ಮಂಗಳೂರು: ‘ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ (ಎನ್‌ಇಪಿ) ರಾಜ್ಯದಲ್ಲಿ ಪದವಿ ಪೂರ್ವ ತರಗತಿಗಳಲ್ಲಿ ಅಳವಡಿಸಿಕೊಳ್ಳುವ ಪಠ್ಯ ಕ್ರಮವನ್ನು ಇದೇ ವರ್ಷದ ಡಿಸೆಂಬರ್ ಒಳಗೆ ಅಂತಿಮಗೊಳಿಸಿ, ನಂತರ ಕಾರ್ಯರೂಪಕ್ಕೆ ತರಲಿದ್ದೇವೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ನಾಗೇಶ್ ತಿಳಿಸಿದರು.
ಜಿಲ್ಲಾ ಪಿ.ಯು ಕಾಲೇಜುಗಳ ಪ್ರಾಂಶುಪಾಲರಿಗಾಗಿ ಶನಿವಾರ ಏರ್ಪಡಿಸಿದ್ದ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಕಾರ್ಯಾಗಾರದ ಸಮಾರೋಪದಲ್ಲಿ ಅವರು ಮಾತನಾಡಿದರು.
'ಎನ್‌ಇಪಿ ಅಡಿ ಒಂದನೇ ತರಗತಿಯಿಂದ 12ನೇ ತರಗತಿವರೆಗೆ ರೂಪಿಸಲಾದ ಪಠ್ಯಕ್ರಮವನ್ನು ಬೇರೆ ರಾಜ್ಯಗಳಲ್ಲಿ ಅಳವಡಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಎನ್‌ಇಪಿಯನ್ನು ಹಂತ ಹಂತವಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ’ ಎಂದರು.
‘ಹೊಸ ಶಿಕ್ಷಣ ನೀತಿ ಜಾರಿಗೆ ಸಂಬಂಧಿಸಿದ ಪಿ.ಯು ಉಪನ್ಯಾಸಕರಿಂದಲೂ ಸಲಹೆಗಳನ್ನು ಕೇಳಲಾಗಿತ್ತು. ಆದರೆ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ. ಶಿಕ್ಷಣ
ಇಲಾಖೆಯ ಪೋರ್ಟಲ್‌ನಲ್ಲಿ ಇನ್ನೂ ಸಲಹೆ ನೀಡಲು ಅವಕಾಶ ಇದೆ. ಉಪನ್ಯಾಸಕರು ನೀಡುವ ಉತ್ತಮ ಸಲಹೆಗಳನ್ನು ಅಳವಡಿಸಿಕೊಳ್ಳಲಿದ್ದೇವೆ’ ಎಂದರು.
‘75 ವರ್ಷಗಳಿಂದ ಪಾಲಿಸುತ್ತ ಬಂದಿರುವ ದೇಶದ ಶಿಕ್ಷಣ ವ್ಯವಸ್ಥೆ ಸ್ವತಂತ್ರ ಉದ್ಯೋಗಕ್ಕೆ ನೆರವಾಗುತ್ತಿಲ್ಲ. ಪರಾವಲಂಬಿ ಬದುಕು ಸೃಷ್ಟಿಸುವ ರೀತಿಯ ಶಿಕ್ಷಣ ನೀಡಲಾಗುತ್ತಿದೆ. ಇಂತಹ ಶಿಕ್ಷಣದಿಂದ ದೇಶಕ್ಕೆ ಪ್ರಯೋಜನ ಇಲ್ಲ ಎಂಬ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರ ಶಿಕ್ಷಣ ನೀತಿಯನ್ನು ಪರಿಷ್ಕರಿಸಿದೆ. ಹೊಸ ನೀತಿಯಲ್ಲಿ ಕಲಿಕೆ ಜತೆಗೆ ಕೌಶಲ ಕಲಿಕೆಗೂ ಉತ್ತೇಜನ ನೀಡಲಾಗುತ್ತದೆ.’ ಎಂದರು.
ಸಂಪನ್ಮೂಲ ವ್ಯಕ್ತಿ ಡಾ.ಗೌರೀಶ್, ಪಿ.ಯು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯಣ್ಣ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸುಧಾಕರ್, ಅಭಿವೃದ್ಧಿ ವಿಭಾಗದಉಪನಿರ್ದೇಶಕಿ ರಾಜಲಕ್ಷ್ಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಶಾಂತ್, ಜಿಲ್ಲಾ ಪಿ.ಯು. ಕಾಲೇಜುಗಳ ಪ್ರಾಂಶುಪಾಲರ ಸಂಘ ಅಧ್ಯಕ್ಷ ಗಂಗಾಧರ್ ಮತ್ತಿತರರು ಇದ್ದರು.
ದಕ್ಷಿಣ ಕನ್ನಡ ಪ್ರಾಂಶುಪಾಲರ ಸಂಘ, ನಗರದ ಶಕ್ತಿ ಪಿ.ಯು ಕಾಲೇಜು, ಚಾಣಕ್ಯ ವಿಶ್ವವಿದ್ಯಾಲಯ ಹಾಗೂ ವಿದ್ಯಾ ಭಾರತಿ ಆಶ್ರಯದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ನೇಮಕಾತಿ ನಿಯಮ ಬದಲು– ಸಚಿವರಿಂದ ಸುಳಿವು
‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಶಿಕ್ಷಣ ವ್ಯವಸ್ಥೆಯನ್ನು ಮರುರೂಪಿಸುವಾಗ ಶಿಕ್ಷಕರ ನೇಮಕಾತಿಯಲ್ಲೂ ಭವಿಷ್ಯದಲ್ಲಿ
ಬದಲಾವಣೆ ತರಬೇಕಾದ ಅಗತ್ಯ ಎದುರಾಗಬಹುದು’ ಎಂದು ಸಚಿವ ನಾಗೇಶ್ ಹೇಳಿದರು.
‘ವೃಂದ ಮತ್ತು ನೇಮಕಾತಿಗೆ ಸಂಬಂಧಿಸಿದ ತಕ್ಷಣ ಯಾವುದೇ ಬದಲಾವಣೆಯನ್ನು ಜಾರಿಗೆ ತರುವುದಿಲ್ಲ. ಪ್ರಸಕ್ತ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ತರಬೇತಿ ನೀಡಿ ಹೊಸ ಶಿಕ್ಷಣ ನೀತಿಗೆ ಹೊಂದಿಕೊಳ್ಳುವಂತೆ ಮಾಡುವುದು ನಮ್ಮ ಉದ್ದೇಶ’
ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.