ಬೆಂಗಳೂರು: ಬಾಕಿ ಉಳಿಸಿಕೊಂಡಿರುವ ನೆಲ ಬಾಡಿಗೆ ₹ 129 ಕೋಟಿ ಪಾವತಿಸಿ, ಜಾಗ ತೆರವು ಮಾಡಬೇಕು ಎಂದು ನೃಪತುಂಗ ರಸ್ತೆಯಲ್ಲಿರುವ ಕೃಷಿ ಇಲಾಖೆಯ ಅಧೀನದ ‘ಕರ್ನಾಟಕ ಪ್ರದೇಶ ಕೃಷಿಕ ಸಮಾಜ’ಕ್ಕೆ (ಕೃಷಿ ಭವನ) ಲೋಕೋಪಯೋಗಿ ಇಲಾಖೆ ನೋಟಿಸ್ ನೀಡಿದೆ.
ಕೃಷಿಕ ಸಮಾಜವು 1966ರಲ್ಲಿ 99 ವರ್ಷಗಳ ಅವಧಿಗೆ ಈ ಜಾಗವನ್ನು ಗುತ್ತಿಗೆ ಪಡೆದುಕೊಂಡಿತ್ತು. ಬಾಕಿ ಉಳಿಸಿಕೊಂಡಿರುವ ಬಾಡಿಗೆ ಪಾವತಿಸಿ ಜಾಗ ತೆರವು ಮಾಡದಿದ್ದರೆ ಬಾಕಿ ವಸೂಲಿಗೆ ಕ್ರಮ ತೆಗೆದುಕೊಳ್ಳುವ ಜೊತೆಗೆ ‘ಕರ್ನಾಟಕ ಸಾರ್ವಜನಿಕ ಆವರಣ (ಅನಧಿಕೃತ ನಿವಾಸಿಗಳ ತೆರವು) ಕಾಯ್ದೆ– 1974’ ಅಡಿ ತೆರವುಗೊಳಿಸಲಾಗುವುದು ಎಂದು ನೋಟಿಸ್‌ನಲ್ಲಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ (ಕಟ್ಟಡಗಳ ವಿಭಾಗ ನಂ–2) ಎಚ್ಚರಿಕೆ ನೀಡಿದ್ದಾರೆ.
ಈ ನೋಟಿಸ್‌ಗೆ ಸಂಬಂಧಿಸಿದಂತೆ, ಕೃಷಿಕ ಸಮಾಜದ ಅಧ್ಯಕ್ಷರೂ ಆಗಿರುವ ಕೃಷಿ ಸಚಿವ ಎನ್. ಚಲುವರಾಯಸ್ವಾಮಿಗೆ ಪತ್ರ ಬರೆದಿರುವ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷ ಸಿ. ಪಾಪಣ್ಣ, ‘ಕೃಷಿ ಭವನಕ್ಕೆ ವಿಧಿಸಿರುವ ಭೂ ಬಾಡಿಗೆ ₹ 129 ಕೋಟಿಯನ್ನು ಮನ್ನಾ ಮಾಡಬೇಕು. ಅಲ್ಲದೆ, ಈ ಜಾಗವನ್ನು ಕೃಷಿಕ ಸಮಾಜದ ಹೆಸರಿಗೆ ವರ್ಗಾಯಿಸಿಕೊಡಬೇಕು’ ಎಂದು ಮನವಿ ಮಾಡಿದ್ದಾರೆ.
ರಾಜ್ಯ ಸರ್ಕಾರದ 1966ರ ಏಪ್ರಿಲ್ 12ರ ಆದೇಶದಂತೆ ವರ್ಷಕ್ಕೆ ₹ 1,000ದಂತೆ 5 ವರ್ಷಕ್ಕೊಮ್ಮೆ ನಿರಂತರವಾಗಿ 2013ರವರೆಗೆ ‘ಕೃಷಿ ಸಮಾಜವು ಬಾಡಿಗೆ ಪಾವತಿಸುತ್ತಾ ಬಂದಿದೆ. ನಂತರದಿಂದ ಪಾವತಿಸಿದ ಹಣವನ್ನು ಲೋಕೋಪಯೋಗಿ ಇಲಾಖೆ ಸ್ವೀಕರಿಸಿಲ್ಲ. 2020ರ ಆಗಸ್ಟ್ 11ರಂದು ಪತ್ರ ಬರೆದಿದ್ದ ಇಲಾಖೆ, 1977 ಜ. 20ರಿಂದ 2019 ಜೂನ್ 30ರವರೆಗಿನ ಬಾಡಿಗೆ ₹ 119.13 ಕೋಟಿ ಪಾವತಿಸುವಂತೆ ತಿಳಿಸಿತ್ತು. ಈ ನೆಲ ಬಾಡಿಗೆಯನ್ನು ಮನ್ನಾ ಮಾಡಬೇಕು ಮತ್ತು ಜಾಗವನ್ನು ಕೃಷಿ ಸಮಾಜದ ಹೆಸರಿಗೆ ಮಂಜೂರು ಮಾಡುವಂತೆ 2020ರ ಆಗಸ್ಟ್ 16ರಂದು ಅಂದಿನ ಕೃಷಿ ಸಚಿವರು ಮತ್ತು ಕೃಷಿ ಸಮಾಜದ ಅಧ್ಯಕ್ಷರು ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿದ್ದರು.
2021ರ ಮಾರ್ಚ್ 5ರಂದು ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದ ಮುಖ್ಯ ಎಂಜಿನಿಯರ್ (ಸಂಪರ್ಕ ಮತ್ತು ಕಟ್ಟಡ) ಕೃಷಿ ಸಮಾಜಕ್ಕೆ ವಿಧಿಸಿರುವ ಬಾಡಿಗೆ ಹಣವನ್ನು ಮನ್ನಾ ಮಾಡಲು ಮತ್ತು ಈ ಜಾಗವನ್ನು ಕೃಷಿಕ ಸಮಾಜಕ್ಕೆ ನೀಡಲು ಸರ್ಕಾರದ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದು ವರದಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.