ADVERTISEMENT

ಅರಣ್ಯ ರಕ್ಷಣೆಗೆ ಗ್ರಾಮಸ್ಥರ ಕಾವಲು!

ಭೂ ಕಬಳಿಕೆದಾರರಿಂದ ಕಾಡಿನ ಮರಗಳಿಗೆ ವಿಷ ಪ್ರಾಶನ

ವೆಂಕಟೇಶ ಜಿ.ಎಚ್.
Published 29 ಡಿಸೆಂಬರ್ 2022, 0:15 IST
Last Updated 29 ಡಿಸೆಂಬರ್ 2022, 0:15 IST
ಸೊರಬ ತಾಲ್ಲೂಕಿನ ಹಲಸಿನಕೊಪ್ಪದ ಬಳಿ ದುಷ್ಕರ್ಮಿಗಳು ಕಾಡಿನಲ್ಲಿ ಬೃಹತ್ ಮರಕ್ಕೆ ರಂಧ್ರ ಕೊರೆದು ವಿಷವಿಕ್ಕಿರುವುದು
ಸೊರಬ ತಾಲ್ಲೂಕಿನ ಹಲಸಿನಕೊಪ್ಪದ ಬಳಿ ದುಷ್ಕರ್ಮಿಗಳು ಕಾಡಿನಲ್ಲಿ ಬೃಹತ್ ಮರಕ್ಕೆ ರಂಧ್ರ ಕೊರೆದು ವಿಷವಿಕ್ಕಿರುವುದು   

ಶಿವಮೊಗ್ಗ: ಭೂಮಿ ಕಬಳಿಸುವ ದುರುದ್ದೇಶದಿಂದ ಕಾಡಿನಲ್ಲಿ ಹುಲುಸಾಗಿ ಬೆಳೆದ ಮರಗಳಿಗೆ ವಿಷ ಉಣಿಸಿ ಕೊಲ್ಲುವ ಪ್ರಕ್ರಿಯೆಗೆ ತಡೆಯೊಡ್ಡಲು ಸೊರಬ ತಾಲ್ಲೂಕಿನ ಹಲಸಿನಕೊಪ್ಪದ ಗ್ರಾಮಸ್ಥರು ಸಂಘಟಿತರಾಗಿದ್ದಾರೆ. ದಿನಕ್ಕೊಬ್ಬರಂತೆ ಸರದಿಯಲ್ಲಿ ಕಾಡಿನ ಕಾವಲು ಕಾಯುತ್ತಾರೆ.

ಪಕ್ಕದ ಕ್ಯಾಸನೂರು ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಹಲಸಿನಕೊಪ್ಪ ಗ್ರಾಮ ಹೊಂದಿಕೊಂಡಿದೆ. ಗ್ರಾಮದ ವ್ಯಾಪ್ತಿಯಲ್ಲಿರುವ 400 ಎಕರೆಯಷ್ಟು ಅರಣ್ಯ ಪ್ರದೇಶದ ಮೇಲೆ ಐದು ತಿಂಗಳ ಹಿಂದೆ ಭೂಕಬಳಿಕೆದಾರರ ಕಣ್ಣು ಬಿದ್ದಿದೆ.

‘ಮಳೆಗಾಲದಲ್ಲೂ ಕಾಡಿನಲ್ಲಿ ಮರಗಳು ಏಕಾಏಕಿ ಒಣಗಲು ಶುರುವಾಗಿದ್ದವು. ಇದು ನಮ್ಮಲ್ಲಿ ಅನುಮಾನ ಮೂಡಿಸಿತ್ತು. ಸೂಕ್ಷ್ಮವಾಗಿ ಪರಿಶೀಲಿಸಿದಾಗ ತೂತು ಕೊರೆದು ವಿಷ ಹಾಕಿ ಮರಗಳನ್ನು ಸಾಯಿಸುತ್ತಿರುವುದು, ನಂತರ ಅಲ್ಲಿ ಅಡಿಕೆ ಗಿಡ ಬೆಳೆಸುತ್ತಿರುವುದು
ಕಂಡು ಬಂದಿತ್ತು’ ಎಂದು ಗ್ರಾಮದ ಸಂಜೀವಿನಿ ಗ್ರಾಮ ವಿಕಾಸ ಸಂಸ್ಥೆ ಕಾರ್ಯಕರ್ತ ಬರಗಿ ಶ್ರೀನಿವಾಸ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಹೊರಗಿನಿಂದ ಬಂದ ಕೆಲವರು ಭೂಮಿ ಕಬಳಿಸಲು ಮರಗಳ ಹನನಕ್ಕೆ ಮುಂದಾಗಿದ್ದಾರೆ ಎಂಬುದು ಗೊತ್ತಾಯಿತು. ಆಗಿನಿಂದ ಕಾಡು ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದೇವೆ. ದುಷ್ಕರ್ಮಿಗಳು ಮತ್ತೆ ಮರಗಳಿಗೆ ವಿಷ ಉಣಿಸುವುದನ್ನು ತಡೆಯಲು ಅರಣ್ಯದಲ್ಲಿ ಗ್ರಾಮದ ಒಬ್ಬರು ನಿತ್ಯ ಕಾವಲು ಕಾಯುತ್ತಿದ್ದೇವೆ’ ಎಂದು ಗ್ರಾಮ ಅರಣ್ಯ ಕಾವಲು ಸಮಿತಿ ಅಧ್ಯಕ್ಷ ಹರಿಯಪ್ಪ ಮಾಹಿತಿ ನೀಡಿದರು.

‘ಭೂ ಕಬಳಿಕೆದಾರರಿಂದಾಗಿ ಸುಮಾರು 60 ಎಕರೆ ವ್ಯಾಪ್ತಿಯಷ್ಟು ಅರಣ್ಯ ನಾಶವಾಗಿದೆ. ಆ ಸ್ಥಳದಲ್ಲಿ ಮತ್ತೆ ಕಾಡು ಬೆಳೆಸುವ ಶಪಥ ಮಾಡಿದ್ದೇವೆ’ ಎಂದು ಗ್ರಾಮ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ರಮೇಶ ಹೇಳಿದರು.

ಕ್ಯಾಸನೂರು ಅರಣ್ಯ ಕಾಯಿಲೆ (ಮಂಗನ ಕಾಯಿಲೆ) 60 ವರ್ಷಗಳ ಹಿಂದೆ ಇದೇ ಅರಣ್ಯ ಪ್ರದೇಶದಲ್ಲಿ ಶುರುವಾಗಿತ್ತು. ವರದಾ ಹಾಗೂ ಅದರ ಉಪನದಿಗಳು ಈ ಭಾಗದಲ್ಲಿ ಹರಿಯುತ್ತವೆ. ಬೀಟೆ, ನಂದಿ, ಹೊನ್ನೆ, ದೇವದಾರ, ತಾರೆ, ಬಿಲಕಂಬಿ, ಶ್ರೀಗಂಧ, ನೇರಳೆ, ಮಾವು, ಬೈನೆ, ಮತ್ತಿ, ಕರವಲಿ, ಚ್ಯುನಗೇರಿ, ಸಂಪಿಗೆ, ಕಾರೆ, ಹೊಳಗೇರಿ, ನೆಲ್ಲಿ, ಕಣಗಲು ಸೇರಿದಂತೆ ವಿನಾಶದ ಅಂಚಿನಲ್ಲಿರುವ ವಿವಿಧ ಪ್ರಭೇದಗಳು ಇಲ್ಲಿ ಕಾಣಸಿಗುತ್ತವೆ ಎಂದು ಸಹ್ಯಾದ್ರಿ ಪಾರಂಪರಿಕ ಪ್ರಾಧಿಕಾರದ ಸದಸ್ಯ ಶ್ರೀಪಾದ ಬಿಚ್ಚುಗತ್ತಿ ತಿಳಿಸಿದ್ದಾರೆ.

ಜೇನು ಕಾನು ಘೋಷಣೆ

ಅರಣ್ಯ ಇಲಾಖೆ ಸಹಯೋಗದಲ್ಲಿ ಹಲಸಿನಕೊಪ್ಪ, ಬರಿಗೆ, ಕ್ಯಾಸನೂರು ಅರಣ್ಯ ಪ್ರದೇಶದ ಸುತ್ತ 2011-12ರಲ್ಲಿ ಕಂದಕ ನಿರ್ಮಿಸಿ ಕಾಡು ರಕ್ಷಣಾ ಯೋಜನೆಯನ್ನು ಪಶ್ಚಿಮ ಘಟ್ಟ ಕಾರ್ಯಪಡೆ ಜಾರಿ ಮಾಡಿದೆ. ಇದರಿಂದ ಈ ಭಾಗದ ಕಾಡಿನಲ್ಲಿ ಜೇನು ಹೆಚ್ಚಿದೆ. ಇದೇ ಕಾರಣಕ್ಕೆ 2021ರಲ್ಲಿ ಸೊರಬ ತಾಲ್ಲೂಕು ಪಂಚಾಯಿತಿಯ ಜೀವ ವೈವಿಧ್ಯ ಸಮಿತಿ ಹಲಸಿನಕೊಪ್ಪ ಸುತ್ತಲಿನ ಅರಣ್ಯ ಪ್ರದೇಶವನ್ನು ‘ಜೇನು– ಕಾನು’ ಎಂದು ಘೋಷಿಸಿದ್ದಾಗಿ ಗ್ರಾಮದ ಮುಖಂಡ ರಾಜಾರಾಮ ಕೆರೆಕೊಪ್ಪ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.