ADVERTISEMENT

ರಜೆ ರಹಿತ ಪಿಯು ಶಿಕ್ಷಣ: ಘೋಷಣೆಗೆ ಅಭಿಯಾನ

ಮೂರು ಪರೀಕ್ಷೆ, ಮೌಲ್ಯಮಾಪನ ಕಾರ್ಯಗಳಿಂದ ರಜಾ ಸೌಲಭ್ಯ ಕಡಿತ

ಚಂದ್ರಹಾಸ ಹಿರೇಮಳಲಿ
Published 25 ಮೇ 2024, 23:30 IST
Last Updated 25 ಮೇ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಬೆಂಗಳೂರು: ಬೋಧನೆ, ಮೂರು ಪರೀಕ್ಷೆಗಳು ಹಾಗೂ ಮೌಲ್ಯಮಾಪನ ಕಾರ್ಯಗಳಿಂದಾಗಿ ವರ್ಷ ಪೂರಾ ಕೆಲಸ ಮಾಡುತ್ತಿರುವ ಉಪನ್ಯಾಸಕರು ಪದವಿಪೂರ್ವ ಶಿಕ್ಷಣವನ್ನು ‘ರಜೆ ರಹಿತ’ವೆಂದು ಘೋಷಿಸಲು ಆಗ್ರಹಿಸಿ ಅಭಿಯಾನವನ್ನೇ ಆರಂಭಿಸಿದ್ದಾರೆ.

ಶೈಕ್ಷಣಿಕ ವೇಳಾಪಟ್ಟಿಯಂತೆ ಪ್ರತಿ ವರ್ಷವೂ ಜೂನ್‌ನಿಂದ ಆರಂಭವಾಗುವ ಪಿಯು ಕಾಲೇಜುಗಳು ಮಾರ್ಚ್ 31ಕ್ಕೆ ಕೊನೆಗೊಳ್ಳುತ್ತವೆ. ನಾಗರಿಕ ಸೇವಾ ನಿಯಮ (ಕೆಸಿಎಸ್‌ಆರ್) 113ರ ಅನ್ವಯ ಉಪನ್ಯಾಸಕರಿಗೆ ಬೇಸಿಗೆ ಹಾಗೂ ದಸರಾ ರಜೆ ಸೇರಿ ವರ್ಷಕ್ಕೆ 60 ದಿನಗಳ ರಜೆ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಸಕ್ತ ವರ್ಷದಿಂದ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಮೂರು ಪರೀಕ್ಷೆಗಳನ್ನು ಪರಿಚಯಿಸಿದೆ. ಪ್ರತಿ ಪರೀಕ್ಷೆಗೂ ಕೊಠಡಿ ಮೇಲ್ವಿಚಾರಣೆ, ನಂತರ ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗಬೇಕಿದೆ. ಹೀಗೆ, ಮೂರು ಪರೀಕ್ಷೆ ಹಾಗೂ ಮೌಲ್ಯಮಾಪನ ಕಾರ್ಯಗಳನ್ನು ನಿರಂತರವಾಗಿ ನಿಭಾಯಿಸುವುದರಿಂದ ಉಪನ್ಯಾಸಕರ ರಜಾ ಸೌಲಭ್ಯಗಳು ಕಡಿತವಾಗಿವೆ.

ADVERTISEMENT

‘ಹಿಂದಿನ ವರ್ಷದವರೆಗೂ ದಸರಾ ಹಾಗೂ ಬೇಸಿಗೆ ರಜೆಯ ಸೌಲಭ್ಯದ ಸಮಸ್ಯೆ ಇರಲಿಲ್ಲ. ಆಯಾ ವಿಷಯಗಳ ಉಪನ್ಯಾಸಕರು ಆದ್ಯತೆಯ ಮೇಲೆ ಮೌಲ್ಯಮಾಪನ ಕಾರ್ಯಕ್ಕೆ ತೆರಳುತ್ತಿದ್ದೆವು. ಚುನಾವಣಾ ಸಮಯದಲ್ಲಿ ಒಂದಷ್ಟು ರಜೆ ತ್ಯಾಗ ಮಾಡುತ್ತಿದ್ದೆವು. ಉಳಿದ ಅವಧಿ ಕುಟುಂಬಗಳ ಜತೆ ಕಳೆಯಲು ಸಾಧ್ಯವಾಗುತ್ತಿತ್ತು. 2023–24ನೇ ಸಾಲಿನಿಂದ ದ್ವಿತೀಯ ಪಿಯುಗೆ ಮೂರು ಪರೀಕ್ಷೆಗಳನ್ನು ನಡೆಸುತ್ತಿರುವ ಕಾರಣ ರಜೆಗಳೇ ಇಲ್ಲವಾಗಿದೆ. ಹಾಗಾಗಿ, ಆರೋಗ್ಯ ಇಲಾಖೆ, ಗೃಹ ಇಲಾಖೆ ಮತ್ತಿತರ ತುರ್ತು ಸೇವಾ ಇಲಾಖೆಗಳಂತೆ ಪದವಿ ಪೂರ್ವ ಶಿಕ್ಷಣವನ್ನು ರಜೆ ರಹಿತ ಎಂದು ಘೋಷಿಸಬೇಕು’ ಎಂದು ಉಪನ್ಯಾಸಕರು ಒತ್ತಾಯಿಸಿದ್ದಾರೆ.

‘ಪರೀಕ್ಷಾ ಮಂಡಳಿ ದ್ವಿತೀಯ ಪಿಯುಗೆ ನಡೆಸುವ ಮೂರು ಪರೀಕ್ಷೆಗಳಲ್ಲಿ ಮೊದಲನೆಯದು ಶೈಕ್ಷಣಿಕ ವರ್ಷದ ಅಂತ್ಯದ ಮಾರ್ಚ್‌ನಲ್ಲಿ, ಮೂರನೆಯದು ಮುಂದಿನ ಶೈಕ್ಷಣಿಕ ವರ್ಷದ ಆರಂಭದ ಜೂನ್‌ನಲ್ಲಿ ನಡೆಯುತ್ತದೆ. ಈ ಎರಡೂ ಪರೀಕ್ಷೆಗಳು ಬೇಸಿಗೆ ರಜೆಯ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಆದರೆ, ಮೊದಲ ಪರೀಕ್ಷೆಯ ಮೌಲ್ಯಮಾಪನ ಹಾಗೂ ಎರಡನೇ ಪರೀಕ್ಷೆ ಹಾಗೂ ಅದರ ಮೌಲ್ಯಮಾಪನಗಳಿಂದ ಹೆಚ್ಚಿನ ತೊಂದರೆಯಾಗಿದೆ. ಬೇಸಿಗೆ ರಜೆ ಸಂಪೂರ್ಣ ಇಲ್ಲವಾಗಿದೆ. ಹಾಗಾಗಿ, ರಜೆ ರಹಿತ ಎಂದು ಘೋಷಿಸುವ ಜತೆಗೆ 30 ದಿನಗಳ ಗಳಿಕೆ ರಜೆ, ಅರ್ಧ ವೇತನ ಸಹಿತ ರಜೆ ಸೌಲಭ್ಯಗಳನ್ನು ಮಂಜೂರು ಮಾಡಬೇಕು’ ಎನ್ನುತ್ತಾರೆ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್‌. ನಿಂಗೇಗೌಡ ಮತ್ತು ಪ್ರಧಾನ ಕಾರ್ಯದರ್ಶಿ ಶಿವರಾಜ್‌ ಬಿ. ಮಾಲಿಪಾಟೀಲ. 

ಪ್ರವೇಶ ಪ್ರಕ್ರಿಯೆಯೂ ಬೋಧಕರ ಹೊಣೆ

ಪಿಯು ಉಪನ್ಯಾಸಕರು ಈ ಬಾರಿ ಮೂರು ಪರೀಕ್ಷೆ, ಮೌಲ್ಯಮಾಪನದ ಜತೆಗೆ, ಲೋಕಸಭಾ ಚುನಾವಣಾ ಕೆಲಸದಲ್ಲೂ ತೊಡಗಿಸಿಕೊಂಡಿದ್ದಾರೆ.

‘ಈಗ ಪ್ರಥಮ ಪಿಯು ಕೋರ್ಸ್‌ಗಳಿಗೆ ಪ್ರವೇಶ ಆರಂಭವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಳ ಮಾಡುವ ಹೊಣೆಯನ್ನು ಉಪನ್ಯಾಸಕರಿಗೆ ವಹಿಸಲಾಗಿದೆ. ಹಾಗಾಗಿ, ಮೇ 11ರಿಂದಲೇ ಸರದಿ ಮೇಲೆ ಪ್ರತಿ ದಿನ ಒಬ್ಬೊಬ್ಬ ಉಪನ್ಯಾಸಕರು ಕಾಲೇಜಿಗೆ ತೆರಳಿ ಪ್ರವೇಶ ಪ್ರಕ್ರಿಯೆಯ ಕಾರ್ಯಗಳಲ್ಲೂ ಭಾಗಿಯಾಗುತ್ತಿದ್ದೇವೆ. ಮನೆಮನೆಗೆ ತೆರಳಿ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ಮಕ್ಕಳನ್ನು ಕಾಲೇಜಿಗೆ ಸೇರಿಸಲು ಪ್ರಯತ್ನ ನಡೆಸುತ್ತಿದ್ದೇವೆ’ ಎಂದು ರಾಯಚೂರಿನ ಗ್ರಾಮೀಣ ಪ್ರದೇಶದ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ರಾಜಪ್ಪ ಮಾಹಿತಿ ನೀಡಿದರು.

ದಸರಾ, ಬೇಸಿಗೆ ವೇಳೆ ಉಪನ್ಯಾಸಕರಿಗೆ ಸಿಗುತ್ತಿದ್ದ ರಜೆ 60 ದಿನಗಳು

3 ಪರೀಕ್ಷೆ, ಮೌಲ್ಯಮಾಪನ ಕಾರ್ಯಗಳಿಂದ ರಜೆ ಸೌಲಭ್ಯ ಕಡಿತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.