ಬೆಂಗಳೂರು: ‘ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ಹುದ್ದೆಗಳ ನೇಮಕಾತಿಗೆ ಮರು ಪರೀಕ್ಷೆ ನಡೆಸುವಂತೆ ಹೈಕೋರ್ಟ್ ತೀರ್ಪು ನೀಡಿದೆ. ಆದೇಶದ ಕೈ ಸೇರಿದ ಬಳಿಕ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಕೋರ್ಟ್ ಆದೇಶವನ್ನು ನಾನು ನೋಡಿಲ್ಲ. ಅಡ್ವೊಕೇಟ್ ಜನರಲ್ ಜೊತೆ ಮಾತನಾಡಿದ್ದೇನೆ’ ಎಂದರು.
‘ಸ್ವತಂತ್ರ ಸಂಸ್ಥೆಯಿಂದ ಆದಷ್ಟು ಬೇಗ ಪರೀಕ್ಷೆ ನಡೆಸುವಂತೆ ಕೋರ್ಟ್ ಹೇಳಿದೆ. ನಮಗೆ ಓದಲು ಸಮಯ ನೀಡುವಂತೆ ಅಭ್ಯರ್ಥಿಗಳು ಮನವಿ ಮಾಡಿದ್ದಾರೆ. ಅವರ ಮನವಿಯನ್ನು ಪರಿಗಣಿಸುತ್ತೇವೆ’ ಎಂದರು.
‘ಪಿಎಸ್‌ಐ ನೇಮಕಾತಿ ಬಳಿಕ ತರಬೇತಿ ಮುಗಿಯಲು ಒಂದು ವರ್ಷ ಬೇಕು. ಹೀಗಾಗಿ, ಸುಮಾರು 600 ಎಎಸ್ಐಗಳಿಗೆ ನಿಯಮ 32ರಡಿ ಪಿಎಸ್‌ಐ ಹುದ್ದೆಗೆ ಬಡ್ತಿ ನೀಡಿದ್ದೇವೆ. ನೇಮಕಾತಿ ಪ್ರಕ್ರಿಯೆ ನಡೆದಿದ್ದ 545 ಪಿಎಸ್‌ಐ ಹುದ್ದೆಗಳ ಜೊತೆಗೆ ಇನ್ನೂ 400 ಹುದ್ದೆಗಳು ಖಾಲಿ ಇವೆ. ಈ ಎಲ್ಲ ಹುದ್ದೆಗಳಿಗೆ ಒಟ್ಟಿಗೆ ಪರೀಕ್ಷೆ ಮಾಡಬೇಕೇ? ಪ್ರತ್ಯೇಕವಾಗಿ ಮಾಡಬೇಕೇ ಎಂಬ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ’ ಎಂದರು.
‘ಕೆಇಎ ಪರೀಕ್ಷಾ ಅಕ್ರಮದ ಪ್ರಮುಖ ಆರೋಪಿ ಆರ್. ಡಿ. ಪಾಟೀಲನ ಮೇಲೆ ಪಿಎಸ್ಐ ಹಗರಣವೂ ಸೇರಿ ಐದಾರು ಪ್ರಕರಣಗಳು ದಾಖಲಾಗಿವೆ. ಕೆಇಎ ಪರೀಕ್ಷಾ ಅಕ್ರಮದ ತನಿಖೆಯನ್ನು ಸಿಐಡಿಗೆ ನಡೆಸಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.