ADVERTISEMENT

Pulse Polio | 60.41 ಲಕ್ಷ ಮಕ್ಕಳಿಗೆ ಪೋಲಿಯೊ ಹನಿ

ಶೇ 96 ರಷ್ಟು ಗುರಿ ಸಾಧಿಸಿದ ಆರೋಗ್ಯ ಇಲಾಖೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2024, 16:16 IST
Last Updated 3 ಮಾರ್ಚ್ 2024, 16:16 IST
3.97 ಲಕ್ಷ ಮಕ್ಕಳಿಗೆ ಪೋಲಿಯೊ ಹನಿ
3.97 ಲಕ್ಷ ಮಕ್ಕಳಿಗೆ ಪೋಲಿಯೊ ಹನಿ   

ಬೆಂಗಳೂರು: ಆರೋಗ್ಯ ಇಲಾಖೆಯು ರಾಜ್ಯದಾದ್ಯಂತ ಭಾನುವಾರ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೊ ಲಸಿಕೆ ವಿತರಣೆ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಿಗದಿಪಡಿಸಲಾಗಿದ್ದ 5 ವರ್ಷದೊಳಗಿನ ಮಕ್ಕಳಲ್ಲಿ 60.41 ಲಕ್ಷ ಮಕ್ಕಳು ಪೋಲಿಯೊ ಹನಿ ಹಾಕಿಸಿಕೊಂಡಿದ್ದಾರೆ.

ಇಲಾಖೆಯು ಈ ಬಾರಿ 62.85 ಲಕ್ಷ ಮಕ್ಕಳಿಗೆ ಲಸಿಕೆ ವಿತರಿಸುವ ಗುರಿ ಹಾಕಿಕೊಂಡಿತ್ತು. ಶೇ 96 ರಷ್ಟು ಗುರಿ ತಲುಪಿದ್ದು, ಬಿಟ್ಟು ಹೋದ ಹಾಗೂ ಅಭಿಯಾನದಿಂದ ಹೊರಗುಳಿದ ಮಕ್ಕಳಿಗೆ ಇದೇ 6ರವರೆಗೆ ಮನೆ ಮನೆಗೆ ತೆರಳಿ ಪೋಲಿಯೊ ಹನಿ ಹಾಕಲಾಗುತ್ತದೆ. ಆರೋಗ್ಯ ಕೇಂದ್ರಗಳ ಜತೆಗೆ ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ, ಮೆಟ್ರೊ ನಿಲ್ದಾಣ ಸೇರಿದಂತೆ ವಿವಿಧ ಸಾರ್ವಜನಿಕ ಪ್ರದೇಶಗಳಲ್ಲಿಯೂ ಲಸಿಕೆ ವಿತರಣೆಗೆ ವ್ಯವಸ್ಥೆ ಮಾಡಲಾಗಿತ್ತು. ಈ ಅಭಿಯಾನದಲ್ಲಿ ಲಸಿಕೆ ವಿತರಣೆಗೆ 1.11 ಲಕ್ಷ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿತ್ತು.

ಪೋಲಿಯೊ ಲಸಿಕೆ ವಿತರಣೆಯಲ್ಲಿ ವಿಜಯನಗರ ಜಿಲ್ಲೆ ಅಗ್ರ ಸ್ಥಾನ ಪಡೆದುಕೊಂಡಿದೆ. ಅಲ್ಲಿ 1.33 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ ನೀಡಲಾಗಿತ್ತು. 1.43 ಲಕ್ಷ ಮಕ್ಕಳಿಗೆ ಲಸಿಕೆ ಒದಗಿಸಲಾಗಿದ್ದು, ಶೇ 108 ಸಾಧನೆಯಾಗಿದೆ. ಮಂಡ್ಯ, ಚಿಕ್ಕಮಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯೂ ಶೇ 100 ಹಾಗೂ ಅದಕ್ಕಿಂತ ಹೆಚ್ಚಿನ ಸಾಧನೆ ಮಾಡಿದೆ. ಕೋಲಾರ ಕಡೆಯ ಸ್ಥಾನದಲ್ಲಿದ್ದು, ಅಲ್ಲಿ 1.61 ಲಕ್ಷ ಮಕ್ಕಳಿಗೆ ಪೋಲಿಯೊ ಹನಿ ಹಾಕುವ ಗುರಿ ನೀಡಲಾಗಿತ್ತು. ಆದರೆ, 1.43 ಲಕ್ಷ ಮಕ್ಕಳಿಗೆ ಲಸಿಕೆ ಒದಗಿಸಲಾಗಿದ್ದು, ಶೇ 92 ರಷ್ಟು ಗುರಿ ತಲುಪಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 10.61 ಲಕ್ಷ ಮಕ್ಕಳಿಗೆ (ಶೇ 95) ಪೋಲಿಯೊ ಹನಿ ಹಾಕಲಾಗಿದೆ.  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.