ಕಲಬುರಗಿ: ಪಿಎಸ್‌ಐ ಪರೀಕ್ಷೆ ಅಕ್ರಮದ ಮೊದಲ ಎಂಟು ಆರೋಪಿಗಳಿಗೆ ಇಲ್ಲಿನ ಮೂರನೇ ಜೆಎಂಎಫ್‌ಸಿ ನ್ಯಾಯಾ ಧೀಶರು ಜಾಮೀನು ನಿರಾಕರಿಸಿದರು.
1ರಿಂದ 8ರವರೆಗಿನ ಆರೋಪಿ ಗಳಾದವೀರೇಶ ನಿಡಗುಂದಾ, ಕೆ. ಪ್ರವೀಣಕುಮಾರ, ಅರುಣ ಪಾಟೀಲ, ಚೇತನ ನಂದಗಾಂವ,
ಪರೀಕ್ಷಾ ಮೇಲ್ವಿಚಾರಣೆಗೆ ನಿಯೋಜನೆ ಗೊಂಡಿದ್ದ ಶಿಕ್ಷಕಿಯರಾದ ಸುಮಾ, ಸಿದ್ದಮ್ಮ, ಸಾವಿತ್ರಿ, ಶಾಲೆಯ ಮುಖ್ಯಸ್ಥೆ ದಿವ್ಯಾ ಹಾಗರಗಿ ಅವರ ಪತಿ
ರಾಜೇಶ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ನ್ಯಾಯಾಧೀಶ ಬಸವರಾಜ ನೇಸರ್ಗಿ ಅವರು, ‘ಪ್ರಕರಣದ ತನಿಖೆ ಇನ್ನೂ ಪೂರ್ಣಗೊಳ್ಳದ ಕಾರಣ ಜಾಮೀನು ನೀಡಲು ಆಗದು’ ಎಂದು ಆದೇಶಿಸಿದರು.
ನಾಲ್ವರು ಪೊಲೀಸ್ ಕಸ್ಟಡಿಗೆ:ಗನ್‌ಮ್ಯಾನ್ ಹಯ್ಯಾಳಿ ದೇಸಾಯಿ, ಸಿಎಆರ್ ಪೊಲೀಸ್ ಕಾನ್‌ಸ್ಟೆಬಲ್ ರುದ್ರಗೌಡ ಪಾಟೀಲ, ವಿಶಾಲ್, ಶರಣಬಸಪ್ಪ ಅವರನ್ನು ಏ. 29ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ತನಿಖೆ ದಿಕ್ಕು ತಪ್ಪಿಸುವ ಯತ್ನ: ಆರೋಪ ‘ಬಿಜೆಪಿ ಸರ್ಕಾರವು ಉದ್ದೇಶಪೂರ್ವಕವಾಗಿ ತನಿಖೆಯನ್ನು ಬೇರೆ ದಿಕ್ಕಿನಲ್ಲಿ ಒಯ್ಯುತ್ತಿದೆ. ಬಿಜೆಪಿ ನಾಯಕಿ ದಿವ್ಯಾ ಹಾಗರಗಿಯನ್ನು ಬಂಧಿಸುವ ಬದಲು ಅಫಜಲಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ಪಾಟೀಲ ಅವರನ್ನು ಬಂಧಿಸಲಾಗಿದೆ. ಇದು ಖಂಡನೀಯ’ ಎಂದು ಕಾಂಗ್ರೆಸ್ ಮುಖಂಡ ಅಲ್ಲಮಪ್ರಭು ಪಾಟೀಲ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಶೀಘ್ರದಲ್ಲೇ ದಿವ್ಯಾ ಹಾಗರಗಿ ಬಂಧನ’
ಕಲಬುರಗಿ: ‘ಹಗರಣದ ಆರೋಪ ಎದುರಿಸುತ್ತಿರುವ ಜ್ಞಾನಜ್ಯೋತಿ ಆಂಗ್ಲಮಾಧ್ಯಮ ಶಾಲೆಯ ಮುಖ್ಯಸ್ಥೆ ದಿವ್ಯಾ ಹಾಗರಗಿ ಅವರನ್ನು ಶೀಘ್ರ ಬಂಧಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಹೇಳಿದರು.
‘ದಿವ್ಯಾ ಅವರು ಕರ್ನಾಟಕ ನರ್ಸಿಂಗ್ ಕೌನ್ಸಿಲ್ ಹಾಗೂ ದಿಶಾ ಸಮಿತಿ ಸದಸ್ಯೆ ಆಗಿದ್ದು, ಎರಡೂ ಸ್ಥಾನದಿಂದ ಪದಚ್ಯುತಿ ಗೊಳಿಸಲಾಗುವುದು. ಈಗಾಗಲೇ ದಿವ್ಯಾ ಅವರ ಪತಿ ಸೇರಿ 13 ಆರೋಪಿಗಳನ್ನು ಬಂಧಿಸಲಾಗಿದೆ. ನಾವು ತನಿಖೆ ಸಡಿಲಗೊಳಿಸುವ ಪ್ರಶ್ನೆಯೇ ಇಲ್ಲ’ ಎಂದರು.
‘ಕಾಂಗ್ರೆಸ್ ಶಾಸಕ ಎಂ.ವೈ. ಪಾಟೀಲ ಅವರ ಗನ್‌ಮ್ಯಾನ್ ಕೂಡ ಬಂಧಿತನಾಗಿದ್ದಾನೆ. ಇಂಥವರೇ ಗನ್‌ಮ್ಯಾನ್ ಬೇಕು ಎಂದು ಶಾಸಕರೇ ಕೇಳಿದ್ದಾರೆ. ಆದರೆ, ಅಕ್ರಮಕ್ಕೆ ಸರ್ಕಾರವೇ ಜವಾಬ್ದಾರಿ, ನನಗೇನೂ ಗೊತ್ತಿಲ್ಲ ಎಂದು ನುಸುಳಿಕೊಳ್ಳುವುದು ಏಕೆ?’ಎಂದೂ ಖಾರವಾಗಿ ಪ್ರಶ್ನಿಸಿದರು.
ಮುಂದುವರಿದ ದಾಖಲೆ ಪರಿಶೀಲನೆ
ಬೆಂಗಳೂರು: ಪಿಎಸ್‌ಐ ನೇಮ ಕಾತಿ ಅಕ್ರಮ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳ ದಾಖಲೆಗಳನ್ನು ಶುಕ್ರವಾರವೂ ಪರಿಶೀಲಿಸಿದರು.
545 ಪಿಎಸ್‌ಐ ಹುದ್ದೆಗಳ ನೇಮಕಾತಿಗಾಗಿ ಪ್ರಕ್ರಿಯೆ ನಡೆದಿತ್ತು. ದೈಹಿಕ, ಲಿಖಿತ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲಿ ತೇರ್ಗಡೆಯಾದವರನ್ನು ಆಯ್ಕೆ ಮಾಡಿ, ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡಲಾಗಿತ್ತು.
ಪಟ್ಟಿಯಲ್ಲಿ ಹೆಸರಿದ್ದ ನಾಲ್ವರನ್ನು ಅಕ್ರಮ ಆರೋಪದಡಿ ಈಗಾಗಲೇ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಉಳಿದ 541 ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಮಾಡಲಾಗುತ್ತಿದೆ.
ಸಿಐಡಿ ಅಧಿಕಾರಿಗಳ ಸೂಚನೆಯಂತೆ ಅಭ್ಯರ್ಥಿಗಳು ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಅವರ ಜೊತೆಯಲ್ಲಿ ಕುಟುಂಬಸ್ಥರು ಬರುತ್ತಿದ್ದು, ಸಿಐಡಿ ಕಟ್ಟಡದ ಬಳಿ ಜನಸಂದಣಿ ಹೆಚ್ಚಾಗಿದೆ. ಹೀಗಾಗಿ, ಕಾರ್ಲ್‌ಟನ್ ಕಟ್ಟಡದ ಪ್ರವೇಶ ದ್ವಾರವನ್ನು ಬಂದ್ ಮಾಡಲಾಗಿದೆ. ಅಭ್ಯರ್ಥಿಗಳು ಹಾಗೂ ಕಚೇರಿ ಸಿಬ್ಬಂದಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ.
‘ತನಿಖೆ ಭಾಗವಾಗಿ ಅಭ್ಯರ್ಥಿ ಗಳ ದಾಖಲೆ ಪರಿಶೀಲನೆ ನಡೆದಿದೆ. ಬಹುತೇಕ ಅಭ್ಯರ್ಥಿಗಳ ದಾಖಲೆಗಳಲ್ಲಿ ಯಾವುದೇ ಅನುಮಾನ ಇಲ್ಲ. ಕೆಲ ಅಭ್ಯರ್ಥಿಗಳ ದಾಖಲೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಅಂಥವರ ವೈಯಕ್ತಿಕ ವಿವರ ಹಾಗೂ
ಇತರೆ ಮಾಹಿತಿಗಳನ್ನು ಕಲೆಹಾಕಲಾಗುತ್ತಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.
‘ಇದೊಂದು ಸಂಘಟಿತ ಅಪರಾಧವೆಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಎಲ್ಲ ಆಯಾಮಗಳಲ್ಲೂ ವಿಶೇಷ ತಂಡಗಳು ಮಾಹಿತಿ ಕಲೆಹಾಕುತ್ತಿವೆ. ಸದ್ಯದಲ್ಲೇ ಪ್ರಾಥಮಿಕ ವರದಿಯೊಂದನ್ನು ಸಿದ್ಧಪಡಿಸಿ, ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು’ ಎಂದೂ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.