ಬೆಂಗಳೂರು: ಎಸ್‌ಎಸ್‌ಎಲ್‌ಸಿಯಂತೆ ದ್ವಿತೀಯ ಪಿಯು ಪರೀಕ್ಷೆಗಳೂ ಇನ್ನು ಮುಂದೆ ವೆಬ್‌ಕಾಸ್ಟಿಂಗ್ ಕಣ್ಗಾವಲಿನಲ್ಲಿ ನಡೆಯಲಿವೆ.
2024ರ ಪರೀಕ್ಷೆಗಳನ್ನು ಅತ್ಯಂತ ವ್ಯವಸ್ಥಿತವಾಗಿ, ನಕಲಿಗೆ ಅವಕಾಶವಿಲ್ಲದಂತೆ ಪಾರದರ್ಶಕವಾಗಿ ನಡೆಸಲು ನಿರ್ಧರಿಸಿದ್ದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ, ಪ್ರತಿ ಪರೀಕ್ಷಾ ಕೇಂದ್ರದಲ್ಲೂ ವೆಬ್‌ಕಾಸ್ಟಿಂಗ್ ಅಳವಡಿಸುವ ನಿರ್ಧಾರ ತೆಗೆದುಕೊಂಡಿತ್ತು. ಯಶಸ್ವಿಯಾಗಿ ಅನುಷ್ಠಾನವನ್ನೂ ಮಾಡಿತ್ತು. ಈಗ ದ್ವಿತೀಯ ಪಿಯು ಪರೀಕ್ಷೆಗಳಿಗೂ ಕಡ್ಡಾಯಗೊಳಿಸಿದೆ.
2024ರಲ್ಲಿ ನಡೆದ ದ್ವಿತೀಯ ಪಿಯು ಪರೀಕ್ಷೆ–1ರ ನಂತರ ಪ್ರತಿ ಜಿಲ್ಲೆಯಲ್ಲೂ ಸಿ.ಸಿ.ಟಿ.ವಿ ಕ್ಯಾಮೆರಾ ಇದ್ದ ಕೆಲ ಕಾಲೇಜುಗಳನ್ನು ಗುರುತಿಸಿ, ವೆಬ್‌ಕಾಸ್ಟಿಂಗ್ ಅಳವಡಿಸಿ ದ್ವಿತೀಯ ಪಿಯು–2 ಮತ್ತು 3ನೇ ಪರೀಕ್ಷೆ ನಡೆಸಿತ್ತು. ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರ (ಪಿಯುಡಿಡಿ) ಕಚೇರಿಯಲ್ಲಿ ಅಳವಡಿಸಿದ್ದ ಪರದೆಯ ಮೇಲೆ ಆಯಾ ಕಾಲೇಜುಗಳಲ್ಲಿ ನಡೆದಿದ್ದ ಪರೀಕ್ಷೆಗಳನ್ನು ಅಧಿಕಾರಿಗಳು ವೀಕ್ಷಿಸಿದ್ದರು. ಈಗ ರಾಜ್ಯದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ ಕಡ್ಡಾಯಗೊಳಿಸಲಾಗಿದ್ದು, 2025ರ ಮಾರ್ಚ್, ಏಪ್ರಿಲ್‌ನಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಅಡಿಯಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ.
ಪರೀಕ್ಷಾ ಕೇಂದ್ರಗಳು ಇರುವ ಎಲ್ಲ ಖಾಸಗಿ, ಅನುದಾನಿತ ಹಾಗೂ ಖಾಸಗಿ ಕಾಲೇಜುಗಳು ಸಿ.ಸಿ.ಟಿ.ವಿ ಕ್ಯಾಮೆರಾಗಳ ಐಪಿ ಸಂಖ್ಯೆಗಳನ್ನು (ಇಂಟರ್‌ನೆಟ್ ಪ್ರೋಟೊಕಾಲ್ ನಂಬರ್) ಆಯಾ ಜಿಲ್ಲೆಗಳ ಉಪ ನಿರ್ದೇಶಕರ ಜತೆ ಹಂಚಿಕೊಳ್ಳಲು ಸೂಚಿಸಲಾಗಿದೆ. ಉಪ ನಿರ್ದೇಶಕರು, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ತಮ್ಮ ಕಚೇರಿಯಲ್ಲೇ ಕುಳಿತು ಪರೀಕ್ಷಾ ಚಟುವಟಿಕೆ ವೀಕ್ಷಿಸಲಿದ್ದಾರೆ.
ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ತಂಡ ರಚನೆ:
ಪ್ರತಿ ತಾಲ್ಲೂಕಿನಲ್ಲೂ ಪ್ರಮುಖ ಕಾಲೇಜಿನ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದ ತಲಾ ಒಬ್ಬರು ಉಪನ್ಯಾಸಕರನ್ನು ಒಳಗೊಂಡ ನಾಲ್ವರ ತಂಡವನ್ನು ಜಿಲ್ಲಾ ಉಪ ನಿರ್ದೇಶಕರು ರಚಿಸುತ್ತಾರೆ. ಈ ತಂಡ ಆಯಾ ತಾಲ್ಲೂಕು ವ್ಯಾಪ್ತಿಯ ಪಿಯು ಫಲಿತಾಂಶ ಸುಧಾರಣೆ ಹಾಗೂ ವೆಬ್‌ಕಾಸ್ಟಿಂಗ್ ವೀಕ್ಷಣೆಯ ಜವಾಬ್ದಾರಿ ನಿಭಾಯಿಸಲಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಈ ತಂಡದ ಮೇಲುಸ್ತುವಾರಿ ನೋಡಿಕೊಳ್ಳುವರು. ಪ್ರತಿ ತಿಂಗಳು ಸಭೆ ನಡೆಸಿ, ಪ್ರಗತಿ ಪರಿಶೀಲನೆ ಮಾಡುವರು.
‘ಪ್ರತಿ ಕಾಲೇಜುಗಳ ಪ್ರಾಂಶುಪಾಲರು, ಆಯಾ ವಿಷಯಗಳ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ವೆಬ್‌ಕಾಸ್ಟಿಂಗ್ ಕುರಿತು ಮಾಹಿತಿ ನೀಡಬೇಕು. ಅವರಲ್ಲಿನ ಭಯ ಹೋಗಲಾಡಿಸಬೇಕು. ಧೈರ್ಯವಾಗಿ ಪರೀಕ್ಷೆ ಬರೆಯುವಂತೆ ಹೇಳಬೇಕು. ಮೂರು ಪರೀಕ್ಷೆಗಳನ್ನು ಪರಿಚಯಿಸಿದ ವಿವರ, ಅನುಕೂಲಗಳನ್ನು ಮನವರಿಕೆ ಮಾಡಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ವೃದ್ಧಿಸಬೇಕು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೊದಲಬಾರಿ ಪರಿಚಯಿಸಿದಾಗ ಆದ ಲೋಪಗಳು ಪಿಯು ಪರೀಕ್ಷೆಯಲ್ಲಿ ಪುನರಾವರ್ತನೆಯಾಗದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ’ ಎಂದು ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್‌ಕುಮಾರ್ ಸಿಂಗ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಏನಿದು ವೆಬ್‌ಕಾಸ್ಟಿಂಗ್?
ಪ್ರತಿ ಪರೀಕ್ಷಾ ಕೊಠಡಿಯಲ್ಲೂ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸ ಲಾಗುತ್ತದೆ. ಹೀಗೆ ಅಳವಡಿಸಿದ ಕ್ಯಾಮೆರಾಗಳ ಐಪಿ ಸಂಖ್ಯೆಗಳನ್ನು (ಇಂಟರ್‌ನೆಟ್ ಪ್ರೋಟೊಕಾಲ್ ನಂಬರ್) ಬಳಸಿಕೊಂಡು ಆಯಾ ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪಿಸಿದ ನಿಯಂತ್ರಣ ಕೊಠಡಿಗಳಲ್ಲಿ ಕುಳಿತು ಅಧಿಕಾರಿಗಳು ಎಲ್ಲ ಕೇಂದ್ರಗಳ ಚಟುವಟಿಕೆ ವೀಕ್ಷಿಸಬಹುದು. ಪರೀಕ್ಷಾ ಅಕ್ರಮ ಕಂಡುಬಂದರೆ ತಕ್ಷಣ ಆ ಕೇಂದ್ರದ ಮುಖ್ಯಸ್ಥರಿಗೆ ಮಾಹಿತಿ ನೀಡಲಾಗುತ್ತದೆ. ಜತೆಗೆ, ಅಕ್ರಮಕ್ಕೆ ಸಹಕರಿಸಿದ ಕೊಠಡಿ ಮೇಲ್ವಿಚಾರಕರ ಮೇಲೆ ಕ್ರಮ ಜರುಗಿಸಲಾಗುತ್ತದೆ.
2024ರ ಮೊದಲ ಪರೀಕ್ಷೆಯ ನಂತರ ವೆಬ್‌ಕಾಸ್ಟಿಂಗ್ ಅಳವಡಿಸಲು ನಿರ್ಧರಿಸಲಾಗಿತ್ತು. 2025ರಿಂದ ಎಲ್ಲ ಕೇಂದ್ರಗಳಲ್ಲೂ ಕಡ್ಡಾಯಗೊಳಿಸಲಾಗಿದೆರಿತೇಶ್ಕುಮಾರ್ ಸಿಂಗ್ ಪ್ರಧಾನ ಕಾರ್ಯದರ್ಶಿ, ಶಾಲಾ ಶಿಕ್ಷಣ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.