ADVERTISEMENT

ಪಿಎಸ್‌ಐ ಅಕ್ರಮ: ಅಪರಿಚಿತರಿಗೆ ₹70 ಲಕ್ಷಕ್ಕೆ ಬೇಡಿಕೆ!

ಸಿಐಡಿ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

ಮನೋಜ ಕುಮಾರ್ ಗುದ್ದಿ
Published 9 ಜುಲೈ 2022, 19:31 IST
Last Updated 9 ಜುಲೈ 2022, 19:31 IST
ಆರ್‌.ಡಿ. ಪಾಟೀಲ
ಆರ್‌.ಡಿ. ಪಾಟೀಲ   

ಕಲಬುರಗಿ: ಪಿಎಸ್‌ಐ ನೇಮಕಾತಿ ಅಕ್ರಮದ ಕಿಂಗ್‌ಪಿನ್ ಆದ ಕಾಂಗ್ರೆಸ್ ಮುಖಂಡ ಆರ್‌.ಡಿ.ಪಾಟೀಲ ಪರೀಕ್ಷೆ ಯಲ್ಲಿ ಪಾಸ್ ಮಾಡಿಸಿಕೊಡಲು ತನ್ನ ಆಪ್ತರಿಗೆ ₹40 ಲಕ್ಷ, ಅಪರಿಚಿತ ಅಭ್ಯರ್ಥಿಗಳಿಂದ ₹70 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದನ್ನು ಕೋರ್ಟ್‌ಗೆ ಸಿಐಡಿ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.

‘ಅಫಜಲಪುರದ ಕಾಂಗ್ರೆಸ್ ಶಾಸಕ ಎಂ.ವೈ.ಪಾಟೀಲ ಅವರ ಗನ್‌ಮ್ಯಾನ್ ಆಗಿದ್ದ ಹಯ್ಯಾಳಿ ದೇಸಾಯಿಗೆ ₹ 40 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರೂ ಅಂತಿಮವಾಗಿ ₹ 30 ಲಕ್ಷಕ್ಕೆ ಒಪ್ಪಂದವಾಗಿತ್ತು. ಮತ್ತೊಬ್ಬ ಅಭ್ಯರ್ಥಿ ವಿಶಾಲಗೆ ಪರೀಕ್ಷೆ ದಿನ ಬ್ಲೂಟೂತ್ ಸಾಧನ ಒದಗಿಸಿ ಉತ್ತರ ಹೇಳಲು ₹ 70 ಲಕ್ಷಕ್ಕೆ ಬೇಡಿಕೆ ಇಡಲಾಗಿತ್ತು. ಅಂತಿಮವಾಗಿ ₹ 42 ಲಕ್ಷಕ್ಕೆ ಒಪ್ಪಂದವಾಗಿತ್ತು. ಮತ್ತೊಬ್ಬ ಅಭ್ಯರ್ಥಿ ಎನ್‌.ವಿ. ಸುನೀಲ ಎಂಬಾತನಿಗೆ ಆರ್.ಡಿ. ಪಾಟೀಲ ಮೊದಲು ₹50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ. ನಂತರ ₹30 ಲಕ್ಷಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿತ್ತು’ ಎಂದೂ ತಿಳಿಸಲಾಗಿದೆ.

‘ತಮ್ಮ ‘ಗಿರಾಕಿಗಳ’ ಹುಡುಕಾಟವನ್ನು ಆರ್‌.ಡಿ. ಪಾಟೀಲ ಮತ್ತು ಅಣ್ಣ ಮಹಾಂತೇಶ ಪಾಟೀಲ 2021ರ ಸೆಪ್ಟೆಂಬರ್‌ನಿಂದ ಶುರು ಮಾಡಿದ್ದರು. ಅಫಜಲಪುರದ ಪ್ರವಾಸಿ ಮಂದಿರ, ಕಲಬುರಗಿಯ ಕೇಂದ್ರ ಬಸ್ ನಿಲ್ದಾಣ ಬಳಿ ಅಭ್ಯರ್ಥಿಗಳಿಂದ ಹಣ ಪಡೆದಿದ್ದರು’ ಎಂದು ಸಿಐಡಿ ತಿಳಿಸಿದೆ.

ADVERTISEMENT

ಬ್ಲೂಟೂತ್ ಸಾಗಿಸುವ ಹೊಣೆ ಮೇತ್ರಿಗೆ: ಕಲಬುರಗಿ ಎಸ್ಪಿ ಕಚೇರಿಯ ಬೆರಳಚ್ಚು ವಿಭಾಗದಲ್ಲಿ ಸಿಪಿಐ ಆಗಿದ್ದ ಆನಂದ ಮೇತ್ರಿಗೆ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳ ಬ್ಲೂಟೂತ್ ಸಾಧನಗಳನ್ನು ಯಾವುದೇ ತೊಂದರೆ ಆಗದಂತೆ ಒಳ ಸಾಗಿಸುವ ಹೊಣೆಗಾರಿಕೆ ವಹಿಸಲಾಗಿತ್ತು. ಇದನ್ನು ಆನಂದ ಮೇತ್ರಿ ನಿರ್ವಹಿಸಿದ್ದ ಅಂಶ ಆರೋಪ
ಪಟ್ಟಿಯಲ್ಲಿದೆ.

ಸಿಮ್ ಒದಗಿಸುವುದು ಅಭ್ಯರ್ಥಿಗಳ ಹೊಣೆ!: ಪಿಎಸ್‌ಐ ಪರೀಕ್ಷೆ ದಿನ ಉತ್ತರ ಹೇಳಲು ಬೇಕಾದ ಬ್ಲೂಟೂತ್‌ ಒದಗಿಸುವಲ್ಲಿ ಆರ್.ಡಿ. ಪಾಟೀಲ ಒಂದೇ ಬಗೆಯ ವಿಧಾನವನ್ನು ಅನುಸರಿಸಿದ್ದ ಎಂದು ತನಿಖೆ ವೇಳೆ ಗೊತ್ತಾಗಿದೆ.

‘ಪ್ರತಿ ಅಭ್ಯರ್ಥಿ ಭೇಟಿ ಮಾಡಿ ದಾಗಲೂ ಪಾಟೀಲ, ಮಹಾಂತೇಶ ಪಾಟೀಲ ಮುಂಗಡ ಹಣವಾಗಿ ₹5– 10 ಲಕ್ಷದವರೆಗೆ ‍ಪಡೆದಿದ್ದರು. ಉಳಿದ ಹಣವನ್ನು ಫಲಿತಾಂಶ ಪ್ರಕಟವಾದ ಬಳಿಕ ನೀಡಲು ಅವಕಾಶ ನೀಡಿದ್ದರು. ಪರೀಕ್ಷೆ ಕೆಲ ದಿನ ಇರುವಂತೆ ಬ್ಲೂಟೂತ್ ಉಪಕರಣ ನೀಡುತ್ತಿದ್ದರು. ಅದಕ್ಕೆ ಸಂಪರ್ಕ ಕಲ್ಪಿಸಲು ಬೇಕಾದ ಸಿಮ್ ಕಾರ್ಡ್‌ಗಳನ್ನು ಅಭ್ಯರ್ಥಿಗಳೇ ಹೊಂದಿಸಬೇಕು ಎಂದು ತಾಕೀತು ಮಾಡಿ ಅವರಿಂದ ಪಡೆಯುತ್ತಿದ್ದರು. ಪರೀಕ್ಷೆ ಮುಗಿದ ಬಳಿಕ ಅವುಗಳನ್ನು ಎಸೆದು ಬಿಡುತ್ತಿದ್ದರು’ ಎಂದು ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.