ಬೆಂಗಳೂರು: ‘ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಸ್ವತಂತ್ರ ಸಂಸ್ಥೆಯಿಂದ ಹೊಸದಾಗಿ ಪರೀಕ್ಷೆ ನಡೆಸಬಹುದು. ಈ ವೇಳೆ ಅಭ್ಯರ್ಥಿಗಳಿಗೆ ಯಾವುದೇ ಹೊಸ ಶುಲ್ಕ ವಿಧಿಸಬಾರದು. ಮರುಪರೀಕ್ಷೆ ನ್ಯಾಯಸಮ್ಮತವಾಗಿ ನಡೆಯುತ್ತದೆ ಎಂಬುದನ್ನು ಸರ್ಕಾರ ಖಾತರಿಪಡಿಸಬೇಕು‘ ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಈ ಮೂಲಕ ಪಿಎಸ್‌ಐ ಹುದ್ದೆಗಳಿಗೆ ಈ ಮೊದಲು ನಡೆಸಿದ್ದ ಲಿಖಿತ ಪರೀಕ್ಷೆ ರದ್ದುಪಡಿಸಿ, ಹೊಸದಾಗಿ ಪರೀಕ್ಷೆ ನಡೆಸಲು ಈ ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಎತ್ತಿಹಿಡಿದಿದೆ.
ಸರ್ಕಾರದ ಆದೇಶ ರದ್ದು ಕೋರಿ ಎನ್.ವಿ.ಚಂದನ್ ಸೇರಿದಂತೆ ಆಯ್ಕೆ ಪಟ್ಟಿಯಲ್ಲಿ ಹೆಸರಿದ್ದ 100ಕ್ಕೂ ಹೆಚ್ಚು ಅಭ್ಯರ್ಥಿಗಳು ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಶುಕ್ರವಾರ ಆದೇಶಿಸಿದೆ.
’ಅಕ್ರಮಕ್ಕೆ ಸಂಬಂಧಿಸಿದಂತೆ ಬ್ಲೂ ಟೂತ್ ಬಳಕೆ ಥಿಯರಿಯನ್ನು ಈ ಹಂತದಲ್ಲಿ ಸಂಪೂರ್ಣವಾಗಿ ತಳ್ಳಿಹಾಕಲಾಗದು‘ ಎಂದು ಹೇಳಿರುವ ನ್ಯಾಯಪೀಠ, ಪರೀಕ್ಷೆಯಲ್ಲಿನ ಅಕ್ರಮ ಆರೋಪಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಮರುಪರೀಕ್ಷೆ ಬದಲು ಕಳಂಕಿತರನ್ನು ಪ್ರತ್ಯೇಕಿಸಿ, ಅರ್ಹರನ್ನು ಆಯ್ಕೆ ಮಾಡಬೇಕೆಂಬ ಅಭ್ಯರ್ಥಿಗಳ ವಾದವನ್ನು ತಿರಸ್ಕರಿಸಿದೆ.
ಬ್ಲೂ ಟೂತ್: ‘ಬ್ಲೂ ಟೂತ್ ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಹಲವು ಪ್ರಕರಣಗಳು ಕ್ರಿಮಿನಲ್ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇವೆ. ಬ್ಲೂ ಟೂತ್ ಬಳಸಿ ಯಾವುದೇ ಅಕ್ರಮ ನಡೆದಿಲ್ಲವೆಂಬುದು ಸ್ಪಷ್ಟವಾಗಿ ದೃಢಪಡುವ ತನಕ ಪರೀಕ್ಷೆಯನ್ನು ರದ್ದು ಮಾಡಿರುವ ಆಡಳಿತದ ಆದೇಶದಲ್ಲಿ ತಪ್ಪಾಗಿದೆ ಎಂದು ಹೇಳಲು ಆಗದು. ಈ ಹಂತದಲ್ಲಿ ಬ್ಲೂ ಟೂತ್ ಬಳಕೆ ಬಗ್ಗೆ ಏನನ್ನಾದರೂ ದಾಖಲಿಸಿದರೆ ಅದು ವಿಚಾರಣಾ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಮೇಲೆ ಪರಿಣಾಮ ಬೀರುತ್ತದೆ‘ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪ್ರತ್ಯೇಕಿಸಲಾಗದು: ‘ಪ್ರಶ್ನೆಪತ್ರಿಕೆ ಮೊದಲೇ ಸೋರಿಕೆಯಾದ ಕಾರಣದಿಂದಲೇ ಪ್ರಶ್ನೆಪತ್ರಿಕೆಗೆ ಅನುಗುಣವಾಗಿ ಅಭ್ಯರ್ಥಿಗೆ ಬ್ಲೂ ಟೂತ್ ಮೂಲಕ 3ನೇ ವ್ಯಕ್ತಿ ಉತ್ತರಿಸಿರುವ ಸಾಧ್ಯತೆ ಇದೆ. ನೇಮಕ ವಿಭಾಗದ ಪೊಲೀಸ್ ಎಡಿಜಿಪಿಯೇ ಉತ್ತರಪತ್ರಿಕೆಯ ಒಎಂಆರ್ ಶೀಟ್‌ಗಳನ್ನು ತಿರುಚಿರುವ ಆರೋಪ ಇರುವುದರಿಂದ ಪರೀಕ್ಷೆ ಮೇಲಿನ ಸಾರ್ವಜನಿಕ ವಿಶ್ವಾಸವೇ ಹಾಳಾಗಿದೆ. 53 ಅಭ್ಯರ್ಥಿಗಳ ವಿರುದ್ಧ ಆರೋಪ ಪಟ್ಟಿ ದಾಖಲಾಗಿದ್ದು, 52 ಅಭ್ಯರ್ಥಿಗಳನ್ನು ಡಿಬಾರ್ ಮಾಡಲಾಗಿದೆ. ಬ್ಲೂ ಟೂತ್ ಬಳಕೆಯಾಗಿರುವುದರಿಂದ ಇನ್ನೂ ಕೆಲವರು ಅಕ್ರಮದಲ್ಲಿ ಭಾಗಿಯಾಗಿರುವ ಸಂಶಯಗಳಿವೆ. ಹೀಗಾಗಿ ಕಳಂಕಿತರು, ಕಳಂಕಿತರಲ್ಲದವರನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ‘ ಎಂದು ನ್ಯಾಯಪೀಠ ಹೇಳಿದೆ.
ಪ್ರತಿಪಾದನೆ: ‘ಪಿಎಸ್‌ಐ ನೇಮಕಾತಿ ಲಿಖಿತ ಪರೀಕ್ಷೆಗೆ 54,103 ಮಂದಿ ಹಾಜರಾಗಿದ್ದರು. ಅದರಲ್ಲಿ 545 ಮಂದಿ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಯ್ಕೆಯಾಗಿದ್ದರು. ಈ ಪೈಕಿ 53 ಮಂದಿಯ ವಿರುದ್ಧ ತನಿಖಾಧಿಕಾರಿಗಳು ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಇವರಲ್ಲಿ 52 ಮಂದಿಗೆ 2022ರ ಏಪ್ರಿಲ್ 6ರಂದು ಷೋಕಾಸ್ ನೋಟಿಸ್ ನೀಡಿ, 2023ರ ಜೂನ್ 20ರಂದು ಡಿಬಾರ್ ಮಾಡಲಾಗಿದೆ. 53 ಮಂದಿ ಆರೋಪಿಗಳನ್ನು ಹೊರತುಪಡಿಸಿ ಉಳಿದವರ ವಿರುದ್ಧ ಯಾವುದೇ ಆರೋಪಗಳು ಇಲ್ಲ‘ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.
ಪ್ರಕರಣವೇನು?: 2022ರ ಜುಲೈ 19ರಂದು ಕೆಎಟಿ ಅರ್ಜಿ ವಜಾಗೊಳಿಸಿತ್ತು. ಇದರಿಂದ ಅಭ್ಯರ್ಥಿಗಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಹೊಸದಾಗಿ ಲಿಖಿತ ಪರಿಕ್ಷೆ ನಡೆಸುವ ಸರ್ಕಾರದ ಆದೇಶಕ್ಕೆ 2022ರ ಸೆಪ್ಟೆಂಬರ್ 27ರಂದು ಮಧ್ಯಂತರ ತಡೆ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.