ADVERTISEMENT

ಸಕಾಲದಲ್ಲಿ ದ್ವಿತೀಯ ಪಿಯು ಪಠ್ಯಪುಸ್ತಕ ವಿತರಣೆ ಅಸಾಧ್ಯ?

ಪುಸ್ತಕಗಳ ಮುದ್ರಣಕ್ಕೆ ಟೆಂಡರ್‌ ಕರೆದಿಲ್ಲ/ ವಿದ್ಯಾರ್ಥಿಗಳ ಪರದಾಟ ಆರಂಭ

ರೇಷ್ಮಾ ರವಿಶಂಕರ್
Published 25 ಏಪ್ರಿಲ್ 2019, 20:19 IST
Last Updated 25 ಏಪ್ರಿಲ್ 2019, 20:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೆಂಗಳೂರು ನಗರ ಸೇರಿ ರಾಜ್ಯದೆಲ್ಲೆಡೆ ಟ್ಯುಟೋರಿಯಲ್‌ಗಳಲ್ಲಿ ಪಾಠ– ಪ್ರವಚನ ಆರಂಭವಾಗಿದ್ದು, ಹೊಸ ಪಠ್ಯ ಪುಸ್ತಕಗಳು ಸಿಗದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ದ್ವಿತೀಯ ಪಿಯುಸಿ ತರಗತಿಗಳು ಇನ್ನು ಒಂದು ತಿಂಗಳಲ್ಲಿ ಆರಂಭವಾಗಲಿದ್ದು, ಪಠ್ಯ ಪುಸ್ತಕಗಳ ಮುದ್ರಣಕ್ಕೆ ಇನ್ನೂ ಟೆಂಡರ್‌ ಕರೆದಿಲ್ಲ. ಹೀಗಾಗಿ ಹೊಸ ಪಠ್ಯ ಪುಸ್ತಕಗಳು ಸದ್ಯಕ್ಕೆ ಮಾರುಕಟ್ಟೆ ಪ್ರವೇಶಿಸುವ ಲಕ್ಷಣವಿಲ್ಲ.

ಖಾಸಗಿ ಟ್ಯುಟೋರಿಯಲ್‌ಗಳಿಗೆ ಹೋಗುತ್ತಿರುವ ವಿದ್ಯಾರ್ಥಿಗಳು ಹಳೇ ಪಠ್ಯಪುಸ್ತಕಗಳನ್ನೇ ಖರೀದಿಸಲಾರಂಭಿಸಿದ್ದಾರೆ. ‘ಮುಂದಿನ ಶೈಕ್ಷಣಿಕ ವರ್ಷಕ್ಕೆ ಹೊಸ ಪಠ್ಯಪುಸ್ತಕಗಳನ್ನು ಮುದ್ರಿಸಲು ಟೆಂಡರ್‌ ಆದೇಶ ನೀಡಿಲ್ಲ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ADVERTISEMENT

ಮೇ 25 ರಿಂದಲೇ ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಲಿವೆ. ಪ್ರಥಮ ಪಿಯುಸಿ ತರಗತಿಗಳು ಜೂನ್‌ 1ರಿಂದ ಆರಂಭಗೊಳ್ಳಲಿವೆ. ಪಠ್ಯಪುಸ್ತಕ ಮುದ್ರಣಕ್ಕೆ ಇನ್ನೂ ಟೆಂಡರ್‌ ಕರೆಯದೇ ಇರುವುದರಿಂದ ಸಕಾಲದಲ್ಲಿ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವುದು ಕಷ್ಟವಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ವಾಣಿಜ್ಯ ಮತ್ತು ವಿಜ್ಞಾನದ ವಿದ್ಯಾರ್ಥಿಗಳಿಗೆ ಎನ್‌ಸಿಇಆರ್‌ಟಿ ಪಠ್ಯ ಪುಸ್ತಕಗಳನ್ನು ನಿಗದಿಪಡಿಸಲಾಗಿದೆ.

ಅತ್ಯಂತ ಕಡಿಮೆ ಸಮಯದಲ್ಲಿ ಭಾರೀ ಸಂಖ್ಯೆಯಲ್ಲಿ ಪಠ್ಯ ಪುಸ್ತಕಗಳನ್ನು ಪೂರೈಕೆ ಮಾಡುವುದು ಕಷ್ಟ. ಆದ್ದರಿಂದ, ಪುಸ್ತಕ ಮುದ್ರಣ ಮತ್ತು ಪೂರೈಕೆಯ ವ್ಯವಸ್ಥೆ ಮಾಡಿಕೊಳ್ಳುವಂತೆ ಎನ್‌ಸಿಇಆರ್‌ಟಿ ಲಿಖಿತವಾಗಿ ಶಿಕ್ಷಣ ಇಲಾಖೆಗೆ ಸ್ಪಷ್ಟವಾಗಿ ತಿಳಿಸಿದೆ.

‘ಈಗ ಉಳಿದಿರುವ ಮಾರ್ಗವೆಂದರೆ, ರಾಜ್ಯ ಸರ್ಕಾರ ಎನ್‌ಸಿಇಆರ್‌ಟಿಗೆ ರಾಯಧನ ನೀಡಿ, ಖಾಸಗಿಯವರ ಮೂಲಕ ಪಠ್ಯ ಪುಸ್ತಕಗಳ ಮುದ್ರಣ ಆರಂಭಿಸಬೇಕು. ಇದಕ್ಕೆ ಟೆಂಡರ್‌ ಕರೆಯಬೇಕಾಗುತ್ತದೆ. ಈ ಕುರಿತು ಈವೆರೆಗೆ ಯಾವುದೇ ತಯಾರಿ ನಡೆದಿಲ್ಲ’ ಎಂದು ಮೂಲಗಳು ತಿಳಿಸಿವೆ.

ಶಿಕ್ಷಣ ಇಲಾಖೆ ಅಧಿಕಾರಿಗಳು ಸಾಕಷ್ಟು ಮೊದಲೇ ಎನ್‌ಸಿಇಆರ್‌ಟಿ ಜತೆ ಸಂಪರ್ಕ ಸಾಧಿಸುವ ಪ್ರಯತ್ನ ಮಾಡಲಿಲ್ಲ. ಚುನಾವಣಾ ನೀತಿ ಸಂಹಿತಿ ಜಾರಿಗೆ ಬರುತ್ತದೆ ಎಂಬ ಅರಿವು ಇದ್ದರೂ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸದ ಕಾರಣ ಈ ಸಮಸ್ಯೆಯಾಗಿದೆ ಎಂದು ಮುದ್ರಕರೊಬ್ಬರು ತಿಳಿಸಿದರು.

ಈ ಕುರಿತು ಪ್ರತಿಕ್ರಿಯೆಗೆ ಇಲಾಖೆ ಅಧಿಕಾರಿಗಳು ಸಿಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.