ಧಾರವಾಡ: ‘ಹಿಂದಿನ ಸರ್ಕಾರದ ಅವಧಿಯ 545 ಪಿಎಸ್‌ಐ ನೇಮಕಾತಿ ಹಗರಣದ ತನಿಖೆ ನಡೆಯುತ್ತಿದೆ. ಕೆಲವರು ಈ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮರುಪರೀಕ್ಷೆ ನಡೆಸಬಾರದು ಎಂದು ಕೆಲವರು ಕೋರ್ಟ್ ಮೆಟ್ಟಿಲು ಏರಿದ್ಧಾರೆ. ಕೋರ್ಟ್ ನಿರ್ದೇಶನಕ್ಕಾಗಿ ಕಾಯುತ್ತಿದ್ದೇವೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.
ಮರು ಪರೀಕ್ಷೆ ನಡೆಸಬೇಕೇ? ಬೇಡವೇ? ಎಂಬ ನಿಟ್ಟಿನಲ್ಲಿ ಕೋರ್ಟ್ ಸರ್ಕಾರದ ಅಭಿಪ್ರಾಯ ಕೇಳಿತ್ತು. ಮರು ಪರೀಕ್ಷೆ ಮಾಡಬೇಕು ಎಂದು ಸರ್ಕಾರ ಅಭಿಪ್ರಾಯ ತಿಳಿಸಿದೆ. ಕೋರ್ಟ್ ನಿರ್ದೇಶನ ನೀಡಿದರೆ ತಿಂಗಳೊಳಗೆ ಪರೀಕ್ಷೆ ನಡೆಸುತ್ತೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಉತ್ತರಿಸಿದರು.
545 ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರವೇ 400 ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ಆರಂಭಿಸುತ್ತೇವೆ. ಈ 400 ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ಆರಂಭಿಸಿದರೆ ಹಿರಿತನ ತೊಡಕು ಎದುರಾಗುತ್ತದೆ ಎಂದರು.
ಬೆಂಗಳೂರು ನಗರಕ್ಕೆ 2.5 ಸಾವಿರ ಹಾಗೂ ರಾಜ್ಯದಲ್ಲಿ 3.5 ಸಾವಿರ ಪೊಲೀಸ್ ಕಾನ್‌ಸ್ಟೆಬಲ್ ನೇಮಕ ಮಾಡಲಾಗುವುದು. ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ. ರಾಘವೇಂದ್ರ ಔರದಾಕರ್ ಆಯೋಗದ ವರದಿಯ ಕೆಲವು ಶಿಫಾರಸುಗಳನ್ನು ಅನುಷ್ಠಾನಗೊಳಿಸಿದ್ದೇವೆ. ಉಳಿದ ಶಿಫಾರಸುಗಳನ್ನು ಹಂತಹಂತವಾಗಿ ಜಾರಿಗೊಳಿಸುತ್ತೇವೆ ಎಂದು ಉತ್ತರಿಸಿದರು.
ರಾಜ್ಯದಲ್ಲಿನ ಪೊಲೀಸ್ ಶಾಲೆಗಳ ಪರಿಶೀಲನೆಯಲ್ಲಿ ತೊಡಗಿದ್ದೇನೆ. ಕೆಲವು ಚೆನ್ನಾಗಿ ನಡೆಯುತ್ತಿವೆ, ಇನ್ನು ಕೆಲವು ಶಾಲೆಗಳಲ್ಲಿ ತೊಂದರೆಗಳು ಇವೆ. ಪೊಲೀಸರ ಮಕ್ಕಳಿಗೆ ಶಿಕ್ಷಣದ ಉದ್ದೇಶದಿಂದ ಈ ಶಾಲೆಗಳನ್ನು ಆರಂಭಿಸಲಾಗಿದೆ. ಶಾಲೆಗಳಲ್ಲಿ ನ್ಯೂನತೆಗಳಿದ್ದರೆ ಸರಿಪಡಿಸಲು ಕ್ರಮ ವಹಿಸುತ್ತೇವೆ ಎಂದರು.
‘ಸೌಜನ್ಯಾ ಪ್ರಕರಣ ಮರು ತನಿಖೆ ಮಾಡಿಸಬೇಕು ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಕಾನೂನಾತ್ಮಕವಾಗಿ ಈ ಪ್ರಕರಣ ಮುಕ್ತಾಯವಾಗಿದೆ. ಪ್ರಕರಣದ ಮರುತನಿಖೆಗೆ ಸರ್ಕಾರ ಯಾವುದೇ ತೀರ್ಮಾನ ಮಾಡಿಲ್ಲ’ ಎಂದು ಉತ್ತರಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.