ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಅತಿ ಬೇಗನೇ ಪ್ರಕಟಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ತಯಾರಿ ನಡೆಸಿದೆ.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಈ ಕ್ರಮದಿಂದ ಎಂಜಿನಿಯರಿಂಗ್ ಮತ್ತಿತರ ವೃತ್ತಿಕೋರ್ಸ್‌ಗಳಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ಕುಳಿತುಕೊಳ್ಳುವ ರಾಜ್ಯದ ಸಾವಿರಾರು ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ.
ಪ್ರತಿ ವರ್ಷ ಸಿಇಟಿ ಪರೀಕ್ಷೆ ಆದ ಬಳಿಕವೇ ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗುತ್ತಿತ್ತು. ಈ ಬಾರಿ ಲೋಕಸಭಾ ಚುನಾವಣೆ ಕಾರಣ ಸಿಇಟಿ ಪರೀಕ್ಷೆಯನ್ನೇ (ಏ.29 ಮತ್ತು 30) ಮುಂದೂಡಲಾಗಿದೆ. ಪಿಯು ಫಲಿತಾಂಶವನ್ನು ಮೊದಲೇ ಪ್ರಕಟಿಸುವ ಸಾಧ್ಯತೆ ಇರುವುದರಿಂದ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಗಳು ‘ಪ್ರಜಾವಾಣಿ’ಗೆ ಹೇಳಿವೆ.
ಪರೀಕ್ಷಾ ಪ್ರಾಧಿಕಾರ ಈ ಸಂಬಂಧ ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆ ಮಾತುಕತೆ ನಡೆಸಿ, ಫಲಿತಾಂಶದ ದಿನಾಂಕ ಮುಂದೂಡುವಂತೆ ಮನವಿ ಮಾಡಲು ನಿರ್ಧರಿಸಿದೆ. ಅತಿ ಬೇಗನೇ ಫಲಿತಾಂಶ ಪ್ರಕಟಿಸುವುದರಿಂದ ನಿರೀಕ್ಷಿತ ಫಲಿತಾಂಶ ಬಾರದ ಕಾರಣ ವಿದ್ಯಾರ್ಥಿಗಳಲ್ಲಿ ಮಾನಸಿಕವಾಗಿ ಕುಸಿದು ಹೋಗುತ್ತಾರೆ. ಪ್ರತಿ ವರ್ಷ ದ್ವಿತೀಯ ಪಿಯು ವಿಜ್ಞಾನ ವಿಭಾಗದ ಬಹುತೇಕ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಕೂರುತ್ತಾರೆ.
ಒಂದು ವೇಳೆ ಬೇಗನೆ ಫಲಿತಾಂಶ ಪ್ರಕಟಿಸಿದರೆ ಅನುತ್ತೀರ್ಣಗೊಂಡವರು ಮತ್ತು ಕಡಿಮೆ ಅಂಕ ತೆಗೆದವರು ಪರೀಕ್ಷೆಗೆ ಹಾಜರಾಗುವುದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಈ ವರ್ಷ ಸುಮಾರು 1.90 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದಾರೆ. ವೆಬ್‌ಸೈಟ್ ಮೂಲಕ ಪ್ರವೇಶ ಪತ್ರಗಳನ್ನೂ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.
ಪ್ರತಿ ವರ್ಷ ಪಿಯುಸಿ ಫಲಿತಾಂಶ ಸರಾಸರಿ ಶೇ 50– 55 ರಷ್ಟು ಇರುತ್ತದೆ. ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹೆಸರು ನೋಂದಾಯಿಸಿದವರಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಗೈರಾಗುವ ಸಾಧ್ಯತೆ ಇದೆ. ಇದರ ಪ್ರಯೋಜನ ನೆರೆಯ ರಾಜ್ಯಗಳ ವಿದ್ಯಾರ್ಥಿಗಳಿಗೆ ಆಗುತ್ತದೆ.
ಫಲಿತಾಂಶ ಹೇಗೇ ಬರಲಿ, ರಾಜ್ಯ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯುವುದರ ಜೊತೆಗೆ, ಕೌನ್ಸೆಲಿಂಗ್‌ಗೂ ಹಾಜರಾಗಬೇಕು. ಒಂದು ವೇಳೆ ಯಾವುದೇ ವಿಷಯದಲ್ಲಿ ಅನುತ್ತೀರ್ಣರಾದರೂ ಪೂರಕ ಪರೀಕ್ಷೆಯಲ್ಲಿ ಕುಳಿತುಕೊಂಡು ಉತ್ತೀರ್ಣರಾಗಿ ವೃತ್ತಿ ಕೋರ್ಸ್‌ಗೆ ಸೇರಲು ಅವಕಾಶವಿರುತ್ತದೆಎಂದು ಅವರು ಹೇಳಿದರು.
ಪಿಯು ಫಲಿತಾಂಶದ ದಿನ ಇಂದು ಪ್ರಕಟ
ದ್ವಿತೀಯ ಪಿಯುಸಿ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪೂರ್ಣಗೊಂಡಿದ್ದು, ಫಲಿತಾಂಶದ ದಿನಾಂಕ ನಾಳೆ (ಶುಕ್ರವಾರ) ಗೊತ್ತಾಗಲಿದೆ.
‘ಈ ಬಾರಿ ಆನ್‌ಲೈನ್ ಮೂಲಕ ಅಂಕಗಳನ್ನು ಸರ್ವರ್‌ಗೆ ಸೇರಿಸುವ ಪದ್ಧತಿ ಆರಂಭಿಸಿದ್ದರಿಂದ ಮೌಲ್ಯಮಾಪನದ ನಂತರದ ಪ್ರಕ್ರಿಯೆಗಳು ಬೇಗನೆ ಮುಗಿದಿದೆ. ಆದ್ದರಿಂದ, ಶುಕ್ರವಾರ ಸಂಜೆ ಫಲಿತಾಂಶದ ದಿನಾಂಕ ಪ್ರಕಟಿಸಲಾಗುವುದು. ಏ.17 ಕ್ಕೆ ಫಲಿತಾಂಶ ಪ್ರಕಟ ಆಗುವುದಿಲ್ಲ. ಆದರೆ, ಹಿಂದಿನ ವರ್ಷಗಳಿಗಿಂತ ಬೇಗ ಪ್ರಕಟಿಸಲಾಗುವುದು’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ (ಪ್ರಭಾರಿ) ಸಿ.ಶಿಖಾ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.