ADVERTISEMENT

ಸಾರ್ವಜನಿಕ ಶೌಚಾಲಯ: ಕ್ರಿಯಾ ಯೋಜನೆ ಸಿದ್ಧ– ಹೈಕೋರ್ಟ್‌ಗೆ ಸರ್ಕಾರದ ಪ್ರಮಾಣ ಪತ್ರ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2023, 16:05 IST
Last Updated 2 ನವೆಂಬರ್ 2023, 16:05 IST
HIGH COURT
HIGH COURT   

ಬೆಂಗಳೂರು: ‘ಮುಂದಿನ ಎರಡು ವರ್ಷಗಳಲ್ಲಿ ಏರಿಕೆಯಾಗಬಹುದಾದ ಅಂದಾಜು ಜನಸಂಖ್ಯೆಯ ಪ್ರಮಾಣವನ್ನು ಅಧರಿಸಿ ಅದರಲ್ಲಿನ ಶೇ 5ರಷ್ಟು ‘ಬಂದು ಹೋಗುವ ಜನಸಂಖ್ಯೆ'ಗೆ (ಫ್ಲೋಟಿಂಗ್ ಪಾಪುಲೇಷನ್) ಅನುಗುಣವಾಗಿ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಶೌಚಾಲಯ ಮತ್ತು ಮೂತ್ರಾಲಯಗಳನ್ನು ನಿರ್ಮಿಸಲು ಸೂಕ್ತ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ‘ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ಸಾರ್ವಜನಿಕ ಶೌಚಾಲಯಗಳ ಸ್ಥಿತಿಗತಿ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ, 'ಲೆಟ್ಸ್ ಕಿಟ್ ಫೌಂಡೇಷನ್' ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಈ ಕುರಿತಂತೆ ನಗರಾಭಿವೃದ್ಧಿ ಇಲಾಖೆಯ ಪ್ರಮಾಣ ಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿಯಲ್ಲಿ ಕಾನೂನು ಸೇವಾ ಪ್ರಾಧಿಕಾರವನ್ನು ಪ್ರತಿವಾದಿಯನ್ನಾಗಿಸಿತು. ‘ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿಯು ಕ್ರಿಯಾ ಯೋಜನೆ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಸ್ವತಂತ್ರ ಪರಿಶೀಲನಾ ವರದಿ ಸಲ್ಲಿಸಬೇಕು‘ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತು.

ADVERTISEMENT

‘ಕ್ರಿಯಾ ಯೋಜನೆಗೆ ಕೇಂದ್ರ ಸರ್ಕಾರದ ಹಣವೆಷ್ಟು? ರಾಜ್ಯದ ಪಾಲಿನ ಅನುದಾನ ಎಷ್ಟು? ಅದನ್ನು ಹೇಗೆ ಬಳಸಲಾಗುತ್ತಿ‌ದೆ. ಕ್ರಿಯಾ ಯೋಜನೆಯ ಅನುಷ್ಠಾನ ಹೇಗೆ ಎಂಬ ವಿವರಗಳನ್ನು ಸಲ್ಲಿಸಬೇಕು‘ ಎಂದು ನಿರ್ದೇಶಿಸಿ ವಿಚಾರಣೆಯನ್ನು 2024ರ ಜನವರಿ 11ಕ್ಕೆ ಮುಂದೂಡಿತು.

ದಂಡ ರದ್ದು: ‘ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರವಾದ ಹೇಳಿಕೆ ಸಲ್ಲಿಸುವಂತೆ ನೀಡಲಾಗಿದ್ದ ಆದೇಶವನ್ನು ಪಾಲನೆ ಮಾಡಿಲ್ಲ. ರಾಜ್ಯ ಸರ್ಕಾರಕ್ಕೆ ಸೌಜನ್ಯದ ಭಾಷೆ ಅರ್ಥವಾಗುವುದಿಲ್ಲ‘ ಎಂದು ಕಳೆದ ವಿಚಾರಣೆ ವೇಳೆ ಕಿಡಿ ಕಾರಿದ್ದ ನ್ಯಾಯಪೀಠ ರಾಜ್ಯ ಸರ್ಕಾರಕ್ಕೆ ₹ 5 ಲಕ್ಷ ದಂಡ ವಿಧಿಸಿತ್ತು. ಆದರೆ, ಸರ್ಕಾರದ ಪರ ವಕೀಲರ ಮನವಿ ಮೇರೆಗೆ ಈ ಆದೇಶವನ್ನು ನ್ಯಾಯಪೀಠ ಇದೇ ವೇಳೆ ಹಿಂಪಡೆಯಿತು.

ಪ್ರಮಾಣ ಪತ್ರದಲ್ಲೇನಿದೆ?: ‘ಕ್ರಿಯಾ ಯೋಜನೆಗೆ ಸ್ವಚ್ಛ ಭಾರತ್ ಮಿಷನ್‌ನ 3ನೇ ರಾಜ್ಯ ಮಟ್ಟದ ತಾಂತ್ರಿಕ ಸಮಿತಿ ಅನುಮೋದನೆ ನೀಡಿದ್ದು, ಕೇಂದ್ರ ವಸತಿ ಮತ್ತು ನಗರ ವ್ಯವಹಾರ ಸಚಿವಾಲಯದ 9ನೇ ರಾಷ್ಟ್ರೀಯ ಸಲಹಾ ಹಾಗೂ ಪರಿಶೀಲನಾ ಸಮಿತಿಯ ಒಪ್ಪಿಗೆಯೂ ದೊರಕಿದೆ. ಈ ಕ್ರಿಯಾ ಯೋಜನೆಯಡಿ ಬಿಬಿಎಂಪಿ ವ್ಯಾಪ್ತಿಯಲ್ಲಿ ₹ 9 ಕೋಟಿ ವೆಚ್ಚದಲ್ಲಿ 600 ಶೌಚಾಲಯಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ‘ ಎಂದು ಪ್ರಮಾಣ ಪತ್ರದಲ್ಲಿ ವಿವರಿಸಲಾಗಿದೆ.

‘ಶೌಚಾಲಯ, ಮೂತ್ರಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ಅಕ್ಟೋಬರ್ 3ರಂದು ಸುತ್ತೋಲೆ ಹೊರಡಿಸಲಾಗಿದೆ. ಇದಕ್ಕಾಗಿ ಪಾಲಿಕೆ ಆಯುಕ್ತರು, ಮುಖ್ಯಾಧಿಕಾರಿ ಅಧ್ಯಕ್ಷತೆಯಲ್ಲಿ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಮಿತಿ ರಚಿಸುವಂತೆ ಅಕ್ಟೋಬರ್ 5ರಂದು ಆದೇಶಿಸಲಾಗಿದೆ ಎಂದು‘ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.