ಬೆಂಗಳೂರು: ‘ದ್ವಿತೀಯ ಪಿಯು ವಿದ್ಯಾರ್ಥಿಗಳು ತಾವು ಕಲಿಯುತ್ತಿರುವ ಕಾಲೇಜಿನಲ್ಲೇ ಪ್ರಾಯೋಗಿಕ ಪರೀಕ್ಷೆಗೆ ಇನ್ನು ಮುಂದೆ ಹಾಜರಾಗುವಂತಿಲ್ಲ’ ಎಂದು ಹೊರಡಿಸಿದ್ದ ಸುತ್ತೋಲೆಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ವಾಪಸ್ ಪಡೆದಿದೆ.
‘ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಸೂಚನೆಯಂತೆ ಸುತ್ತೋಲೆಯನ್ನು ಹಿಂಪಡೆಯಲಾಗಿದೆ. ಹಿಂದಿನಂತೆ ಆಯಾ ಕಾಲೇಜುಗಳಲ್ಲೇ ಪರೀಕ್ಷೆಗಳು ನಡೆಯಲಿವೆ’ ಎಂದು ಮಂಡಳಿ ಅಧ್ಯಕ್ಷೆ ಮಂಜುಶ್ರೀ ಸುತ್ತೋಲೆ ಹಿಂಪಡೆದಿದ್ದಕ್ಕೆ ಕಾರಣ ನೀಡಿದ್ದಾರೆ.
ಪ್ರಾಯೋಗಿಕ ಪರೀಕ್ಷೆಗಳನ್ನು ಪ್ರತಿ ವರ್ಷವೂ ಆಯಾ ಕಾಲೇಜುಗಳಲ್ಲೇ ನಡೆಸಲಾಗುತ್ತಿತ್ತು. ಅದೇ ಕಾಲೇಜುಗಳಲ್ಲೇ ನಡೆಸುವುದರಿಂದ ಎಲ್ಲರಿಗೂ ಗರಿಷ್ಠ ಅಂಕ ನೀಡಲಾಗುತ್ತಿದೆ. ಹಾಗಾಗಿ, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಒಂದು ಕಾಲೇಜಿನಲ್ಲಿ ಕಲಿಯುವ ವಿದ್ಯಾರ್ಥಿಗಳು ಹಂಚಿಕೆ ಮಾಡಿದ ಇತರೆ ಕಾಲೇಜಿಗಳಿಗೆ ತೆರಳಿ ಪ್ರಾಯೋಗಿಕ ಪರೀಕ್ಷೆ ಎದುರಿಸಬೇಕು ಎಂದು ಮಂಡಳಿ ಸುತ್ತೋಲೆ ಹೊರಡಿಸಿತ್ತು.
ಮಂಡಳಿಯ ನಿರ್ಧಾರವನ್ನು ಖಂಡಿಸಿದ್ದ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘ, ಸುತ್ತೋಲೆಯನ್ನು ವಾಪಸ್ ಪಡೆಯುವಂತೆ ಪತ್ರ ಬರೆದಿತ್ತು. ನಂತರ ಪರಿಷ್ಕೃತ ಸುತ್ತೋಲೆ ಹೊರಡಿಸಿದ್ದ ಮಂಡಳಿ, ಪರೀಕ್ಷಾ ಕೇಂದ್ರಗಳಲ್ಲಿನ ಪ್ರಯೋಗಾಲಯಗಳ ಸೌಕರ್ಯದ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಹಂಚಿಕೆ ಮಾಡಲಾಗುವುದು. ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಲು ಅವರದೇ ಕಾಲೇಜಿನ ಉಪನ್ಯಾಸಕರನ್ನು ಆಂತರಿಕ ಪರೀಕ್ಷಕರಾಗಿ ನೇಮಿಸಲಾಗುವುದು, ಗ್ರಾಮೀಣ ಭಾಗದಲ್ಲಿ ಒಂದೇ ಕೇಂದ್ರ ಲಭ್ಯವಿದ್ದರೆ ಅದೇ ಕೇಂದ್ರದಲ್ಲೇ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುವುದು ಎಂದಿತ್ತು.
‘ಮಂಡಳಿಯ ನಿರ್ಧಾರ ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾರಕವಾಗಿತ್ತು. ಸುತ್ತೋಲೆ ಹಿಂಪಡೆಯುವ ಮೂಲಕ ಮಂಡಳಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದೆ’ ಎಂದು ಸಂಘದ ಅಧ್ಯಕ್ಷ ಎ.ಎಚ್. ನಿಂಗೇಗೌಡ ಹೇಳಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.