ಬೆಂಗಳೂರು: ‘ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್ಐ) 402 ಹುದ್ದೆಗಳಿಗೆ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇದೇ 22ರಂದು ನಿಗದಿಪಡಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯನ್ನು 28ರಂದು ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಆ ದಿನ ಕೂಡಾ ಯುಪಿಎಸ್‌ಸಿ ಪರೀಕ್ಷೆ ಇರುವ ಕಾರಣ ಮತ್ತೊಂದು ದಿನ ಪರೀಕ್ಷೆ ನಡೆಸಲಾಗುವುದು’ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ.
‘22ರಂದು ಯುಪಿಎಸ್‌ಸಿ ಮುಖ್ಯ ಪರೀಕ್ಷೆ ಇರುವುದರಿಂದ 28ಕ್ಕೆ ಮುಂದೂಡಲಾಗಿತ್ತು. ಆದರೆ, 28ರಂದು ಯುಪಿಎಸ್‌ಸಿ ಇಂಗ್ಲಿಷ್ ಪರೀಕ್ಷೆ ಇರುವ ಕಾರಣ ಮತ್ತೆ ಮುಂದೂಡಲು ನಿರ್ಧರಿಸಿದ್ದು, ಒಂದೆರಡು ದಿನಗಳಲ್ಲಿ ಸೂಕ್ತವಾದ ದಿನಾಂಕವನ್ನು ಪ್ರಕಟಿಸಲಾಗುವುದು’ ಎಂದಿದ್ದಾರೆ.
‘ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ಬರೆದ ರಾಜ್ಯದ ಅಭ್ಯರ್ಥಿಗಳ ಪೈಕಿ, 100ಕ್ಕೂ ಹೆಚ್ಚು ಮಂದಿ ಮುಖ್ಯ ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದಾರೆ. ಯುಪಿಎಸ್‌ಸಿ ಮತ್ತು ಪಿಎಸ್‌ಐ ಪರೀಕ್ಷೆಯನ್ನು ಒಂದೇ ದಿನ ನಿಗದಿಪಡಿಸಿದರೆ, ಹುದ್ದೆ ಆಕಾಂಕ್ಷಿಗಳಿಗೆ ಯಾವುದಾದರೂ ಒಂದು ಪರೀಕ್ಷೆ ಬರೆಯುವ ಅವಕಾಶ ತಪ್ಪುತ್ತದೆ. ಹೀಗಾಗಿ, ಪಿಎಸ್‌ಐ ಪರೀಕ್ಷೆಯನ್ನು ಮುಂದೂಡುವಂತೆ ಆಕಾಂಕ್ಷಿಗಳು ಮನವಿ ಸಲ್ಲಿಸಿದ್ದರು. ಬಿಜೆಪಿ ನಿಯೋಗ ಕೂಡಾ ಮನವಿ ಸಲ್ಲಿಸಿತ್ತು’ ಎಂದು ಪರಮೇಶ್ವರ ಹೇಳಿದ್ದಾರೆ.
‘ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿಗೆ ವಯೋಮಿತಿ ಹೆಚ್ಚಳದ ಕುರಿತು ಬೇರೆ ರಾಜ್ಯಗಳಿಂದ ಮಾಹಿತಿ ಕಲೆ ಹಾಕಿದ್ದೇವೆ. ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದೂ ಅವರು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.