ADVERTISEMENT

ಪಿಯು ಉಪನ್ಯಾಸಕರು, ಸಿಬ್ಬಂದಿ ಹಾಜರಿ ಕಡ್ಡಾಯ; ಶಿಕ್ಷಣ ಇಲಾಖೆ ಸುತ್ತೋಲೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2020, 19:31 IST
Last Updated 15 ಡಿಸೆಂಬರ್ 2020, 19:31 IST
ಪದವಿಪೂರ್ವ ಶಿಕ್ಷಣ ಇಲಾಖೆ
ಪದವಿಪೂರ್ವ ಶಿಕ್ಷಣ ಇಲಾಖೆ   

ಬೆಂಗಳೂರು: ಕೋವಿಡ್‌ ಕಾರಣದಿಂದ ಇನ್ನೂ ಪದವಿ ಪೂರ್ವ ಕಾಲೇಜುಗಳು ಆರಂಭವಾಗಿಲ್ಲ. ಆದರೆ, ಕಾಲೇಜುಗಳಲ್ಲಿ ಹಾಜರಿದ್ದು, ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷಣದ ಮೂಲಕ ನೆರವಾಗಬೇಕಿದ್ದ ಉಪನ್ಯಾಸಕರು ಅನಧಿಕೃತವಾಗಿ ಗೈರಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪದವಿಪೂರ್ವ ಶಿಕ್ಷಣ ಇಲಾಖೆ, ಉಪನ್ಯಾಸಕರು ಮತ್ತು ಸಿಬ್ಬಂದಿ ಕಾರ್ಯನಿರತ ದಿನಗಳಲ್ಲಿ (ರಜಾದಿನ ಹೊರತುಪಡಿಸಿ) ಬೆಳಿಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ಕಡ್ಡಾಯವಾಗಿ ಕಾಲೇಜುಗಳಲ್ಲಿ ಹಾಜರಿರಬೇಕು ಎಂದು ಸುತ್ತೋಲೆ ಹೊರಡಿಸಿದೆ.

‘ಪ್ರಿ ರೆಕಾರ್ಡ್‌ ಯೂ ಟ್ಯೂಬ್‌ ತರಗತಿಗಳನ್ನು ಇನ್ನೂ ಪರಿಣಾಮಕಾರಿಯಾಗಿ ಬಳಸಿಕೊಂಡು ವಿದ್ಯಾರ್ಥಿಗಳನ್ನು ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಸಂಪೂರ್ಣ ಜವಾಬ್ದಾರಿ ಉಪನ್ಯಾಸಕರದ್ದು. ಈ ನಿರ್ದೇಶನವನ್ನು ಪಾಲಿಸದ ಬಗ್ಗೆ ದೂರುಗಳು ಬಂದರೆ ಸಂಬಂಧಿಸಿದ ಕಾಲೇಜುಗಳ ಪ್ರಾಂಶುಪಾಲರನ್ನು ಮತ್ತು ಆಯಾ ಜಿಲ್ಲಾ ಉಪ ನಿರ್ದೇಶಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು’ ಎಂದೂ ಇಲಾಖೆಯ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.

ಆಯಾ ವಿಷಯವಾರು ಉಪನ್ಯಾಸಕರು ವಾಟ್ಸ್ಆ್ಯಪ್‌ ಗುಂಪುಗಳನ್ನು ಮಾಡಿಕೊಂಡು ವಿದ್ಯಾರ್ಥಿಗಳಿಗೆ ಪಾಠಗಳಿಗೆ ಸಂಬಂಧಿಸಿದ ಪ್ರಶ್ನೆ, ಸಮಸ್ಯೆಗಳಿಗೆ ಉತ್ತರಿಸಬೇಕು. ವಾಟ್ಸ್ಆ್ಯಪ್‌ ಮೂಲಕ ಹೋಮ್‌ ವರ್ಕ್‌ಗಳನ್ನು ನೀಡುವ ಜೊತೆಗೆ ಕಿರು ಪರೀಕ್ಷೆಗಳನ್ನೂ ನಡೆಸಬೇಕು. ಈ ಕಲಿಕಾ ಚಟುವಟಿಕೆಗಳನ್ನು ಪ್ರಾಂಶುಪಾಲರು ನಿರ್ವಹಿಸಬೇಕು. ಜಿಲ್ಲಾ ಉಪ ನಿರ್ದೇಶಕರು ನಿತ್ಯ ಕನಿಷ್ಠ ಎರಡು ಕಾಲೇಜುಗಳಿಗೆ ಭೇಟಿ ನೀಡಿ, ಪರಿಶೀಲಿಸಿ ಕೇಂದ್ರ ಕಚೇರಿಗೆ ವರದಿ ನೀಡಬೇಕು. ಉಪನ್ಯಾಸಕರು ಮತ್ತು ಸಿಬ್ಬಂದಿಯ ಗೈರು ಹಾಜರಿಯನ್ನು ಅವರ ಹಕ್ಕಿನಲ್ಲಿರುವ ಸಾಂದರ್ಭಿಕ ರಜೆ (ಸಿಎಲ್‌) ಅಥವಾ ಗಳಿಕೆ ರಜೆ (ಇಎಲ್‌) ಎಂದು ನಮೂದಿಸಬೇಕು ಎಂದೂ ಸುತ್ತೋಲೆಯಲ್ಲಿ ನಿರ್ದೇಶಕರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.