ಬೆಂಗಳೂರು: 545 ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಂದ ಸಂಗ್ರಹಿಸಿದ್ದ ಲಕ್ಷಾಂತರ ರೂಪಾಯಿ ಹಣದಲ್ಲಿ ದೊಡ್ಡವರಿಗೂ ಪಾಲು ಸಂದಾಯ ಆಗಿದೆ ಎಂದು ಸಂಶಯಪಟ್ಟಿರುವ ಸಿಐಡಿ ಅಧಿಕಾರಿಗಳ ತಂಡ, ಅದಕ್ಕೆ ಸಂಬಂಧಪಟ್ಟ ದಾಖಲಾತಿಗಳಿಗಾಗಿ ಶೋಧ ನಡೆಸುತ್ತಿದೆ.
‘ಪ್ರಕರಣದ ಪ್ರಮುಖ ಆರೋಪಿಗಳು ಎನ್ನಲಾದ ರುದ್ರಗೌಡ ಡಿ. ಪಾಟೀಲ ಹಾಗೂ ಮಹಾಂತೇಶ ಪಾಟೀಲ ಸಹೋದರರನ್ನು ಸಿಐಡಿ ಪೊಲೀಸರು ಈಗಾಗಲೇ ಬಂಧಿಸಿದ್ದು, ಅವರಿಬ್ಬರು ಅಕ್ರಮ ಜಾಲದ ಬಗ್ಗೆ ಮಹತ್ವದ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾರೆ’ ಎಂದು ಮೂಲಗಳು ಹೇಳಿವೆ.
ಆರೋಪಿಗಳು ನೀಡಿದ್ದ ಮಾಹಿತಿಯನ್ನೇ ಸಿಐಡಿ ಅಧಿಕಾರಿಗಳು, ಗೃಹ ಸಚಿವ ಹಾಗೂ ಮುಖ್ಯಮಂತ್ರಿಗೆ ತಿಳಿಸಿದ್ದಾರೆ.
ಪೊಲೀಸ್ ನೇಮಕಾತಿ ವಿಭಾಗ ಹೊರಡಿಸಿದ್ದ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಹೆಸರಿದ್ದ ವೀರೇಶ್ ನಿಡಗುಂದಾ, ಅರುಣ್ ಪಾಟೀಲ, ಕೆ. ಪ್ರವೀಣ್ ಕುಮಾರ್, ಚೇತನ್ ನಂದಗಾವ್, ವಿಶಾಲ್ ಶಿರೂರ, ಎನ್.ವಿ. ಸುನೀಲ್ ಕುಮಾರ್ ಹಾಗೂ ಹಯ್ಯಾಳಿ ದೇಸಾಯಿ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಪ್ರತಿಯೊಬ್ಬರು ₹ 30 ಲಕ್ಷದಿಂದ ₹ 65 ಲಕ್ಷದವರೆಗೂ ಹಣ ನೀಡಿರುವ ಮಾಹಿತಿ ಸಿಐಡಿಗೆ ಲಭ್ಯವಾಗಿದೆ. ಆದರೆ, ಅದಕ್ಕೆ ಸಂಬಂಧಪಟ್ಟ ದಾಖಲೆಗಳು ಮಾತ್ರ ಪತ್ತೆಯಾಗಿಲ್ಲವೆಂದು ಮೂಲಗಳು ಹೇಳಿವೆ.
‘ಹಿರಿಯ ಸರ್’ಗಳತ್ತ ಕಣ್ಣು: ಅಕ್ರಮ ಪ್ರಕರಣದಲ್ಲಿ ಇದುವರೆಗೂ 23 ಮಂದಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದು, ಪ್ರತಿಯೊಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದ ರುದ್ರಗೌಡ ಡಿ. ಪಾಟೀಲ ಹಾಗೂ ಮಹಾಂತೇಶ ಪಾಟೀಲ ಸಹೋದರರು, ಅಕ್ರಮ ಪ್ರಕರಣದಲ್ಲಿ ಮಧ್ಯಸ್ಥಿಕೆ ಮಾತ್ರ ವಹಿಸಿರುವುದಾಗಿ ಹೇಳುತ್ತಿದ್ದಾರೆ. ತಾವು ಸಂಗ್ರಹಿಸಿದ್ದ ಹಣದಲ್ಲಿ ‘ದೊಡ್ಡವರು’ ಹಾಗೂ ‘ಹಿರಿಯ ಸರ್’ಗಳಿಗೆ ಪಾಲು ನೀಡಿರುವುದಾಗಿ ತಿಳಿಸಿದ್ದಾರೆ ಎಂದು
ಮೂಲಗಳು ಹೇಳುತ್ತಿವೆ. ಆದರೆ, ಯಾವುದೇ ದಾಖಲೆಗಳನ್ನು ನೀಡದಿರುವುದು ತನಿಖೆಗೆ ಹಿನ್ನಡೆ ತಂದಿದೆ.
ಆರೋಪಿಗಳ ವಿಚಾರಣೆಯಿಂದ ಬಯಲಾಗಿರುವ ‘ದೊಡ್ಡವರು’ ಹಾಗೂ‘ಹಿರಿಯ ಸರ್’ಗಳ ಮೇಲೆ ಸಿಐಡಿ ಅಧಿಕಾರಿಗಳು ಕಣ್ಣಿಟ್ಟಿದ್ದು, ಪುರಾವೆಗಳಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಗೊತ್ತಾಗಿದೆ.
‘ಹಲವು ವರ್ಷಗಳಿಂದ ಕೃತ್ಯ’
ಪಾಟೀಲ ಸಹೋದರರು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಸುವ ಕೃತ್ಯದಲ್ಲಿ ಹಲವು ವರ್ಷಗಳಿಂದ ತೊಡಗಿದ್ದರು. ‘ದೊಡ್ಡವರು’ ಹಾಗೂ ‘ಹಿರಿಯ ಸರ್’ಗಳನ್ನು ಯಾರ ಮೂಲಕ ಪರಿಚಯ ಮಾಡಿಕೊಳ್ಳಬೇಕು ? ಅವರಿಗೆ ಹಣ ಸಂದಾಯ ಹೇಗೆ ಮಾಡಬೇಕು ? ಎಂಬುದನ್ನು ಪಾಟೀಲ ಸಹೋದರರು ಕರಗತ ಮಾಡಿಕೊಂಡಿರುವುದಾಗಿ ಸಿಐಡಿ ಮೂಲಗಳು ಹೇಳಿವೆ.
ಪಿಎಸ್ಐ ಅಕ್ರಮ ನೇಮಕ ಪ್ರಕರಣ ಭೇದಿಸುತ್ತಿದ್ದಂತೆ, ಇತರೆ ಪರೀಕ್ಷೆಗಳ ಸುಳಿವು ಸಹ ಲಭ್ಯವಾಗುತ್ತಿವೆ. ಸದ್ಯ ಪಿಎಸ್ಐ ಅಕ್ರಮಕ್ಕಷ್ಟೇ ಸೀಮಿತವಾಗಿ ಸಿಐಡಿ ತನಿಖೆ ಮುಂದುವರಿಸಿರುವುದಾಗಿ ಮೂಲಗಳು ತಿಳಿಸಿವೆ.
‘ಸರ್’ ಭೇಟಿಯಾಗುತ್ತಿದ್ದ ಪಾಟೀಲ:
ಬಂಧಿತ ಆರೋಪಿ ಆರ್.ಡಿ. ಪಾಟೀಲ, ಆಗಾಗ ಬೆಂಗಳೂರಿಗೆ ಹೋಗಿ ಬರುತ್ತಿದ್ದ. ಪರೀಕ್ಷೆಯಲ್ಲಿ ಅಕ್ರಮ ಎಸಗಲು ಅನುಕೂಲ ಮಾಡಿಕೊಡುವ ‘ಹಿರಿಯ ಸರ್’ಗಳನ್ನು ಭೇಟಿಯಾಗಿ, ಮಾತುಕತೆ ನಡೆಸುತ್ತಿದ್ದರೆಂಬ ಮಾಹಿತಿಯೂ ಲಭ್ಯವಾಗಿದೆ.
ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರು ಇತ್ತೀಚೆಗಷ್ಟೇ ಆಡಿಯೊವೊಂದನ್ನು ಬಿಡುಗಡೆ ಮಾಡಿದ್ದರು. ಆರ್.ಡಿ. ಪಾಟೀಲ ಮಾತನಾಡಿದ್ದು ಎನ್ನಲಾದ ಆಡಿಯೊದಲ್ಲಿ, ‘ಅಭ್ಯರ್ಥಿಗಳ ಅರ್ಜಿ ಸಂಖ್ಯೆಗಳನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಿ, ಸರ್ ಭೇಟಿಯಾಗಿ ಪರೀಕ್ಷಾ ಕೇಂದ್ರ ಹಾಕಿಸಿಕೊಂಡು ಬರಲಾಗುತ್ತಿದೆ’ ಎಂಬ ಸಂಭಾಷಣೆ ಇತ್ತು. ಈ ಬಗ್ಗೆಯೂ ಸಿಐಡಿಗೆ ಅನುಮಾನವಿದ್ದು, ನಿಖರ ಪುರಾವೆ ಮಾತ್ರ ಲಭ್ಯವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.