ಬೆಂಗಳೂರು: ಪಿಎಸ್‌ಐ ನೇಮಕಾತಿಯ ಬೃಹತ್ ಹಗರಣವನ್ನು ಬಯಲಿಗೆಳೆಯುವ ನನ್ನ ಹೋರಾಟದ ಮೊದಲ ಹೆಜ್ಜೆಯಿಂದಲೇ ಪ್ರತಿಭಾವಂತರಿಗೆ ನ್ಯಾಯ ದೊರೆಯುವ ವಿಶ್ವಾಸವಿತ್ತು ಮತ್ತು ಹೋರಾಟದಲ್ಲಿ ಬದ್ಧತೆ ಇತ್ತು. ಅದೀಗ ಸಾಕಾರಗೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ
ಹಿಂದಿನ ಬಿಜೆಪಿ ಸರ್ಕಾರದ ಭ್ರಷ್ಟ ವ್ಯವಸ್ಥೆಯಿಂದ ಪ್ರತಿಭಾವಂತ ಪಿಎಸ್‌ಐ ಅಭ್ಯರ್ಥಿಗಳು ಕಟ್ಟಿಕೊಂಡಿದ್ದ ಕನಸು ಕಮರಿ ಹೋಗಿತ್ತು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೀರಿಗಿಳಿದ ಮೇಲೆ ಚಳಿಯ ಚಿಂತೆ ಏಕೆ ಎನ್ನುವಂತೆ ನ್ಯಾಯದ ಹೋರಾಟಕ್ಕೆ ಇಳಿದ ಮೇಲೆ ಬಿಜೆಪಿಗರ ದಾಳಿಯನ್ನು ಲೆಕ್ಕಿಸಲಿಲ್ಲ. ಲೆಕ್ಕಿಸುವ ಜಾಯಮಾನವೂ ನನ್ನದಲ್ಲ. ನನಗೆ ಕಾನ್ವೆಂಟ್ ದಲಿತ ಎಂಬ ಬಿರುದನ್ನೂ ಕೊಟ್ಟರು. ಅದಕ್ಕೆ ತಲೆ ಕೆಡಿಸಿಕೊಳ್ಳಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ನಡೆಸಿದ 545 ಪಿಎಸ್‌ಐ ಹುದ್ದೆಗಳ ಪ್ರಾಮಾಣಿಕ ನೇಮಕಾತಿಯೇ ಬಿಜೆಪಿಗೆ ನಾನು ಕೊಡಬಹುದಾದ ಅತ್ಯುತ್ತಮ ಉತ್ತರ ಎಂದು ಭಾವಿಸಿದ್ದೇನೆ ಎಂದಿದ್ದಾರೆ.
ನಾವು ಈ ಹಗರಣವನ್ನು ಬಯಲಿಗೆ ತಂದಾಗ, ಅಂದಿನ ಬಿಜೆಪಿ ಸರ್ಕಾರದ ಗೃಹ ಸಚಿವರಾದಿಯಾಗಿ ಬಿಜೆಪಿ ನಾಯಕರೆಲ್ಲರೂ ಸದನದಲ್ಲಿ ಹಗರಣ ನಡೆದೇ ಇಲ್ಲ ಎನ್ನುವ ಶತಮಾನದ ಹಸಿ ಸುಳ್ಳನ್ನು ಸತ್ಯದ ತಲೆಯ ಮೇಲೆ ಸುತ್ತಿಗೆ ಹೊಡೆದಂತೆ ಹೇಳಿದ್ದರು. ನನ್ನ ಬಾಯಿ ಮುಚ್ಚಿಸಲು ಬಿಜೆಪಿಗರು ನಡೆಸಿ ಕಸರತ್ತು ಒಂದೆರಡಲ್ಲ. ಸಿಐಡಿ ಮೂಲಕ ಎರಡು ಬಾರಿ ನೋಟಿಸ್ ಕೊಡಿಸಿದ್ದರು. ಹಗರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ ಜತೆಗೆ ನನ್ನ ಹೆಸರು ತಳುಕು ಹಾಕಲು ಯತ್ನಿಸಿದರು. ನನ್ನ ವಿರುದ್ಧ ಬಿಜೆಪಿ ನಾಯಕರು ಸಾಲುಗಟ್ಟಿ ನಿಂತು ತಮ್ಮ ಕೊಳಕು ನಾಲಿಗೆಯ ಮೂಲಕ ಯುದ್ಧ ಸಾರಿದ್ದರು ಎಂದು ಹೇಳಿದ್ದಾರೆ.
‘ರಾಜ್ಯದ ತಲಾವಾರು ಜಿಎಸ್‌ಡಿಪಿಯು ಭಾರತದಲ್ಲಿ ಅತ್ಯಧಿಕವಾಗಲು, ನಮ್ಮ ಸಮರ್ಥ ಆಡಳಿತ ಶಕ್ತಿಯೇ ಕಾರಣ’ ಎಂದಿದ್ದಾರೆ.
ಸರ್ಕಾರದ ಜನಪರ ನೀತಿಗಳು, ವ್ಯಾಪಾರ ಸ್ನೇಹಿ ವಾತಾವರಣ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಾಗಿ ಸುಸ್ಥಿರ ಅಭಿವೃದ್ಧಿಗೆ ಮಾದರಿಯಾಗಿದೆ. ಇದರು ಭಾರತದ ಡಿಜಿಟಲ್ ಆರ್ಥಿಕತೆಗೆ ಗಮನಾರ್ಹ ಕೊಡುಗೆ ನೀಡಿದೆ ಎಂದು ತಿಳಿಸಿದ್ದಾರೆ.
ಜಾಗತಿಕ ಆರ್ಥಿಕ ಸವಾಲುಗಳ ಹೊರತಾಗಿಯೂ 2023–24 ರ ಹಣಕಾಸು ವರ್ಷದಲ್ಲಿ ನಮ್ಮ ರಾಜ್ಯದ ಆರ್ಥಿಕತೆಯು ಶೇ 10.2 ರಷ್ಟು ಬೆಳವಣಿಗೆ ಸಾಧಿಸಿದ ರಾಷ್ಟ್ರೀಯ ಸರಾಸರಿಯ ಶೇ 8.2 ಪ್ರಮಾಣವನ್ನು ಮೀರಿಸಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.