ADVERTISEMENT

ಅಪ್ಪು ಅಭಿಮಾನದಲ್ಲಿ ‘ಪುನೀತ’ರಾದ ಜನ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2022, 21:00 IST
Last Updated 29 ಅಕ್ಟೋಬರ್ 2022, 21:00 IST
ಶನಿವಾರ ನಗರದ ಕಂಠೀರವ ಸ್ಟುಡಿಯೊ ಆವರಣದಲ್ಲಿ ಇರುವ ಪುನೀತ್ ರಾಜ್‌ಕುಮಾರ್ ಸಮಾಧಿಯಲ್ಲಿ ಕಲ್ಲಂಗಡಿ ಹಣ್ಣಿನಲ್ಲಿ ಪುನೀತ್ ರಾಜ್‌ಕುಮಾರ್ ಚಿತ್ರ ಬಿಡಿಸಿರುವ ದೃಶ್ಯ  –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಶನಿವಾರ ನಗರದ ಕಂಠೀರವ ಸ್ಟುಡಿಯೊ ಆವರಣದಲ್ಲಿ ಇರುವ ಪುನೀತ್ ರಾಜ್‌ಕುಮಾರ್ ಸಮಾಧಿಯಲ್ಲಿ ಕಲ್ಲಂಗಡಿ ಹಣ್ಣಿನಲ್ಲಿ ಪುನೀತ್ ರಾಜ್‌ಕುಮಾರ್ ಚಿತ್ರ ಬಿಡಿಸಿರುವ ದೃಶ್ಯ –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌   

ಬೆಂಗಳೂರು: ‘ಅಭಿಮಾನಿಗಳೇ ನಮ್ಮನೆ ದೇವ್ರು’ ಎಂಬ ಅಪ್ಪು ಅವರ ‘ದೊಡ್ಮನೆ ಹುಡುಗ’ ಚಿತ್ರದ ಹಾಡನ್ನು ಪದೇ ಪದೇ ನೆನಪಿಸುವಂತೆ ಮಾಡಿತು ಶನಿವಾರ ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ಸಮಾಧಿ ಪ್ರದೇಶದ ದೃಶ್ಯ.

ಒಂದೆಡೆ ಗಾಢ ಮೌನ, ತುಂಬಿದ ಕಣ್ಣಾಲಿಗಳು. ಮತ್ತೊಂದೆಡೆ ಅವರ ಹಾಡುಗಳ ಝಲಕ್‌. ಅದಕ್ಕೆ ಕನ್ನಡ ಧ್ವಜ, ಪುನೀತ್‌ ಭಾವಚಿತ್ರ ಹಿಡಿದು ಹೆಜ್ಜೆ ಹಾಕಿದ ಅಭಿಮಾನಿಗಳು. ತರಕಾರಿ ಕೆತ್ತನೆಗಳಲ್ಲಿ, ಬೆಣ್ಣೆ ಪ್ರತಿಮೆಯಲ್ಲಿ, ಅಕ್ರಿಲಿಕ್‌ ಕೃತಿಗಳಲ್ಲಿ ಎಲ್ಲೆಲ್ಲೂ ರಾರಾಜಿಸಿದ್ದು ಅಪ್ಪು.

ಹೀಗೆ ಪುನೀತ್‌ ನಿಧನರಾದ ದಿನ ಅದೆಷ್ಟು ಭಾವತೀವ್ರತೆಯಿತ್ತೋ ಅದೇ ಭಾವ ಇಂದೂ ಮನೆ ಮಾಡಿತ್ತು. ಅಪ್ಪು ಹೆಸರಿನ ಸ್ಮರಣಿಕೆಗಳು, ಭಾವಚಿತ್ರ, ಟೀಷರ್ಟ್‌ಗಳು ಭರ್ಜರಿಯಾಗಿ ಮಾರಾಟವಾದವು. ಶುಚಿರುಚಿಯಾದ ಭೋಜನ ಅಭಿಮಾನಿಗಳ ಹೊಟ್ಟೆ ತಣಿಸಿತು. ಅಷ್ಟೊಂದು ಜನಜಾತ್ರೆಯೇ ಸೇರಿದ್ದರೂ ಎಲ್ಲ ಕಡೆಯೂ ಬಹುತೇಕರು ಸ್ವಯಂಪ್ರೇರಿತರಾಗಿ ಶಿಸ್ತುಬದ್ಧತೆ ತೋರಿದರು.

ADVERTISEMENT

ರೂಪಾಲಿ ಎಂಬ ಕಲಾವಿದೆ ಪುನೀತ್‌ ಭಾವಚಿತ್ರದ ಕಲಾಕೃತಿಯನ್ನು ಅಶ್ವಿನಿ ಅವರಿಗೆ ನೀಡಿದರು. ನಟ ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಪುನೀತ್‌ ಅವರನ್ನು ಸ್ಮರಿಸಿ ಮಾತನಾಡಿದರು.

ಚಿತ್ರರಂಗದ ಪ್ರಮುಖ ಗಣ್ಯರು, ನಿರ್ಮಾಣ ಸಂಸ್ಥೆಗಳ ಮುಖ್ಯಸ್ಥರು, ರಾಜಕಾರಣಿಗಳು ಪುನೀತ್‌ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಸ್ಮರಿಸಿದ್ದಾರೆ.

ಅಶ್ವಿನಿ ಪತ್ರ

ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿ ಪುನೀತ್‌ ಪತ್ನಿ ಅಶ್ವಿನಿ ಅವರು ಟ್ವಿಟರ್‌ನಲ್ಲಿ ಪತ್ರವೊಂದನ್ನು ಹಂಚಿಕೊಂಡಿದ್ದಾರೆ. ಅದು ಹೀಗಿದೆ:

‘ನೆನಪಿನ ಸಾಗರದಲ್ಲಿ...ಅಪ್ಪು ಅವರು ನಮ್ಮ ನೆನಪುಗಳಲ್ಲಿ ಮಾತ್ರವಲ್ಲದೆ, ನಮ್ಮ ಆಲೋಚನೆಗಳು ಹಾಗೂ ನಾವು ಮಾಡುವ ಸತ್ಕಾರ್ಯಗಳಲ್ಲಿಯೂ ನಮ್ಮ ನಡುವೆ ಸದಾ ಜೀವಂತವಾಗಿದ್ದಾರೆ.

ಅವರ ಕನಸು ಮತ್ತು ಮೌಲ್ಯಗಳನ್ನು ಜೀವಂತವಾಗಿಡಲು ನೂರಾರು ಕುಟುಂಬಗಳ ಸದಸ್ಯರು, ಅವರ ಸಾವಿರಾರು ಸ್ನೇಹಿತರು ಹಾಗೂ ಕೋಟ್ಯಂತರ ಅಭಿಮಾನಿಗಳಿಂದ ನಾನು ಪಡೆದ ಬೆಂಬಲದ ಶಕ್ತಿಯೇ ನನಗೆ ದಾರಿ ಮಾಡಿಕೊಟ್ಟಿದೆ. ಅಪ್ಪು ಅವರ ಮೇಲೆ ನಿಮ್ಮೆಲ್ಲರಿಗೆ ಇರುವ ಪ್ರೀತಿ ಮತ್ತು ಗೌರವದಿಂದ, ಸದಾ ಕಾಲ ಅವರನ್ನು ಜೀವಂತವಾಗಿರಿಸಿದ್ದಕ್ಕಾಗಿ ಎಲ್ಲರಿಗೂ ನನ್ನ ನಮನಗಳು’.

ಪುನೀತ್‌ ಭಾವಚಿತ್ರ ಹಿಡಿದ ಪುಟಾಣಿ



ಪಠ್ಯದಲ್ಲಿ ಪುನೀತ್‌?

ನಟ ಪುನೀತ್ ಅವರ ಜೀವನ ಸಾಧನೆಯನ್ನು ಶಾಲಾ ಪಠ್ಯದಲ್ಲಿ ಸೇರಿಸುವ ಬಗ್ಗೆ ಕಂದಾಯ ಸಚಿವ ಆರ್. ಅಶೋಕ ಪ್ರತಿಕ್ರಿಯಿಸಿದ್ದು, ‘ಈ ಬಗ್ಗೆ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರು ತೀರ್ಮಾನ ತೆಗೆದುಕೊಳ್ಳಲಿ ದ್ದಾರೆ. ಕೆಲವರ ಜೀವನ ಸಾಧನೆ ಸೇರಿಸಬೇಕು ಅಂದುಕೊಂಡಾಗ ಹಲವು ವಿಘ್ನ ಬರುತ್ತವೆ. ಆದರೆ, ಪುನೀತ್ ಅಂಥವರಿಗೆ ಆ ರೀತಿ ಯಾವುದೇ ಅಡ್ಡಿ ಬರಲಾರದು. ಮುಂದಿನ ವರ್ಷ ಪರಿಶೀಲನೆ ಮಾಡಿ ಸರ್ಕಾರ ತೀರ್ಮಾನಿಸಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.