ADVERTISEMENT

5, 8ನೇ ತರಗತಿಗೆ ಇನ್ನು ವಾರ್ಷಿಕ ಪರೀಕ್ಷೆ

ರಾಜ್ಯ ಪಠ್ಯಕ್ರಮದ ಶಾಲೆಗಳಿಗೆ ಅನ್ವಯ – ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2022, 20:17 IST
Last Updated 13 ಡಿಸೆಂಬರ್ 2022, 20:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನಿಂದ (2022-23) ರಾಜ್ಯ ಪಠ್ಯಕ್ರಮದ ಎಲ್ಲ ಶಾಲೆಗಳಲ್ಲಿ 5 ಮತ್ತು 8ನೇ ತರಗತಿಗೆ ವಾರ್ಷಿಕ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (ಕೆಎಸ್‌ಇಎಬಿ) ಈ ಪರೀಕ್ಷೆ ನಡೆಸಲಿದೆ. ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಮಕ್ಕಳಲ್ಲಿನ ಕಲಿಕಾ ಕೊರತೆ ನೀಗಿಸಲು ಪ್ರಸಕ್ತ ಸಾಲಿನಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ. ಆದರೆ, 1ನೇ ತರಗತಿಯಿಂದ 9ನೇ ತರಗತಿವರೆಗೆ ಶಾಲಾ ಹಂತದಲ್ಲಿ ನಿರಂತರ ಮತ್ತು ವ್ಯಾಪಕ ಮೌಲ್ಯಾಂಕನ (ಸಿಸಿಇ) ಅಡಿ ವಿಶ್ಲೇಷಣೆ ಮಾಡಲಾಗುತ್ತಿದ್ದು, ವಾರ್ಷಿಕ ಪರೀಕ್ಷೆಗಳನ್ನು ನಿರ್ವಹಿಸುತ್ತಿಲ್ಲ.

ವಾರ್ಷಿಕ ಪರೀಕ್ಷೆ ಇಲ್ಲದೇ ಇರುವುದರಿಂದ ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳ ಒಟ್ಟಾರೆ ಸಾಧನೆ ಯಾವ ರೀತಿ ಇದೆ ಎಂಬುದನ್ನು ಅಂದಾಜಿಸಲು ಸಾಧ್ಯವಾಗುತ್ತಿಲ್ಲ. ಮಕ್ಕಳ ಕಲಿಕಾ ಮಟ್ಟವೇನು? ಕೊರತೆಗಳೇನು? ಯಾವ ವಿಷಯದಲ್ಲಿ ಹಿನ್ನಡೆ ಉಂಟಾಗಿದೆ? ಅವುಗಳ ನಿವಾರಣೆಗೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು? ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಪರೀಕ್ಷೆ ನಡೆಸಿ, ವಿದ್ಯಾರ್ಥಿಗಳ ಕಲಿಕಾ ಪ್ರಗತಿ, ಸಾಮರ್ಥ್ಯವನ್ನು ಏಕರೂಪದ ಸಾಧನಾ ಮತ್ತು ತಂತ್ರ ಬಳಸಿ ಮೌಲ್ಯಮಾಪನ ನಡೆಸಿ, ವಿಶ್ಲೇಷಿಸುವ ಅಗತ್ಯವಿದೆ ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.

ADVERTISEMENT

ಕೆಎಸ್‌ಇಎಬಿ ಪ್ರಶ್ನೆ ಪತ್ರಿಕೆ ರೂಪಿಸಿ, ಸರಬರಾಜು ಮಾಡಿ ಶಾಲಾ ಹಂತದಲ್ಲಿ ಈ ಪರೀಕ್ಷೆಯನ್ನು ನಡೆಸಲಿದೆ. ಬಳಿಕ, ಮೌಲ್ಯಾಂಕನ ವಿಶ್ಲೇಷಣೆ ಮೂಲಕ ಕಲಿಕೆ ಕುಂಠಿತವಾಗಿರುವ ವಿಷಯ, ಶಾಲೆ, ಕ್ಲಸ್ಟರ್, ತಾಲ್ಲೂಕುಗಳನ್ನು ಗುರುತಿಸಿ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಅಗತ್ಯ ಕ್ರಿಯಾ ಯೋಜನೆ ರೂಪಿಸಿ,ಬೋಧನೆ ಮತ್ತು ಕಲಿಕಾ ಪ್ರಕ್ರಿಯೆ ಬಲವರ್ಧನೆಗೆ ಇಲಾಖೆ ಮುಂದಾಗಿದೆ.

ಈಗಾಗಲೇ ಅರ್ಧ ಶೈಕ್ಷಣಿಕ ವರ್ಷ ಮುಕ್ತಾಯಗೊಂಡಿರುವುದರಿಂದ, ಉಳಿದ ಅರ್ಧ ವರ್ಷದ ಪಠ್ಯವಸ್ತುವನ್ನು ಆಧರಿಸಿ 5 ಮತ್ತು 8ನೇ ತರಗತಿಗೆ 50 ಅಂಕಗಳಿಗೆ ನಿಗದಿಪಡಿಸಿ 2 ಗಂಟೆ ಅವಧಿಯ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಇದರಲ್ಲಿ 40 ಅಂಕಗಳಿಗೆ ಲಿಖಿತ, 10 ಅಂಕಗಳಿಗೆ ಮೌಖಿಕ ಪರೀಕ್ಷೆ ಇರಲಿದೆ. ತಾಲ್ಲೂಕು ಮಟ್ಟದಲ್ಲಿ ಮೌಲ್ಯಮಾಪನ ನಡೆಯಲಿದೆ.

ಪರೀಕ್ಷೆ ಮತ್ತು ನಿರ್ವಹಣಾ ವೆಚ್ಚವನ್ನು ವಿದ್ಯಾರ್ಥಿಗಳಿಂದ ಸಂಗ್ರಹಿಸದೆ, ಕೆಎಸ್‌ಇಎಬಿ ಭರಿಸಲಿದೆ. ಶಾಲಾವಾರು ಮಕ್ಕಳ ಸಂಖ್ಯೆ ಆಧರಿಸಿ 5ನೇ ತರಗತಿಯ ಪರೀಕ್ಷಾ ಕೇಂದ್ರದಲ್ಲಿ ಕನಿಷ್ಠ 25, 8ನೇ ತರಗತಿಯ ಪರೀಕ್ಷಾ ಕೇಂದ್ರದಲ್ಲಿ ಕನಿಷ್ಠ 50 ಮಕ್ಕಳು ಇರುವಂತೆ ಪರೀಕ್ಷಾ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದೆ. ಪಠ್ಯಪುಸ್ತಕ ಮತ್ತು ಕಲಿಕಾ ಚೇತರಿಕೆ ಆಧರಿಸಿ ಮಾದರಿ ಪ್ರಶ್ನೆಪತ್ರಿಕೆಯನ್ನು ಕೆಎಸ್‌ಇಎಬಿ ಸಿದ್ಧಪಡಿಸಲಿದೆ. ರಾಜ್ಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ನೆರವು ಪಡೆದು ಜನವರಿ ಎರಡನೇ ವಾರದಲ್ಲಿ ಶಾಲೆಗಳಿಗೆ ಮಾದರಿ ಪ್ರಶ್ನೆಪತ್ರಿಕೆ ಕಳುಹಿಸಿಕೊಡಲಾಗುವುದು ಎಂದೂ ಸುತ್ತೋಲೆಯಲ್ಲಿದೆ.

ಪರೀಕ್ಷೆಗೆ ತಾತ್ಕಾಲಿಕ ವೇಳಾಪಟ್ಟಿ

ಮಾರ್ಚ್‌ 9ರಿಂದ 17;‌ ಪರೀಕ್ಷೆ

ಮಾರ್ಚ್‌ 21ರಿಂದ 28;ಮೌಲ್ಯಮಾಪನ

ಮಾರ್ಚ್‌ 31ರಿಂದ ಏಪ್ರಿಲ್‌ 5;ಫಲಿತಾಂಶ ಸಿದ್ಧಪಡಿಸುವುದು

ಏಪ್ರಿಲ್‌ 8ರಿಂದ 10;ಫಲಿತಾಂಶ ಪ್ರಕಟಣೆ

ಸುತ್ತೋಲೆ ವಾಪಸ್‌ಗೆ ‘ರುಪ್ಸ’ ಆಗ್ರಹ
‘5 ಮತ್ತು 8ನೇ ತರಗತಿಗೆ ಪರೀಕ್ಷೆ ನಡೆಸುವುದು ಅವೈಜ್ಞಾನಿಕ. ಶಿಕ್ಷಣದ ಮೂಲ ಉದ್ದೇಶಕ್ಕೆ ತದ್ವಿರುದ್ಧ. ಹೀಗಾಗಿ, ಈ ಸುತ್ತೋಲೆ ವಾಪಸು ಪಡೆಯಬೇಕು’ ಎಂದು ಆಗ್ರಹಿಸಿಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಸಂಘ (ರುಪ್ಸ) ಪತ್ರ ಬರೆದಿದೆ.

‘ಆರ್‌ಟಿಇ ಕಾಯ್ದೆ ಉಲ್ಲೇಖಿಸಿ ಈ ಸುತ್ತೋಲೆ ಹೊರಡಿಸಲಾಗಿದೆ. ಆದರೆ, ಅದೇ ಕಾಯ್ದೆಯಲ್ಲಿ ಶಿಕ್ಷಕರು, ಮೂಲಸೌಕರ್ಯ, ಗುಣಮಟ್ಟದ ಶಿಕ್ಷಣ ವಿಚಾರವಾಗಿ ಇಲಾಖೆ ಯೋಚಿಸುತ್ತಿಲ್ಲವೇಕೆ? ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಮೂಲಸೌಕರ್ಯಗಳ ಕೊರತೆ ಇದೆ. ಪುಸ್ತಕ ನೀಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಾರ್ಷಿಕ ಪರೀಕ್ಷೆ ನಡೆಸಿದರೆ ಮಕ್ಕಳ ಸ್ಥಿತಿ ಏನಾಗಬಹುದು’ ಎಂದು ರುಪ್ಸ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪ್ರಶ್ನಿಸಿದ್ದಾರೆ.

‘ಮುಂದಿನ ವರ್ಷದಿಂದ ಜಾರಿ ಸೂಕ್ತ’

‘5 ಮತ್ತು 8ನೇ ತರಗತಿಗೆ ವಾರ್ಷಿಕ ಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಆರೋಗ್ಯಕರ ಬೆಳವಣಿಗೆ. ಆದರೆ, ಇದನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಅನುಷ್ಠಾನ ಮಾಡುವ ಬದಲು ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಂಡುಮುಂದಿನ ವರ್ಷದಿಂದ ಜಾರಿಗೊಳಿಸುವುದು ಸೂಕ್ತ’ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟಗಳ (ಕ್ಯಾಮ್ಸ್‌) ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌ ಹೇಳಿದ್ದಾರೆ.

‘ಮಕ್ಕಳಿಗೆ ಕಲಿಕಾ ಬದ್ಧತೆ ಕುಗ್ಗಿ ಹೋಗಿತ್ತು. ಕಲಿಕೆ ಸರಿಯಾಗಿ ಆಗುತ್ತಿರಲಿಲ್ಲ. ಪರೀಕ್ಷೆ ಮೂಲಕ ಮಕ್ಕಳಿಗೆ ಬದ್ಧತೆ ಬರಲು ಅವಕಾಶವಾಗಲಿದೆ. ಇದು ಮಕ್ಕಳು, ಪೋಷಕರು, ಶಿಕ್ಷಕರು ಒಪ್ಪುವಂಥದ್ದು. ಆದರೆ, ಕಲಿಕೆಗೆ ಅವಕಾಶ ಕೊಟ್ಟು, ಮಕ್ಕಳಿಗೆ ಹೊರೆ ಆಗದಂತೆ ಸಹಭಾಗಿತ್ವದಲ್ಲಿ ಪರೀಕ್ಷೆ ನಡೆಸಬೇಕು‌’ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.