಸ್ವಿಯಾಗಿ ಮಾಡುತ್ತಿರುವುದನ್ನು ಸಹಿಸಿಕೊಳ್ಳಲೂ ಆವರಿಗೆ ಆಗುತ್ತಿಲ್ಲ. ಮನೆ ಒಡೆಯುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಮೀಸಲಾತಿ ಮತ್ತು ಒಳಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯದ ಕೆಲ ನಾಯಕರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರುವ ವಿಷಯ ಪ್ರಸ್ತಾಪಿಸಿದಾಗ, ‘ಮೀಸಲಾತಿಗೆ ಸಂಬಂಧಿಸಿದಂತೆ ನಾನು ಮಧ್ಯಪ್ರವೇಶಿಸುವುದಿಲ್ಲ ಎಂಬುದನ್ನು ಖರ್ಗೆ ಅವರು ಸ್ಪಷ್ಟಪಡಿಸಿದ್ದಾರೆ. ದೇಶ ಮತ್ತು ಎಲ್ಲ ರಾಜ್ಯಗಳ ಪರಿಸ್ಥಿತಿಯನ್ನು ಗಮನದಲ್ಲಿ ಇರಿಸಿಕೊಂಡು ಕೆಲ ಸಲಹೆಗಳನ್ನು ನೀಡಿದ್ದಾರೆ. ರಾಜ್ಯದ ಮೀಸಲಾತಿ ನೀತಿ ಏನೇ ಆದರೂ, ಹಸ್ತಕ್ಷೇಪ ಮಾಡುವುದಿಲ್ಲ ಎಂದೂ ಹೇಳಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.