ಬೆಂಗಳೂರು: ರಾಜ್ಯದ ಜನಸಾಮಾನ್ಯರ ಸಮಸ್ಯೆಗಳು ಮತ್ತು ಸರ್ಕಾರದ ಸಮಸ್ಯೆಗಳ ಪರಿಹಾರಕ್ಕೆ ದೆಹಲಿಯಲ್ಲಿ ಪ್ರತ್ಯೇಕವಾದ ಕಾರ್ಯಾಲಯ ಆರಂಭಿಸಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.
ಕೇಂದ್ರ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಪಕ್ಷದ ಕಚೇರಿಗೆ ಸೋಮವಾರ ಭೇಟಿ ನೀಡಿದ ಅವರು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು.
ಈ ಸಂಬಂಧ ಕರ್ನಾಟಕದ ನಾಲ್ವರು ಸಚಿವರು ಮಾತುಕತೆ ನಡೆಸಿದ್ದೇವೆ. ಕಚೇರಿಯಲ್ಲಿ ಒಬ್ಬ ಹಿರಿಯ ಅಧಿಕಾರಿಯನ್ನೂ ನೇಮಿಸಲಾಗುತ್ತದೆ. ನನ್ನ ಗೃಹಕಚೇರಿಯಲ್ಲೇ ಪ್ರತ್ಯೇಕ ಕಾರ್ಯಾಲಯ 15 ದಿನಗಳಲ್ಲಿ ಆರಂಭಿಸಲಾಗುವುದು ಎಂದರು.
ರಾಜ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಬಗೆಹರಿಸಲು ಸದಾ ಸಿದ್ಧರಿದ್ದೇವೆ. ಕೇಂದ್ರ ಮತ್ತು ರಾಜ್ಯದ ಮಧ್ಯೆ ಸಾಮರಸ್ಯಕ್ಕೆ ಸದಾ ದುಡಿಯುತ್ತೇವೆ. ಅಲ್ಲದೇ, ತಿಂಗಳಿಗೆ ಒಂದು ದಿನ 2 ಗಂಟೆ ನಾಲ್ವರಲ್ಲಿ ಒಬ್ಬರು ಸಚಿವರು ಕಚೇರಿಗೆ ಬಂದು ಕುಳಿತು ಸಮಸ್ಯೆ ಆಲಿಸುತ್ತೇವೆ ಎಂದೂ ಸದಾನಂದಗೌಡ ಹೇಳಿದರು.
ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯಲ್ಲಿ ಹೊಸತನ ತುಂಬಲು ಪ್ರಯತ್ನ ನಡೆಸಿದ್ದೇವೆ. ಜನೌಷಧಿ ಮಳಿಗೆಗಳನ್ನು ಹೆಚ್ಚಿಸಲಾಗುವುದು. ಒಂದೂವರೆ ವರ್ಷದಲ್ಲಿ 5,000 ಜನೌಷಧ ಮಳಿಗೆಗಳನ್ನು ಸ್ಥಾಪಿಸಲಾಗಿದೆ ಎಂದರು.
ದಾವಣಗೆರೆಯಲ್ಲಿ ರಸಗೊಬ್ಬರ ಕಾರ್ಖಾನೆ
ದಾವಣಗೆರೆಯಲ್ಲಿ ರಸಗೊಬ್ಬರ ಕಾರ್ಖಾನೆ ಆರಂಭಿಸಲು ಪ್ರಾರಂಭಿಕ ಕಾರ್ಯ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮೇಕೆದಾಟು ಡಿಪಿಆರ್ ಕಳಿಸಲು ತಾಕೀತು
ರಾಜ್ಯ ಸರ್ಕಾರಇಲ್ಲಿಯವರೆಗೆ ಮೇಕೆದಾಟು ಡಿಪಿಆರ್ ಕಳಿಸಿಲ್ಲ. ಬೇಗನೆ ಕಳಿಸಿ ಎಂದು ಸದಾನಂದಗೌಡ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದರು.
ಗ್ರಾಮ ವಾಸ್ತವ್ಯಕ್ಕೆ ಪರ್ಯಾಯ ಶಾಲಾ ವಾಸ್ತವ್ಯ
ಗ್ರಾಮ ವಾಸ್ತವ್ಯದಿಂದ ಪ್ರಯೋಜನ ಆಗಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶಾಲಾ ವಾಸ್ತವ್ಯಕ್ಕೆ ಹೊರಟಿದ್ದಾರೆ. ಗ್ರಾಮ ವಾಸ್ತವ್ಯಗಳೇ ತಿರುಗುಬಾಣ ಆಗಿರುವುದು ಚುನಾವಣಾ ಫಲಿತಾಂಶದಿಂದ ವ್ಯಕ್ತವಾಗಿದೆ. ಪರ್ಯಾಯವಾಗಿ ಶಾಲಾ ವಾಸ್ತವ್ಯ ಕಂಡುಕೊಂಡಿದ್ದಾರೆ. ಗೊತ್ತಿಲ್ಲದನ್ನು ಶಾಲೆಯಲ್ಲಿ ಕಲಿತುಕೊಳ್ಳಬಹುದು ಅಲ್ಲವೆ ಎಂದು ಸದಾನಂದಗೌಡ ವ್ಯಂಗ್ಯವಾಡಿದರು.
ಹಿಂದಿ ಹೇರಿಕೆ ಪ್ರಶ್ನೆಯೇ ಇಲ್ಲ
ಪ್ರಸ್ತುತ ಚರ್ಚೆಯಾಗುತ್ತಿರುವ ಹಿಂದಿ ಭಾಷೆ ವಿಷಯ ಕುರಿತು ಪ್ರತಿಕ್ರಿಯಿಸಿದ ಅವರು,ಹಿಂದಿ ಹೇರಿಕೆ ಪ್ರಶ್ನೆಯೇ ಇಲ್ಲ. ಪ್ರಾದೇಶಿಕ ಭಾಷೆಗೆ ಪ್ರಾಶಸ್ತ್ಯ ನೀಡುವುದು ಮೋದಿ ಸರ್ಕಾರದ ಆದ್ಯತೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.