ಬೆಂಗಳೂರು: ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಯನ್ನು (ಎಂಪಿಎಂ) ಸರ್ಕಾರಿ–ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಎಂಪಿಎಂಗೆ ಗುತ್ತಿಗೆ ನೀಡಿದ ನೆಡುತೋಪುಗಳಲ್ಲಿ ಬೆಳೆದಿರುವ ಅಕೇಶಿಯಾ, ನೀಲಗಿರಿ ಪೈನಸ್ ಮತ್ತಿತರ ಪರಿಸರಕ್ಕೆ ಮಾರಕವಾದ ಮರಗಳನ್ನು ತೆರವುಗೊಳಿಸಲು ಹಾಗೂ ಪ್ರದೇಶಗಳಲ್ಲಿ ನೈಸರ್ಗಿಕ ಮರಗಳನ್ನು ಬೆಳೆಸಲು ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಕಾಂಗ್ರೆಸ್‌ನ ಬಲ್ಕೀಸ್ ಬಾನು ಪ್ರಶ್ನೆಗೆ ವಿಧಾನ ಪರಿಷತ್‌ನಲ್ಲಿ ಉತ್ತರ ನೀಡಿದ ಅವರು, ಎಂಪಿಎಂಗೆ ಕಚ್ಚಾ ಸಾಮಗ್ರಿ ಪೂರೈಸಲು ಅಗತ್ಯವಾದ ಮರಗಳನ್ನು ಬೆಳೆಸಲು 1980ರಲ್ಲೇ 30 ಸಾವಿರ ಹೆಕ್ಟೇರ್ ನೀಡಲಾಗಿತ್ತು. 2015ರಿಂದ ಕಾರ್ಖಾನೆ ಬಾಗಿಲು ಮುಚ್ಚಿದೆ. ದಾವಣಗೆರೆ, ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಗಳೂರು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ನೆಡುತೋಪುಗಳ ಗುತ್ತಿಗೆ ಅವಧಿ 2060ರವರೆಗೆ ವಿಸ್ತರಿಸಲಾಗಿದೆ. ನೀಲಗಿರಿ ನೆಡಲು ಅನುಮತಿ ಇಲ್ಲ, ಆದರೆ, ತೆರವುಗೊಳಿಸಲು ಕೋರ್ಟ್ ತಡೆಯಾಜ್ಞೆ ಇದೆ. ಹಾಗಾಗಿ, ನಿರ್ಮೂಲನೆ ಸಾಧ್ಯವಾಗಿಲ್ಲ ಎಂದರು.
ಎಂಪಿಎಂ ಪುನರಾರಂಭಕ್ಕೆ ಪ್ರಯತ್ನ ನಡೆದಿವೆ. ಅರ್ಹ ಕಂಪನಿಗಳು ಮುಂದೆ ಬಾರದ ಕಾರಣ ಖಾಸಗಿಗೆ ಗುತ್ತಿಗೆ ಆಧಾರದಲ್ಲಿ ನೀಡುವ ಪ್ರಕ್ರಿಯೆಗಳು ನನೆಗುದಿಗೆ ಬಿದ್ದಿವೆ. ಎಂಪಿಎಂ ನೆಡುತೋಪುಗಳಲ್ಲಿ ನೀಲಗಿರಿ ಬೆಳೆಯಲು ಹಾಗೂ ಹೊಣೆಗಾರಿಕೆ ಇಲ್ಲದ ಕಾರ್ಯ ಚಟುವಟಿಕೆಗಳ ಷರತ್ತುಗಳನ್ನು ಕೆಲ ಕಂಪನಿಗಳು ವಿಧಿಸಿದ್ದ ಕಾರಣ ಸರ್ಕಾರ ಒಪ್ಪಲಿಲ್ಲ ಎಂದು ಹೇಳಿದರು.
ಕಾರ್ಖಾನೆಯ ₹1,102 ಕೋಟಿ ಹೊಣೆಗಾರಿಕೆ ಕುರಿತು ಆರ್ಥಿಕ ಇಲಾಖೆಯ ಜತೆ ಸಮಾಲೋಚನೆ ನಡೆಸಲಾಗಿದೆ. ಸರ್ಕಾರಿ–ಖಾಸಗಿ ಸಹಭಾಗಿತ್ವದಲ್ಲಿ ಕಾರ್ಖಾನೆ ಪುನರಾರಂಭಿಸುವ ಕುರಿತು ಚರ್ಚೆಗಳು ನಡೆದಿವೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.