ADVERTISEMENT

ಸಾರ್ವಜನಿಕ ಸ್ಥಳದಲ್ಲಿ ನಿತ್ಯ 5 ತಾಸು ಗಸ್ತು ತಿರುಗಬೇಕು: ಪೊಲೀಸರಿಗೆ DGP ಸೂಚನೆ

ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2024, 13:16 IST
Last Updated 17 ಜುಲೈ 2024, 13:16 IST
<div class="paragraphs"><p>ಅಲೋಕ್‌ ಮೋಹನ್‌</p></div>

ಅಲೋಕ್‌ ಮೋಹನ್‌

   

ಬೆಂಗಳೂರು: ‘ರಾಜ್ಯದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸರ ಗೋಚರತೆ ತೀರಾ ಕಡಿಮೆ ಆಗಿದ್ದು, ಎಲ್ಲ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪ್ರತಿ ಬೆಳಿಗ್ಗೆ 9ರಿಂದ 11ರ ವರೆಗೆ ಹಾಗೂ ಸಂಜೆ 6ರಿಂದ ರಾತ್ರಿ 9ರ ವರೆಗೆ ಪೊಲೀಸ್ ಸಮವಸ್ತ್ರದಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಗಸ್ತು ನಡೆಸಬೇಕು’ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಆದೇಶಿಸಿದ್ದಾರೆ.

‘ಎಲ್ಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಬೆಂಗಳೂರು ಸೇರಿದಂತೆ ಇತರ ನಗರಗಳ ಪೊಲೀಸ್‌ ಕಮಿಷನರೇಟ್‌ಗಳ ವ್ಯಾಪ್ತಿಗೆ ಬರುವ ಡಿಸಿಪಿಗಳು ಪ್ರತಿದಿನ ಕನಿಷ್ಠ ಒಂದು ಪೊಲೀಸ್‌ ಠಾಣೆಗೆ ಭೇಟಿ ನೀಡಬೇಕು’ ಎಂದು ಸೂಚಿಸಿದ್ಧಾರೆ.

ADVERTISEMENT

‘ಎಲ್ಲ ವಲಯದ ಐಜಿಪಿಗಳು, ಡಿಐಜಿಪಿಗಳು ಹಾಗೂ ಹೆಚ್ಚುವರಿ ಪೊಲೀಸ್‌ ಆಯುಕ್ತರೂ ತಮ್ಮ ವ್ಯಾಪ್ತಿಯ ಠಾಣೆಗಳಿಗೆ ಭೇಟಿ ನೀಡಬೇಕು. ಭೇಟಿ ಸಂದರ್ಭದಲ್ಲಿ ಕಾರ್ಯ ನಿರ್ವಹಣೆ ಪರಿಶೀಲಿಸಬೇಕು. ಅಲ್ಲದೇ ಪ್ರಮುಖ ಅಪರಾಧ ಪ್ರಕರಣಗಳು ನಡೆದಾಗ ಸ್ಥಳಕ್ಕೆ ಭೇಟಿ ನೀಡಬೇಕು’ ಎಂದು ಸೂಚಿಸಿದ್ದಾರೆ.

‘ಕ್ಲಬ್‌ಗಳು, ಜೂಜು, ಮಟ್ಕಾ ಸೇರಿದಂತೆ ಎಲ್ಲ ಸಂಘಟಿತ ಅಪರಾಧಗಳನ್ನು ತಕ್ಷಣವೇ ನಿಲ್ಲಿಸಬೇಕು. ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಆದೇಶಿಸಿದ್ದಾರೆ.

‘ಡ್ರಗ್ಸ್‌ ಹಾಗೂ ಮಾದಕ ದ್ರವ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಶಾಲಾ–ಕಾಲೇಜುಗಳಿಗೆ ಭೇಟಿ ನಿಡಬೇಕು. ಎಲ್ಲ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ‘ಇ–ಬೀಟ್‌’ ಅಪ್ಲಿಕೇಶನ್‌ ಸಂಪೂರ್ಣ ನಿರ್ವಹಣೆ ಅರಿತಿರಬೇಕು. ಇ–ಬೀಟ್ ಸೇವೆ ಅನುಷ್ಠಾನಕ್ಕೆ ತರಬೇಕು’ ಎಂದು ಸೂಚಿಸಿದ್ದಾರೆ.

ಹೆದ್ದಾರಿಗಳಲ್ಲಿ ಗಸ್ತು ತಿರುಗುವ ವಾಹನಗಳ ಸಂಖ್ಯೆ ಹೆಚ್ಚಿಸಬೇಕು. ಸಾಮಾಜಿಕ ಮಾಧ್ಯಮದಲ್ಲಿ ನಕಲಿ ಸುದ್ದಿಗಳ ವಿರುದ್ಧ ಕ್ರಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಅಗತ್ಯವಿದ್ದರೆ ಸ್ವಯಂ ಪ್ರೇರಿತ ದೂರು ದಾಖಲಿಸಬೇಕು. ಜಿಲ್ಲಾ ಹಾಗೂ ನಗರಮಟ್ಟದ ಪೊಲೀಸ್‌ ಠಾಣೆಗಳಲ್ಲಿ ನಿಯಮಿತವಾಗಿ ಶಾಂತಿಸಭೆ ಹಾಗೂ ಜನಸ್ಪಂದನ ಸಭೆ ಆಯೋಜಿಸಬೇಕು. ಎಲ್ಲ ಸಮುದಾಯದ ಜತೆಗೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

‘ಎಲ್ಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾದ ಹೆಣ್ಣುಮಕ್ಕಳ ಹಾಗೂ ಮಹಿಳೆಯರ ಪತ್ತೆ ಕಾರ್ಯಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಕಾರ್ಯ ಚುರುಕುಗೊಳಿಸಬೇಕು. ಕಾರಾಗೃಹಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಬೇಕು’ ಎಂದು ಸೂಚಿಸಿದ್ದಾರೆ.

‘ದ್ವೇಷ ಭಾಷಣ ಹಾಗೂ ಪ್ರಚೋದನಕಾರಿ ಘೋಷಣೆ ಕೂಗುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಶಾಲಾ–ಕಾಲೇಜುಗಳ ಎದುರು ಭದ್ರತೆ ಹೆಚ್ಚಿಸಬೇಕು’ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ಅವರು ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಅಲೋಕ್‌ ಮೋಹನ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ಧಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.