ADVERTISEMENT

ಪಿಯು ಕಾಲೇಜುಗಳಿನ್ನು ‘ಹಿರಿಯ ಪ್ರೌಢಶಾಲೆ’

ಪ್ರೌಢಶಾಲೆ, ಪಿಯು ಪರೀಕ್ಷಾ ವಿಭಾಗಗಳು ವಿಲೀನ

ಚಂದ್ರಹಾಸ ಹಿರೇಮಳಲಿ
Published 27 ಡಿಸೆಂಬರ್ 2022, 0:15 IST
Last Updated 27 ಡಿಸೆಂಬರ್ 2022, 0:15 IST
   

ಬೆಂಗಳೂರು: ಪದವಿಪೂರ್ವ ಕಾಲೇಜು ಅಥವಾ ಜೂನಿಯರ್ ಕಾಲೇಜು ಎಂಬ ಪರಿಕಲ್ಪನೆಯೇ ಇನ್ನು ಮುಂದೆ ಇರುವುದಿಲ್ಲ. ಹತ್ತನೇ ತರಗತಿ ಉತ್ತೀರ್ಣರಾದ ಬಳಿಕ ಕಾಲೇಜಿಗೆ ಸೇರಿದ್ದೇವೆ ಎಂದು ಗರ್ವ ತೋರುವ ವಿದ್ಯಾರ್ಥಿಗಳ ಅವಕಾಶ ಇಲ್ಲವಾಗಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ, ಪದವಿಪೂರ್ವ ಕಾಲೇಜುಗಳನ್ನು ‘ಹಿರಿಯ ಪ್ರೌಢಶಾಲೆಗಳು’ ಎಂದು ಪರಿಗಣಿಸಲಾಗುವುದು. ಆದರೆ, ಈ ಬದಲಾವಣೆಯು ಉಪನ್ಯಾಸಕರಿಗೆ ಹಿಡಿಸಿಲ್ಲ. ಈ ಬದಲಾವಣೆಗೆ ಉಪನ್ಯಾಸಕ ವರ್ಗದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಪದವಿಪೂರ್ವ ಕಾಲೇಜುಗಳನ್ನು ಹಿರಿಯ ಪ್ರೌಢಶಾಲೆಗಳೆಂದು, ಪ್ರಥಮ, ದ್ವಿತೀಯ ಪಿಯುಸಿಗಳನ್ನು 11 ಹಾಗೂ 12ನೇ ತರಗತಿ ಎಂದು ಪರಿಗಣಿಸುವ ಅವಕಾಶವನ್ನು ಪರೀಕ್ಷಾ ಮಂಡಳಿ ತಿದ್ದುಪಡಿ ಕಾಯ್ದೆಯು ಒದಗಿಸಿದೆ. ಆದರೆ, ಕಾಲೇಜು ಮುಖ್ಯಸ್ಥ ರಾಗಿದ್ದ ಪ್ರಾಂಶುಪಾಲರು, ಉಪನ್ಯಾಸಕರ ಪದನಾಮಗಳನ್ನು ಈವರೆಗೆ ಬದಲಾವಣೆ ಮಾಡಿಲ್ಲ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕಾಗಿ ರೂಪಿಸಲಾಗಿರುವ ಕಾರ್ಯಪಡೆ ಅಧ್ಯಕ್ಷ ಮದನ್ ಗೋಪಾಲ್ ಅವರ ವರದಿಯ ನಂತರ ಪದನಾಮಗಳು, ಪದವಿಪೂರ್ವ ಶಿಕ್ಷಣದ ಸ್ವರೂಪ‍ ಬದಲಾಗಲಿವೆ ಎನ್ನುತ್ತವೆ ಶಿಕ್ಷಣ ಇಲಾಖೆಯ ಮೂಲಗಳು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ನಂತರ ರಾಜ್ಯದ ಪದವಿಪೂರ್ವ ಕಾಲೇಜುಗಳ ಸ್ವರೂಪ ಬದಲಾಗಲಿದೆ. ಕೇಂದ್ರದ ಶಿಕ್ಷಣ ಸಂಸ್ಥೆಗಳು, ಹಲವು ರಾಜ್ಯಗಳಲ್ಲಿ 11 ಮತ್ತು 12ನೇ ತರಗತಿಗಳನ್ನು ಹಿರಿಯ ಪ್ರೌಢಶಾಲೆ ಗಳೆಂದು ಈಗಾಗಲೇ ಪರಿಗಣಿಸಲಾಗುತ್ತಿದೆ. ಉಪನ್ಯಾಸಕರು ‘ಸ್ನಾತಕೋತ್ತರ ಪದವೀಧರ ಶಿಕ್ಷಕರಾಗಿ’ ಬದಲಾಗಲಿದ್ದಾರೆ. ಅವರಿಗೆ ಕನಿಷ್ಠ ಐದು ಬಡ್ತಿಗಳನ್ನು ನೀಡಲು, ಪ್ರತಿ ಹಂತದ ಶಿಕ್ಷಕರಿಗೂ ಅದೇ ನೀತಿ ಅನುಸರಿಸಲು, ಅಂಗನವಾಡಿಯಿಂದ ಉನ್ನತ ಶಿಕ್ಷಣದವರೆಗೂ ಶಿಕ್ಷಣ, ಶಿಕ್ಷಕ ವೃತ್ತಿಯ ಗೌರವ ಮರುಸ್ಥಾಪಿಸುವಂತಹ ಕ್ರಮಗಳನ್ನು ಕೈಗೊಳ್ಳಲು ಎನ್‌ಇಪಿ ಶಿಫಾರಸು ಮಾಡಿದೆ.

‘ವಿದ್ಯಾರ್ಥಿಗಳ ವಯಸ್ಸಿಗೆ ಅನುಗುಣವಾಗಿ ಗಳಿಸಿಕೊಳ್ಳಬೇಕಾದ ಕಲಿಯುವ ಫಲಗಳನ್ನು ದೊರಕಿಸುವುದು, ಶಿಕ್ಷಣದ ಸಾಮರ್ಥ್ಯಗಳು ಸಮಾನವಾಗಿ ಸಿಗುವಂತಹ ಅವಕಾಶಗಳನ್ನು ಕಲ್ಪಿಸುವುದು ಹೊಸ ಶಿಕ್ಷಣ ನೀತಿಯ ಆಶಯ. ಅಂಗನವಾಡಿಯಿಂದ ವಿಶ್ವವಿದ್ಯಾಲಯ ದವರೆಗೆ ಎಲ್ಲರೂ ತಮ್ಮ ಅಸ್ಮಿತೆಯನ್ನು ಶಿಕ್ಷಕರು ಎಂದು ಗುರುತಿಸಿಕೊಳ್ಳು ವಂತಾದರೆ ಬಹಳಷ್ಟು ಕೆಲಸ ಆತ್ಮಸಾಕ್ಷಿಯ ಭಾಗವಾಗುತ್ತದೆ’ ಎನ್ನುತ್ತಾರೆ ಶಿಕ್ಷಣ ತಜ್ಞ ಹರಿಪ್ರಸಾದ್.

ADVERTISEMENT

ವಿರೋಧ

ರಾಜ್ಯಸರ್ಕಾರ 1971–72ರಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಹುಟ್ಟುಹಾಕಿ ಎಸ್‌ಎಸ್‌ಎಲ್‌ಸಿ ಹಾಗೂ ಪದವಿಯ ಮಧ್ಯದಲ್ಲಿ ಎರಡು ವರ್ಷಗಳ ಕೋರ್ಸ್‌ ಆರಂಭಿಸಿತ್ತು. ಐದು ದಶಕಗಳಲ್ಲಿ ಪದವಿಪೂರ್ವ ಶಿಕ್ಷಣ ಸಾಕಷ್ಟು ಗುಣಾತ್ಮಕ, ರಚನಾತ್ಮಕ ಕಾರ್ಯಗಳನ್ನು ಮಾಡಿದೆ. ವಿದ್ಯಾರ್ಥಿಗಳ ಜೀವನದ ಮಹತ್ವದ ಘಟ್ಟ ಎಂದೇ ಭಾವಿಸುವ ಈ ಹಂತವನ್ನು ಉಪನ್ಯಾಸಕರು ಶ್ರಮವಹಿಸಿ ಕಟ್ಟಿದ್ದಾರೆ ಎನ್ನುತ್ತಾರೆ ಸಂಘದ ಅಧ್ಯಕ್ಷ ಎ.ಎಚ್‌.ನಿಂಗೇಗೌಡ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಈ ಹಂತವನ್ನೇ ಶಾಲಾ ಶಿಕ್ಷಣದಲ್ಲಿ ವಿಲೀನಗೊಳಿಸಲು ಶಿಫಾರಸು ಮಾಡಿರುವುದು ರಾಜ್ಯದ ಪಿಯು ಉಪನ್ಯಾಸಕ ರಲ್ಲಿ ತಲ್ಲಣ ಮೂಡಿಸಿದೆ. ಪದವಿ ಪೂರ್ವ ಕಾಲೇಜುಗಳನ್ನು ಪ್ರೌಢಶಾಲೆಯ ಒಳಗೆ ವಿಲೀನಗೊಳಿಸದೇ ಐದು ದಶಕಗಳ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕು ಎಂಬ ಧ್ವನಿ ಮೊಳಗಿಸುತ್ತಿದ್ದಾರೆ. 6ರಿಂದ 8ನೇ ತರಗತಿಗಳನ್ನು ಉನ್ನತೀಕರಿಸಿದ ಪ್ರೌಢಶಾಲಾ ಹಂತವೆಂದು ಪರಿಗಣಿಸುತ್ತಿರುವುದರಿಂದ 9 ಮತ್ತು 10ನೇ ತರಗತಿಗಳನ್ನು ಪದವಿಪೂರ್ವ ಶಿಕ್ಷಣದ ವ್ಯಾಪ್ತಿಗೆ ನೀಡಲು ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘ ಬೇಡಿಕೆ ಮಂಡಿಸಿದೆ ಎಂದು ನಿಂಗೇಗೌಡ ಹೇಳಿದ್ದಾರೆ.

‘ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ಕಾನೂನು ರೂಪಿಸುವ ಅಧಿಕಾರ ಹೊಂದಿವೆ. ಕೇಂದ್ರ ಸರ್ಕಾರ ರೂಪಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯವೂ ಪಾಲಿಸುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಮದನ್‌ಗೋಪಾಲ್‌ ಸಮಿತಿ ಅಸ್ತಿತ್ವಕ್ಕೆ ಬಂದು 6 ತಿಂಗಳಾದರೂ ಪದವಿಪೂರ್ವ ಶಿಕ್ಷಣದ ವಿಲೀನಕ್ಕೆ ಸಂಬಂಧಿಸಿದಂತೆ ಉಪನ್ಯಾಸಕರು, ಪೋಷಕರು, ವಿದ್ಯಾರ್ಥಿಗಳ ಅಹವಾಲು ಕೇಳಿಲ್ಲ. ಪದವಿಪೂರ್ವ ಶಿಕ್ಷಣ, ಉಪನ್ಯಾಸಕ ಪದನಾಮಗಳನ್ನು ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಕಾನೂನು ಹೋರಾಟದ ಜತೆಗೆ ಬೀದಿಗೂ ಇಳಿಯುತ್ತೇವೆ’ ಎನ್ನುತ್ತಾರೆ ನಿಂಗೇಗೌಡ.

‘ಇಲಾಖೆಯ ಸುಧಾರಣೆಗಾಗಿ ರಚಿಸಿದ್ದ ನಂಜುಂಡರಾಜೇ ಅರಸು, ಹರೀಶ್‌ ಗೌಡ, ಕುಮಾರನಾಯ್ಕ ಸಮಿತಿಗಳ ವರದಿಯನ್ನು ಅನುಷ್ಠಾನಗೊಳಿಸಬೇಕು. 9 ಮತ್ತು 10ನೇ ತರಗತಿಗಳನ್ನೂ ಪದವಿಪೂರ್ವ ಶಿಕ್ಷಣದಲ್ಲೇ ವಿಲೀನಗೊಳಿಸಿ, ಇಲಾಖೆಯ ಅಸ್ತಿತ್ವ ಉಳಿಸಬೇಕು. ಅದಕ್ಕಾಗಿ ನಾವೆಲ್ಲ 9 ಮತ್ತು 10ನೇ ತರಗತಿಗಳಿಗೂ ಪಾಠ ಮಾಡಲು ಸಿದ್ಧರಿದ್ದೇವೆ’ ಎನ್ನುತ್ತಾರೆ ಉಪನ್ಯಾಸಕ ಆರ್. ಗಿರೀಶ್‌.

ಸ್ಥಳೀಯ ವಿಷಯಗಳ ಬೋಧನೆಗಿಲ್ಲ ಧಕ್ಕೆ

ಎನ್‌ಇಪಿ ದೇಶದಾದ್ಯಂತ ಏಕ ರೀತಿಯ ಪಠ್ಯಕ್ರಮಕ್ಕೆ ಶಿಫಾರಸು ಮಾಡಿದೆ. ಏಕ ಪಠ್ಯಕ್ರಮ ಎನ್ನುವುದು ಸ್ಥಳೀಯತೆಯನ್ನು ಕಡೆಗಣಿಸುತ್ತದೆ ಎನ್ನುವ ತಪ್ಪು ಕಲ್ಪನೆ ಇದೆ. ಆಯಾ ರಾಜ್ಯದ ಸ್ಥಳೀಯ ಪರಂಪರೆ ಉಳಿಸಿಕೊಂಡೇ ಶಿಕ್ಷಣ ಸಾಗುತ್ತದೆ. ಒಂದು ನಿರ್ದಿಷ್ಟ ವಿಷಯವನ್ನು ಆ ವಯಸ್ಸಿಗೆ ಅನುಗುಣವಾಗಿ ಮಗು ಕಲಿಯುವ ಸಾಮರ್ಥ್ಯ ರೂಢಿಸುವುದೇ ಒಟ್ಟಾರೆ ಪಠ್ಯಕ್ರಮ ನಿಗದಿಯ ಉದ್ದೇಶ. ಅದರ ಸಾಕಾರ ಸ್ಥಳೀಯ ವಿಷಯಗಳಿಂದಲೇ ಸಾಧ್ಯ. ಉದಾ: ನಿಮ್ಮ ಭಾಗದಲ್ಲಿ ಅಭಿಮಾನಪಡುವ ರಾಜನ ಆಡಳಿತ ಕ್ರಮ ವಿವರಿಸಿ ಎಂಬ ಪ್ರಶ್ನೆ ಇಡೀ ದೇಶದ ಮಕ್ಕಳಿಗೆ ಕೊಟ್ಟರೆ, ಅವರು ತಮ್ಮದೇ ಭಾಗದ ರಾಜನ ಯಶಸ್ವಿ ಆಡಳಿತದ ಉತ್ತರ ಬರೆಯುತ್ತಾರೆ. ಉಳಿದಂತೆ ರಾಷ್ಟ್ರೀಯ ವಿಷಯಗಳು ಎಲ್ಲರಿಗೂ ಅನ್ವಯಾಗುತ್ತವೆ. ಇದು ಏಕರೀತಿಯ ಪರಿಕಲ್ಪನೆ ಎಂದು ವಿವರಿಸುತ್ತಾರೆಭಾರತ ಸರ್ಕಾರದ ಶಿಕ್ಷಣ ಮಂತ್ರಾಲಯದ ಎನ್‌ಎಸ್‌ಸಿ–ಟಿಎಸ್‌ಜಿ ಸಮಾಲೋಚಕ ಡಾ.ಜಿ.ವಿ.ಹರಿಪ್ರಸಾದ್‌.

ವಿಲೀನದ ಬಳಿಕವೂ ಬದಲಾಗದ ವ್ಯವಸ್ಥೆ

ಪದವಿಪೂರ್ವ ಕಾಲೇಜುಗಳನ್ನು ‘ಹಿರಿಯ ಪ್ರೌಢಶಾಲೆಗಳು’ ಎಂದು ಪರಿಗಣಿಸುವ ಮೊದಲು ಅದಕ್ಕೆ ಪೂರಕವಾದ ಕೆಲವು ಬದಲಾವಣೆಗಳನ್ನೂ ತರಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಒಳಗೆ ಪದವಿಪೂರ್ವ ಪರೀಕ್ಷೆ ವಿಭಾಗವನ್ನು ವಿಲೀನಗೊಳಿಸಲಾಗಿದೆ. ಆದರೆ, ಪರೀಕ್ಷೆ ಮತ್ತಿತರ ಕಾರ್ಯಗಳನ್ನು ನೋಡಿಕೊಳ್ಳುವ ಹಿಂದಿನ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಪ್ರೌಢಶಿಕ್ಷಣ ಹಾಗೂ ಪದವಿಪೂರ್ವ ಪರೀಕ್ಷೆಗಳನ್ನು ನಡೆಸುವ ಹೊಣೆಗಾರಿಕೆ ಇರುವ ಹೊಸ ಮಂಡಳಿಗೆ ಐಎಎಸ್‌ ದರ್ಜೆಯ ಅಧಿಕಾರಿ ಅಧ್ಯಕ್ಷರಾಗಿದ್ದಾರೆ. ಶಿಕ್ಷಣ ಇಲಾಖೆಯ ಹೇಳಿಕೆಯಂತೆ, ಎರಡೂ ಪರೀಕ್ಷಾ ವಿಭಾಗಗಳ ವಿಲೀನದಿಂದಾಗಿ ಪರೀಕ್ಷಾ ವಿಭಾಗಗಳ ಆಂತರಿಕ ರಚನೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆದರೆ, ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರ ಮೇಲಿನ ಪರೀಕ್ಷಾ ಹೊಣೆಗಾರಿಕೆ ಗಣನೀಯವಾಗಿ ತಗ್ಗಲಿದೆ. ವರ್ಷದ ಆರು ತಿಂಗಳು ವಾರ್ಷಿಕ, ಪೂರಕ ಪರೀಕ್ಷೆಗಳ ಪ್ರಕ್ರಿಯೆಗೆ ಸಮಯ ವ್ಯರ್ಥವಾಗುತ್ತಿತ್ತು. ಮಂಡಳಿಯ ಅಸ್ತಿತ್ವದಿಂದಾಗಿ ನಿರ್ದೇಶಕರ ಹೊಣೆಗಾರಿಕೆ ಅಧ್ಯಕ್ಷರ ಹೆಗಲಿಗೆ ವರ್ಗವಾಗಿದೆ. ಮುಂದಿನ ದಿನಗಳಲ್ಲಿ ಅವರು ಉತ್ತಮ ಆಡಳಿತ, ಶಿಕ್ಷಣದ ಗುಣಮಟ್ಟ ಹೆಚ್ಚಳದ ಕಡೆಗೆ ಗಮನ ಹರಿಸಲು ಅವಕಾಶವಾಗಲಿದೆ.

ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು (ಉಪಾಧ್ಯಕ್ಷ-2) ಮಂಡಳಿಯ ವಿಶೇಷ ಆಹ್ವಾನಿತರಾಗಿರುತ್ತಾರೆ. ಪರೀಕ್ಷಾ ವಿಭಾಗದ ನಿರ್ದೇಶಕರೇ (ಕಾರ್ಯದರ್ಶಿ) ಮುಂದೆಯೂ ಪರೀಕ್ಷೆಗಳ ಮೇಲ್ವಿಚಾರಣೆ ನೋಡಿಕೊಳ್ಳುವರು. ಪ್ರಶ್ನೆಪತ್ರಿಕೆ ಸಿದ್ಧಪಡಿಸುವುದು, ವಿತರಣೆ, ಗೋಪ್ಯತೆ ಕಾಪಾಡುವ ವಿಚಾರದಲ್ಲಿ ಆಯಾ ಪರೀಕ್ಷೆಯ ಕಾರ್ಯದರ್ಶಿಗೆ ವಿಶೇಷಾಧಿಕಾರ ನೀಡಲಾಗಿದೆ. ಈ ವಿಷಯದಲ್ಲಿ ಮಂಡಳಿಯ ಇತರೆ ಯಾರಿಗೂ ಮಧ್ಯಪ್ರವೇಶಿಸಲು ಅವಕಾಶ ಇರುವುದಿಲ್ಲ.

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿಯಮಗಳಿಗೆ ಸರ್ಕಾರ ತಂದ ತಿದ್ದುಪಡಿಗೆ ಇದೇ ವರ್ಷದ
ಅಕ್ಟೋಬರ್‌ನಲ್ಲಿ ರಾಜ್ಯಪಾಲರ ಒಪ್ಪಿಗೆ ದೊರೆತಿದೆ. ರಾಜ್ಯಪತ್ರದಲ್ಲೂ ಪ್ರಕಟಿಸಲಾಗಿದೆ.

ಪಿಯು ಪರೀಕ್ಷಾ ವಿಭಾಗದ ಹುದ್ದೆಗಳು

l ಅಧ್ಯಕ್ಷ (ಹೊಸ ಹುದ್ದೆ– ಐಎಎಸ್‌) l ಉಪಾಧ್ಯಕ್ಷ–2 (ಹಿಂದಿನ ಇಲಾಖಾ ನಿರ್ದೇಶಕ ಸ್ಥಾನ –ಐಎಎಸ್‌)

l ಕಾರ್ಯದರ್ಶಿ (ಹಿಂದಿನ ಪರೀಕ್ಷಾ ನಿರ್ದೇಶಕ–ಕೆಎಎಸ್‌) l ಜಂಟಿ ನಿರ್ದೇಶಕ l ಉಪ ನಿರ್ದೇಶಕ l ಸಹಾಯ ನಿರ್ದೇಶಕರು (ಮೂರು ಸ್ಥಾನ) l ಪರೀಕ್ಷಾ ವಿಭಾಗಾಧಿಕಾರಿಗಳು (ನಾಲ್ಕು ಸ್ಥಾನ) l ಎಸ್‌ಡಿಎ, ಎಫ್‌ಡಿಎ (ಎಂಟು ಸ್ಥಾನ)

ಕರ್ನಾಟಕದ ಪದವಿಪೂರ್ವ ಶಿಕ್ಷಣ ಗುಣಮಟ್ಟದಿಂದಾಗಿ ದೇಶದಲ್ಲೇ ಹೆಸರಾಗಿದೆ. ಅಸ್ಮಿತೆ ಉಳಿಸಿಕೊಳ್ಳಲು ಹೋರಾಟ ನಡೆಸಲು ಸಿದ್ಧ.

ಎ.ಎಚ್‌.ನಿಂಗೇಗೌಡ, ಅಧ್ಯಕ್ಷ, ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕರ ಸಂಘ

ಶಿಕ್ಷಕರ ಗೌರವ ಮರು ಸ್ಥಾಪಿತವಾಗಬೇಕು ಎಂಬುದು ಎನ್‌ಇಪಿಯ ಪ್ರಮುಖ ಶಿಫಾರಸು. ಎಲ್ಲಾ ಶಿಕ್ಷಕರು ಅಂತರ್ ಸ್ತರಗಳಿಲ್ಲದೇ ಒಂದಾಗುವುದು ಭವಿಷ್ಯ ರೂಪಿಸಲು ಸಹಾಯಕ

ಡಾ.ಜಿ.ವಿ.ಹರಿಪ್ರಸಾದ್‌, ಎನ್‌ಎಸ್‌ಸಿ–ಟಿಎಸ್‌ಜಿ ಸಮಾಲೋಚಕ, ಶಿಕ್ಷಣ ಮಂತ್ರಾಲಯ, ಭಾರತ ಸರ್ಕಾರ

ವಿಲೀನದಿಂದ ರಾಜ್ಯ ಪಠ್ಯ, ಸಿಬಿಎಸ್‌ಇ, ಐಸಿಎಸ್‌ಇ ಮಕ್ಕಳ ನಡುವಣ ಕಲಿಕಾ ಭಿನ್ನತೆ ಇಲ್ಲವಾಗಲಿದೆ. ನೀಟ್‌ ಸೇರಿದಂತೆ ಎಲ್ಲ ಪರೀಕ್ಷೆಗಳನ್ನೂ ಎದುರಿಸುವ ಸಾಮರ್ಥ್ಯ ಹೆಚ್ಚಲಿದೆ‌.

ಶೋಭಾ ಸುರೇಶ್, ಪೋಷಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.